‘ಬಾಬರಿ ಮಸೀದಿ ನಿರ್ಮಾಣಕ್ಕೆ ನೆಹರು ಸಾರ್ವಜನಿಕ ಹಣ ಬಳಸಿದ್ದರು’ ಎಂದಿದ್ದ ರಕ್ಷಣಾ ಸಚಿವರು
ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಪಟೇಲ್ ಅವರ ಡೈರಿ ನಮೂದುಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ. ಸಿಂಗ್ ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆ ರಮೇಶ್ ಅವರು ಸಂಸತ್ತಿನ ಮಕರ ದ್ವಾರ ಪ್ರವೇಶದ್ವಾರದಲ್ಲಿ ಸಚಿವರಿಗೆ ಡೈರಿಯ ಗುಜರಾತಿ ಆವೃತ್ತಿಯನ್ನು ನೀಡಿದ್ದಾರೆ.
ಜವಾಹರಲಾಲ್ ನೆಹರು ಅವರು ಬಾಬರಿ ಮಸೀದಿ ನಿರ್ಮಿಸಲು ಸಾರ್ವಜನಿಕ ಹಣವನ್ನು ಬಳಸಲು ಪ್ರಯತ್ನಿಸಿದರು, ಪಟೇಲ್ ಅವರನ್ನು ತಡೆದರು ಎಂದು ರಾಜನಾಥ್ ಸಿಂಗ್ ಇತ್ತೀಚೆಗೆ ಗುಜರಾತ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ಸಿಂಗ್ ಅವರ ಹೇಳಿಕೆ ಮಣಿಬೆನ್ ಪಟೇಲ್ ಅವರ ಡೈರಿಯನ್ನು ಆಧರಿಸಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ವರದಿಗಾರರಿಗೆ ತಿಳಿಸಿದ್ದಾರೆ. ಡೈರಿಯಲ್ಲಿ ಅಂತಹ ಯಾವುದೇ ಉಲ್ಲೇಖವಿಲ್ಲ ಎಂದು ರಮೇಶ್ ಹೇಳಿ, ಸಚಿವರು ಅದನ್ನು ಓದಬೇಕೆಂದು ಒತ್ತಾಯಿಸಿದರು.
ರಾಜನಾಥ್ ಸಿಂಗ್ ಅವರು ತನಗೆ ಗುಜರಾತಿ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಅವರು ಈಗಾಗಲೇ ಇಂಗ್ಲಿಷ್ ಅನುವಾದದ ಪ್ರತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಈ ಹಿಂದೆ ಜೈರಾಮ್ ರಮೇಶ್ ಅವರು ಮಣಿಬೆನ್ ಪಟೇಲ್ ಅವರ ಡೈರಿಯ ಆಯ್ದ ಭಾಗಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ರಾಜನಾಥ್ ಸಿಂಗ್ ಅವರು ಸುಳ್ಳು ಆರೋಪ ಮಾಡಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಂಬಂಧವನ್ನು ಬಲಪಡಿಸಲು ಸಚಿವರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ರಾಜನಾಥ್ ಸಿಂಗ್ ಅವರ ಹೇಳಿಕೆಗಳನ್ನು ಸಾರ್ವಜನಿಕವಾಗಿ ಟೀಕಿಸಿದರು. ಆಡಳಿತ ಪಕ್ಷವು ನೆಹರೂ ಅವರ ಸ್ಮರಣೆಯನ್ನು ಅಳಿಸಲು ಮಾತ್ರವಲ್ಲದೆ ದೇಶದ ಅಡಿಪಾಯದ ಮೌಲ್ಯಗಳನ್ನು ದುರ್ಬಲಗೊಳಿಸುವ ಜೊತೆಗೆ ಅವರ ಜುರಿತು ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.


