ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಡುವಿನ ಸಂಬಂಧದಲ್ಲಿ ಸಾಕಷ್ಟು ಬಿರುಕು ಮೂಡಿದೆ. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಶಾಸಕ ನವಜೋತ್ ಸಿಂಗ್ ಸಿಧು ದೀರ್ಘ ಸಮಯದಿಂದ ಪರಸ್ಪರ ಬಹಿರಂಗ ಆರೊಪಗಳಲ್ಲಿ ತೊಡಗಿದ್ದಾರೆ. ಈಗ ಸಿಧು ಮತ್ತು ಕ್ಯಾಪ್ಟನ್ ನಡುವಿನ ವಾಗ್ಯುದ್ದ ತಾರಕ್ಕೇರಿದ್ದು ಭಿನ್ನಮತದ ಸಮಸ್ಯೆ ದೆಹಲಿಯ ಅಂಗಳವನ್ನು ತಲುಪಿದೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಪಕ್ಷದಲ್ಲಿನ ಭಿನ್ನಮತ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ಹೈಕಮಾಂಡ್ ಭಿನ್ನಮತ ಶಮನಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದರೂ ಪಂಜಾಬ್ ಕಾಂಗ್ರೆಸ್‌ನ ಪರಿಸ್ಥಿತಿ ಮಾತ್ರ ಬಗೆಹರಿದಿಲ್ಲ. ಕಳೆದವಾರ ಕಾಂಗ್ರೆಸ್ ಅಧ್ಯಕ್ಷೆ ಸೊನಿಯಾಗಾಂಧಿ ಅವರು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ದೆಹಲಿಗೆ ಕರೆಸಿಕೊಂಡು ಪಕ್ಷದಲ್ಲಿನ ಅಸಮಾಧಾನವನ್ನು ತಣ್ಣಗೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದೆಲ್ಲ ಬೆಳವಣಿಗೆಗಳ ನಂತರವೂ ಅಮರಿಂದರ್ ಸಿಂಗ್ ಮತ್ತು ಸಿಧು ನಡುವಿನ ಭಿನ್ನಮತ ತಣ್ಣಗಾದಂತೆ ಕಾಣುತ್ತಿಲ್ಲ. ಇಂದು ಮತ್ತೊಮ್ಮೆ ನವಜೋತ್ ಸಿಂಗ್ ಸಿಧು ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಪರೊಕ್ಷವಾಗಿ ದಾಳಿ ನಡೆಸಿದ್ದಾರೆ.
ಇಂದು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮೂರು ಜನರ ಕಾಂಗ್ರೆಸ್ ನಾಯಕರ ಸಮಿತಿಯನ್ನು ಭೇಟಿಯಾಗಲು ಅಮರಿಂದರ್ ಸಿಂಗ್ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಸಮಿತಿ ಮುಂದೆ ಅಮರಿಂದರ್ ಸಿಂಗ್ ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ವಿವರಿಸಲಿದ್ದಾರೆ.
ಇದರ ನಡುವೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ನವಜ್ಯೋತ್ ಸಿಂಗ್ ಸಿಧು ಪಂಜಾಬ್‌ನಲ್ಲಿ ಎರಡು ಕುಟುಂಬಗಳು ಮಾತ್ರ ಅಧಿಕಾರದ ಲಾಭವನ್ನು ಪಡೆಯುತ್ತಿವೆ ಎಂದು ಹೆಳುವ ಮುಲಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಪರೋಕ್ಷವಾದ ಆರೊಪವನ್ನು ಮಾಡಿದ್ದಾರೆ.
2019 ರಲ್ಲಿ ನವಜೋತ್ ಸಿಂಗ್ ಸಿಧು ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಚಿವ ಸಂಪುಟದಿಂದ ಹೊರಬಿದ್ದ ಗಳಿಗೆಯಿಂದಲೇ ಆರಂಭವಾದ ಸಿಧು ಮತ್ತು ಕ್ಯಾಪ್ಟನ್ ನಡುವಿನ ಮನಸ್ತಾಪ ಈಗ ತಿವ್ರ ಸ್ವರೂಪವನ್ನು ಪಡೆದುಕೊಂಡಿದೆ. 117 ಜನ ಶಾಸಕರನ್ನು ಹೊಂದಿರುವ ಪಂಜಾಬ್ ಕಾಂಗ್ರೆಸ್‌ನಲ್ಲಿ 73 ಜನರು ತಮ್ಮ ಪರವಾಗಿದ್ದಾರೆ. ತಾವು ಪಕ್ಷದಲ್ಲಿ ಯಾವುದೇ ಬಂಡಾಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಬದಲಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ದಿನನಿತ್ಯ ಒಂದೊಂದು ಹೊಸ ಸುಳ್ಳುಗಳನ್ನು ಹೇಳುತ್ತಾರೆ ಎಂದು ಸಿಧು ಆರೋಪಿಸಿದ್ದಾರೆ.
ಇದರ ನಡುವೆ ನವಜೋತ್ ಸಿಂಗ್ ಸಿಧು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದು ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಬಂಡಾಯವನ್ನು ಶಮನಗೊಳಿಸಿಕೊಳ್ಳುವಂತೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮುಂದೆ ಪರಿಹಾರ ಮಾರ್ಗೋಪಾಯಗಳನ್ನು ಇಟ್ಟಿದೆ. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ನವಜೋತ್ ಸಿಂಗ್ ಸಿಧು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮತ್ತು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲು ಸಿದ್ಧರಿಲ್ಲ ಎಂದು ಮೂಲಗಳು ತಿಳಿಸಿವೆ.
ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಿಧು ಅವರನ್ನು ಅಮರಿಂದರ್ ಸಿಂಗ್ ಕರೆಯುತ್ತಾರೆ. ಪ್ರಚಾರ ಸಭೆಗಳಿಗೆ ಮಾತ್ರ ನವಜೋತ್ ಸಿಂಗ್ ಸಿಧು ಬೇಕು. ಅದರೆ ಸರ್ಕಾರ ನಡೆಸುವ ಸಂದರ್ಭದಲ್ಲಿ ಮಾತ್ರ ಸಿಧು ಮಾತಿಗೆ ಕ್ಯಾಪ್ಟನ್ ಯಾವ ಬೆಲೆಯನ್ನು ನೀಡುವುದಿಲ್ಲ. ತಮ್ಮನ್ನು ಒಂದು ರೀತಿಯಲ್ಲಿ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಸಿಧು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಆರೋಪಿಸಿದ್ದಾರೆ.
ಸದ್ಯ ಅಮರಿಂದರ್ ಸಿಂಗ್ ದೆಹಲಿಯಲ್ಲಿ ಇದ್ದು ಹೈಕಮಾಂಡ್ ನಾಯಕರ ಭೇಟಿಯ ನಂತರ ನವಜೋತ್ ಸಿಂಗ್ ವಿಚಾರದಲ್ಲಿ ಅಮರಿಂದರ್ ಸಿಂಗ್ ನಿಲುವುಗಳು ಬದಲಾಗುವ ಸಾಧ್ಯತೆಗಳಿವೆ. ಕಳೆದವಾರ ದೆಹಲಿ ಭೇಟಿಯ ನಂತರ ಅಮರಿಂದರ್ ಸಿಂಗ್ ನವಜೋತ್ ಸಿಂಗ್ ಸಿದ್ಧು ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಲು ಕೆಲವು ಕ್ರಮಗಳನ್ನು ಕೈಗೊಂಡಿದ್ದರು. ಅದರೆ ಸಿದ್ದು ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒಪ್ಪಿರಲಿಲ್ಲ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೈಕಮಾಂಡ್ ಭೇಟಿ ಪಂಜಾಬ್ ಕಾಂಗ್ರೆಸ್‌ನ ಸಮಸ್ಯೆಗಳನ್ನು ಬಗೆಹರಿಸಲಿದೆಯೇ? ಅಥವಾ ಭಿನ್ನಮತಗಳು ಹೀಗೆ ಮುಂದುವರಿಯಲಿವೆಯೇ ಎಂಬುದರ ಕುರಿತು ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ : ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಬಂಧನಕ್ಕೆ ಬಾಂಬೆ ಹೈಕೋರ್ಟ್‌ನಿಂದ 4 ವಾರಗಳ ತಡೆ


