ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟಿಸಿದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅಪಹಾಸ್ಯ ಮಾಡಿದ್ದು, “ಆಕೆಯ ಮನೆ ಉನ್ನಾವೋದಲ್ಲಿರುವಾಗ ದೆಹಲಿಯಲ್ಲಿ ಏಕಿದ್ದಾಳೆ?” ಎಂದು ಪ್ರಶ್ನಿಸಿ ಮಾಧ್ಯಮಗಳ ಮುಂದೆ ವ್ಯಂಗ್ಯವಾಗಿ ನಕ್ಕಿದ್ದಾರೆ.
ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು 2025 ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿದೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ದೆಹಲಿಯ ಇಂಡಿಯಾ ಗೇಟ್ ಬಳಿ ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಹೋದರಿ ಪ್ರತಿಭಟಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ಎಳೆದೊಯ್ದು ತಮ್ಮ ವಾಹನಗಳಿಗೆ ಹತ್ತಿಸಿದ್ದರು.
ಈ ಕುರಿತು ಬುಧವಾರ (ಡಿ.24) ಮಾಧ್ಯಮದವರು ಸಚಿವ ರಾಜ್‌ಭರ್ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ರಾಜ್‌ಭರ್, “ಇಂಡಿಯಾ ಗೇಟ್? ಆಕೆಯ ಮನೆ ಇರುವುದು ಉನ್ನಾವೋದಲ್ಲಿ” (“India Gate? Ghar to unka Unnao hai”)ಎಂದು ಹೇಳಿದ್ದಾರೆ. ಮಾಧ್ಯಮಗಳ ಮುಂದೆ ವ್ಯಂಗ್ಯವಾಗಿ ಗಹಗಹಿಸಿ ನಕ್ಕಿದ್ದಾರೆ.
“ಕುಲದೀಪ್ ಸಿಂಗ್ ಸೆಂಗಾರ್ ಸಂತ್ರಸ್ತೆಯ ಮನೆಯಿಂದ 5 ಕಿ.ಮೀ ದೂರ ಇರಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಆಕೆಗೆ ಭದ್ರತೆ ಒದಗಿಸುವಂತೆ ಸೂಚಿಸಿದೆ. ಹೀಗಿರುವಾಗ ದೆಹಲಿಯಲ್ಲಿ ಏಕೆ ಪ್ರತಿಭಟಿಸುತ್ತಿದ್ದಾರೆ? ಇಲ್ಲಿ ಭದ್ರತೆ ಕೊರತೆಯ ಪ್ರಶ್ನೆ ಎಲ್ಲಿದೆ? ಎಂದು ಕೇಳಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಯ ಮಿತ್ರಪಕ್ಷ ಸುಹೇಲದೇವ್ ಭಾರತೀಯ ಸಮಾಜ ಪಾರ್ಟಿಯ (ಎಸ್ಬಿಎಸ್ಪಿ) ಮುಖ್ಯಸ್ಥರಾಗಿರುವ ಸಚಿವ ಓಂ ಪ್ರಕಾಶ್ ರಾಜ್‌ಭರ್‌ನ ಬೇಜವಬ್ದಾರಿ ಹೇಳಿಕೆ ಕುರಿತು ಪ್ರಶ್ನಿಸಲು ಸುದ್ದಿ ಸಂಸ್ಥೆಗಳು ಕರೆ ಮಾಡಿವೆ. ಆದರೆ, ಅವರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ರಾಜ್‌ಭರ್ ಅವರ ಮಗ ಹಾಗೂ ಎಸ್ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ರಾಜಭರ್ ಮಾತನಾಡಿ, ಹಾಗಾದರೆ ಓಂ ಪ್ರಕಾಶ್ ರಾಜಭರ್ ಅವರು ಈ ಬಗ್ಗೆ ಅಳಬೇಕು, ಅಂದರೆ ಸರಿಯಾಗುತ್ತದೆ. ಪ್ರಕರಣದಲ್ಲಿ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಕುಟುಂಬಕ್ಕೆ ಭದ್ರತೆಯ ಕುರಿತು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ. ಹೇಳುವುದೇನೂ ಬಾಕಿಯಿಲ್ಲ” ಎಂದಿರುವುದಾಗಿ ವರದಿಯಾಗಿದೆ.


