ಹೊಸದಿಲ್ಲಿ: ಉತ್ತರಪ್ರದೇಶದ ಉನ್ನವೋದಲ್ಲಿ 2017ರಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ನಿಗೆ ವೈದ್ಯಕೀಯ ನೆಲೆಯಲ್ಲಿ 2 ವಾರಗಳ ಕಾಲ ದಿಲ್ಲಿ ಹೈಕೋರ್ಟ್ ಇಂದು (ಗುರುವಾರ) ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಅವರ ನೇತೃತ್ವದ ಪೀಠವು ಈ ಮಧ್ಯಂತರ ಜಾಮೀನನ್ನು ಮಂಜೂರುಗೊಳಿಸಿ, ಸೆಂಗಾರ್ ಅವರು ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಗೆ ದಾಖಲಾಗಬೇಕು ಮತ್ತು ಬಿಡುಗಡೆಯಾದ ನಂತರ ರಾಜಧಾನಿಯಲ್ಲೇ ಇರಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಇತಿಹಾಸ ಮತ್ತು ಅರ್ಜಿದಾರರ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ, ಅರ್ಜಿದಾರರನ್ನು ಎರಡು ವಾರಗಳವರೆಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಮೂರ್ತಿ ಅಮಿತ್ ಶರ್ಮಾ ಅವರು ಹೇಳಿದ್ದಾರೆ.
ನ್ಯಾಯಾಲಯವು ಏಮ್ಸ್‌ನ ವೈದ್ಯಕೀಯ ಮಂಡಳಿಯಿಂದ ವರದಿಯನ್ನು ಕೇಳಿದೆ ಮತ್ತು ಡಿಸೆಂಬರ್ 20 ರಂದು ಈ ಕುರಿತು ವಿಚಾರಣೆಯನ್ನು ನಿಗಧಿಪಡಿಸಿದೆ.
ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗಾರ್ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿ ಇನ್ನೂ ಹೈಕೋರ್ಟ್‌ನ ಇನ್ನೊಂದು ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ.
ಸೆಂಗಾರ್ ಕಣ್ಣಿನ ಪೊರೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಕಾರಣಕ್ಕಾಗಿ ಮಧ್ಯಂತರ ಜಾಮೀನು ಕೋರಿದ್ದರು.
ಈ ಮನವಿಯನ್ನು ಸಂತ್ರಸ್ತೆಯ ವಕೀಲರು ಸೇರಿದಂತೆ ಸಿಬಿಐ ವಿರೋಧಿಸಿತ್ತು. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಯು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಡಿಸೆಂಬರ್ 2019 ರ ತೀರ್ಪನ್ನು ರದ್ದುಗೊಳಿಸುವಂತೆ ಅವರು ಕೋರಿದ್ದಾರೆ.
2017ರಲ್ಲಿ ಬಾಲಕಿ ಅಪ್ರಾಪ್ತಳಾಗಿದ್ದಾಗ ಉನ್ನವೋದಲ್ಲಿ ಭಾರೀ ಪ್ರಭಾವ ಹೊಂದಿದ್ದ ಬಿಜೆಪಿಯ ಸೆಂಗರ್ ಎಂಬಾತ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದನು. ಇದು ದೇಶದೆಲ್ಲೆಡೆ ಭಾರೀ ಸುದ್ದಿಯನ್ನುಂಟು ಮಾಡಿತ್ತು.
ಮಾರ್ಚ್ 13, 2020 ರಂದು, ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗಾರ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 10 ಲಕ್ಷ ದಂಡ ವಿಧಿಸಿದ್ದರೆ, ಸೆಂಗಾರ್ ಅವರ ಸಹೋದರ ಅತುಲ್ ಸಿಂಗ್ ಸೆಂಗಾರ್ ಮತ್ತು ಇತರ ಐವರಿಗೆ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣವೊಂದರಲ್ಲಿ ಸೆಂಗಾರ್ ಅವರ ಆಜ್ಞೆಯ ಮೇರೆಗೆ ಬಂಧಿಸಲಾಯಿತು. ಅವರು ಏಪ್ರಿಲ್ 9, 2018 ರಂದು ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.
ಉನ್ನಾವೋ ಅತ್ಯಾಚಾರ ಪ್ರಕರಣ ಮತ್ತು ಇತರ ಸಂಬಂಧಿತ ಪ್ರಕರಣಗಳನ್ನು ಆಗಸ್ಟ್ 1, 2019 ರಂದು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯದಿಂದ ದೆಹಲಿಗೆ ವರ್ಗಾಯಿಸಲಾಗಿತು.
ಇದನ್ನೂ ಓದಿ….ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆ ಮೇಲೆ ಸಂಪೂರ್ಣ ನಿಷೇಧ: ಅಸ್ಸಾಂ ಸಿಎಂ ಘೋಷಣೆ


