ಗಲ್ಫ್ ದೇಶಗಳ ವಿಮಾನಯಾನ ದರವನ್ನು ಕೈಗೆಟುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಒಕ್ಕೂಟ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬರೆದ ಪತ್ರದಲ್ಲಿ, “ಕೊರೊನಾ ಸಾಂಕ್ರಮಿಕದ ಸಮಯದಲ್ಲಿ ಅತೀ ಹೆಚ್ಚು ಪರಿಣಾಮ ಬೀರಿದ ವಿಭಾಗ ಅನಿವಾಸಿ ಭಾರತೀಯರಾಗಿದ್ದಾರೆ. ಸಾಂಕ್ರಾಮಿಕದ ಮೊದಲ ಲಾಕ್‌ಡೌನ್ ಸಮಯದಲ್ಲಿ ದೇಶಕ್ಕೆ ಬಂದ ಅವರು, ನಂತರ ಯಾವುದೆ ಉದ್ಯೋಗವಿಲ್ಲದೆ ಇಲ್ಲಿ ಇರಬೇಕಾಯಿತು” ಎಂದು ಹೇಳಿದ್ದಾರೆ.
ಗಲ್ಫ್ ದೇಶಗಳಲ್ಲಿ ಉದ್ಯೋಗದಲ್ಲಿರುವವರಿಗೆ ವಿಮಾನದ ಟಿಕೆಟ್‌ಗಳನ್ನು ಕೈಗೆಟುಕುವಂತೆ ಮಾಡಲು ಸಚಿವರು “ತಕ್ಷಣದ ಮಧ್ಯಸ್ಥಿಕೆ” ವಹಿಸಬೇಕು ಎಂದು ಪಿಣರಾಯಿ ಕೋರಿದ್ದಾರೆ. ವಿವಿಧ ವಿಮಾನ ಮಾರ್ಗಗಳು ಶೀಘ್ರದಲ್ಲೇ ತೆರೆಯುತ್ತಿರುವುದರಿಂದ ಜನರು ಗಲ್ಫ್ ದೇಶಗಳಿಗೆ ಮರಳಲು ಉತ್ಸುಕರಾಗಿದ್ದಾರೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್
ಕಳೆದ ಒಂದು ವರ್ಷದಿಂದ ನಿರುದ್ಯೋಗಿಗಳಾಗಿರುವ ಅನೇಕರಿಗೆ ವಿಮಾನ ಪ್ರಯಾಣದ ದರಗಳನ್ನು ಭರಿಸಲು ಕಷ್ಟವಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚು ಸಂಕಷ್ಟ ಅನುಭವಿಸಿದವರಲ್ಲಿ ಕೌಶಲ್ಯರಹಿತ ಮತ್ತು ಅರೆಕೌಶಲ್ಯ ಹೊಂದಿರುವ ಅನಿವಾಸಿ ಕಾರ್ಮಿಕರಾಗಿದ್ದಾರೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಸಾಂಕ್ರಮಿದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರು ತಮ್ಮ ಜೀವನೋಪಾಯವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವುದರಿಂದ ಸಚಿವರು ಅದಕ್ಕೆ ಬೆಂಬಲ ನೀಡಬೇಕು ಎಂದು ಪಿಣರಾಯಿ ವಿಜಯನ್ ಪತ್ರದಲ್ಲಿ ಸಿಂದಿಯಾ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.
ಹೆಚ್ಚಿನ ಜನರು ಕೈಗೆಟುಕುವ ದರದಲ್ಲಿ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾದಾಗ ವಿದೇಶಿ ವಿನಿಮಯದ ಮೂಲಕ ಭಾರತದ ಬೊಕ್ಕಸಕ್ಕೆ ಹೆಚ್ಚಿನ ಹಣ ಬರುತ್ತದೆ ಎಂದು ಅವರು ಹೇಳಿದ್ದು, ಇದು ದೇಶದ ಆರ್ಥಿಕ ಚೇತರಿಕೆಯನ್ನು ಸುಧಾರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೆಂಟರ್ ಫಾರ್ ಇಂಡಿಯನ್ ಮೈಗ್ರಂಟ್ ಸ್ಟಡೀಸ್ (ಸಿಐಎಂಎಸ್) ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಅನೇಕ ಅನಿವಾಸಿ ಭಾರತೀಯರು ತಮ್ಮ ಉದ್ಯೋಗದಾತರಿಂದ ಬರಬೇಕಿರುವ ಬಾಕಿ ಹಣವನ್ನು ಪಡೆದಿಲ್ಲ ಎಂದು ಬಹಿರಂಗಪಡಿಸಿದೆ. ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗವನ್ನು ಕಳೆದುಕೊಂಡು ಸುಮಾರು 11 ಲಕ್ಷ ಜನರು ಕೇರಳಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೊರೊನಾ ಆರ್ಥಿಕ ಹಿಂಜರಿತ: 77,350 ಉದ್ಯೋಗ ಸೃಷ್ಟಿ; 100 ದಿನಗಳ ಕ್ರಿಯಾ ಯೋಜನೆ ಘೋಷಿಸಿದ ಪಿಣರಾಯಿ ಸರ್ಕಾರ


