ತೆಲಂಗಾಣದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರೆ, ತಮ್ಮ ಕರೀಂನಗರ ಲೋಕಸಭಾ ಕ್ಷೇತ್ರದ ಗ್ರಾಮಗಳಿಗೆ ತಲಾ 10 ಲಕ್ಷ ರೂ.ಗಳ ಹಣಕಾಸು ನೆರವು ನೀಡುವುದಾಗಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಮಂಗಳವಾರ (ನವೆಂಬರ್ 25) ಹೇಳಿದ್ದಾರೆ.
ಸಂಸದರ ನಿಧಿ, ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಹಣ ಲಭ್ಯವಿದೆ ಎಂದು ಬಂಡಿ ಸಂಜಯ್ ತಿಳಿಸಿದ್ದಾರೆ. ಈ ಯೋಜನೆಯಡಿಯಲ್ಲಿ, ಪ್ರತಿಯೊಬ್ಬ ಸಂಸದರು ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ವರ್ಷಕ್ಕೆ 5 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಶಿಫಾರಸು ಮಾಡುವ ಹಕ್ಕನ್ನು ಹೊಂದಿರುತ್ತಾರೆ.
ಸಿಎಸ್ಆರ್ ನಿಧಿಗಳ ಮೂಲಕ ನಾವು ಕೋಟ್ಯಂತರ ರೂಪಾಯಿಗಳನ್ನು ಹೇಗೆ ಗಳಿಸಿದ್ದೇವೆ ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆಯನ್ನು ಸುಧಾರಿಸುವಲ್ಲಿ ಹೇಗೆ ಹೂಡಿಕೆ ಮಾಡಿದ್ದೇವೆ ಎಂದು ನಿಮಗೆ ಈಗಾಗಲೇ ಗೊತ್ತಿದೆ ಎಂದು ಬಂಡಿ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಕೇಂದ್ರ ಸಚಿವನಾಗಿ ಪಂಚಾಯತ್ ಅಭಿವೃದ್ಧಿಯನ್ನು ಬಲಪಡಿಸಲು ನಾನು ಇನ್ನೂ ಹೆಚ್ಚಿನ ಕೇಂದ್ರ ನಿಧಿಗಳನ್ನು ತರುತ್ತೇನೆ ಎಂದಿದ್ದಾರೆ.
ಗ್ರಾಮಗಳ ಅಭಿವೃದ್ಧಿಗಾಗಿ ನಾನು ನೇರವಾಗಿ 10 ಲಕ್ಷ ರೂಪಾಯಿ ನೀಡುತ್ತೇನೆ. ಇದರಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ, ಯಾವುದೇ ನೆಪ ಹೇಳುವುದಿಲ್ಲ ಎಂದು ಬಿಜೆಪಿ ನಾಯಕ ಭರವಸೆ ನೀಡಿದ್ದಾರೆ.
ಡಿಸೆಂಬರ್ ಮಧ್ಯದಲ್ಲಿ ತೆಲಂಗಾಣದಲ್ಲಿ ಪಂಚಾಯತ್ ಚುನಾವಣೆ ನಡೆಯಲಿದೆ.
ತೆಲಂಗಾಣದ ಈ ಹಿಂದಿನ ಆಡಳಿತ ಪಕ್ಷ ಬಿಆರ್‌ಎಸ್ ಸರ್ವಾನುಮತದಿಂದ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಂಚಾಯತ್‌ಗಳಿಗೆ 5 ಲಕ್ಷ ರೂ.ಗಳ ಭರವಸೆ ನೀಡಿತ್ತು ಎಂದು ಬಂಡಿ ಸಂಜಯ್ ನೆನಪಿಸಿದ್ದಾರೆ.
ಕರೀಂನಗರ ಲೋಕಸಭಾ ಕ್ಷೇತ್ರ ಪ್ರದೇಶದ ಸುಮಾರು 70 ಹಳ್ಳಿಗಳು ಬಿಆರ್‌ಎಸ್ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದವು. ಆದರೆ, ಅವರ ಸರ್ಕಾರ ಬಂದು ಐದು ವರ್ಷಗಳ ನಂತರವೂ ಕೆಸಿಆರ್ ಸರ್ಕಾರ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿರಲಿಲ್ಲ ಎಂದಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ಇದೇ ರೀತಿಯ ಭರವಸೆಗಳನ್ನು ನೀಡಿತ್ತು. ಸರ್ವಾನುಮತದ ಆಯ್ಕೆಯ ಹೆಸರಿನಲ್ಲಿ ಜನರನ್ನು ವಂಚಿಸಿದೆ ಎಂದು ಬಂಡಿ ಸಂಜಯ್ ದೂರಿದ್ದಾರೆ.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ಅನ್ನು ನಂಬಿದವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದರು. ಎರಡೂ ಪಕ್ಷಗಳು ಈಗ ಅದೇ ವಂಚನೆಯನ್ನು ಪುನರಾವರ್ತಿಸಲು ತಯಾರಿ ನಡೆಸುತ್ತಿವೆ. ಬಿಜೆಪಿ ಮಾತ್ರ ಕೊಟ್ಟ ಭರವಸೆಯಂತೆ ಹಣ ತರಲಿದೆ. ಕಾಂಗ್ರೆಸ್ ಅಥವಾ ಬಿಆರ್‌ಎಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದರೆ, ಹೊಸ ನಿಧಿಗಳು ಬರುವುದಿಲ್ಲ ಮತ್ತು ಕೇಂದ್ರದ ನಿಧಿಗಳು ಕೂಡ ಬೇರೆಡೆಗೆ ಹೋಗಬಹುದು. ಆದ್ದರಿಂದ ಅವರ ತಂತ್ರ, ಪ್ರಚೋದನೆಗಳಿಗೆ ಬಲಿಯಾಗಬೇಡಿ ಎಂದು ಬಂಡಿ ಸಂಜಯ್ ಹೇಳಿದ್ದಾರೆ.
ಡಿಸೆಂಬರ್ 2ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮಾತ್ರ ಈ ಪ್ರದೇಶದ ಅಭಿವೃದ್ದಿಗೆ ಹಣ ಸಿಗಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶುಕ್ರವಾರ (ನವೆಂಬರ್ 21) ಮಾಲೆಗಾಂವ್‌ನಲ್ಲಿ ಮತದಾರರಿಗೆ ಹೇಳಿದ್ದರು. ಈ ಬೆನ್ನಲ್ಲೇ ತೆಲಂಗಾಣದ ಬಿಜೆಪಿ ನಾಯಕ ಅದೇ ರೀತಿಯ ಭರವಸೆ ನೀಡಿದ್ದಾರೆ.


