‘ಭಾರತೀಯ ಜ್ಞಾನ ವ್ಯವಸ್ಥೆಯ ಸೋಗಿನಲ್ಲಿ ನಿರ್ದಿಷ್ಟ ಸಿದ್ದಾಂತದ ವಿಷಯಗಳನ್ನು ಹೇರುವ’ ಬಗ್ಗೆ ಗಂಭೀರ ಕಳವಳಗಳನ್ನು ಉಲ್ಲೇಖಿಸಿ ಕೇರಳ ಸರ್ಕಾರ ವಿಶ್ವವಿದ್ಯಾಲಗಳ ಧನಸಹಾಯ ಆಯೋಗದ (ಯುಜಿಸಿ) ಕರಡು ಪಠ್ಯಕ್ರಮ ನೀತಿಯನ್ನು ತಿರಸ್ಕರಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ (ಸೆ.26) ವರದಿ ಮಾಡಿದೆ.
ಕಳೆದ ಆಗಸ್ಟ್‌ನಲ್ಲಿ ಯುಜಿಸಿ ಒಂಬತ್ತು ವಿಷಯಗಳಿಗೆ ಕರಡು ನೀತಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು.
ಯುಜಿಸಿ ಕರಡು ನೀತಿಯು ಹಳೆಯದ್ದು, ಅವೈಜ್ಞಾನಿಕವಾಗಿದೆ ಮತ್ತು ಸಂಘ ಪರಿವಾರದ ಸೈದ್ಧಾಂತಿಕ ಹಿತಾಸಕ್ತಿಗಳ ಪರವಾಗಿದೆ ಎಂದು ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಹೇಳಿದ್ದಾರೆ.
‘ರಾಮ ರಾಜ್ಯ’ದಂತಹ ವಿಷಯಗಳು—ಅಂದರೆ, ಹಿಂದೂ ದೇವರು ರಾಮನ ಆದರ್ಶಪ್ರಾಯ ಆಡಳಿತ ಎಂಬ ವಿಷಯವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಮತ್ತು ಪರಿಸರ, ಸಾಮಾಜಿಕ ಹಾಗೂ ಆಡಳಿತ (ಇಎಸ್‌ಜಿ) ವಿಷಯಗಳೊಂದಿಗೆ ಸಂಯೋಜಿಸಿರುವುದು ಸಂಘ ಪರಿವಾರದ ಸಿದ್ದಾಂತ ಹೇರಿಕೆಗೆ ಉದಾಹರಣೆ ಎಂದು ಬಿಂದು ತಿಳಿಸಿದ್ದಾರೆ.
“ಇಂತಹ ವಿಷಯಗಳು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಸಹಿಷ್ಣುತೆ ಮತ್ತು ಅಶಾಂತಿಗೆ ಕಾರಣವಾಗಬಹುದು” ಎಂದಿದ್ದಾರೆ.
ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅಧ್ಯಕ್ಷತೆಯ ಕೇರಳ ರಾಜ್ಯ ಸರ್ಕಾರದ ಸಮಿತಿಯು, ಯುಜಿಸಿಯ ಪ್ರಸ್ತಾವಿತ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ನೀತಿಯು ವಿಶ್ವವಿದ್ಯಾಲಯ ಶಿಕ್ಷಣದಿಂದ ನಿರೀಕ್ಷಿಸಲಾದ ಬೌದ್ಧಿಕ ಮತ್ತು ಶಿಸ್ತಿನ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ ಎಂದು ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ಸಮಿತಿಯಲ್ಲಿ ಇತಿಹಾಸಕಾರ ರೊಮಿಲಾ ಥಾಪರ್ ಮತ್ತು ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ರಾಜನ್ ಗುರುಕ್ಕಲ್ ಇದ್ದರು.
ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ವಿವರವಾದ ಆಕ್ಪೇಪವನ್ನು ಸಲ್ಲಿಸಲಾಗಿದ್ದು, ಈ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಕೇರಳ ಸರ್ಕಾರ ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಗುರುವಾರ ಸಾರ್ವಜನಿಕಗೊಳಿಸಲಾದ ಸಮಿತಿಯ ವರದಿಯಲ್ಲಿ, ಯುಜಿಸಿ ನೀತಿಯು ‘ವಿಶ್ವದ ಯಾವುದೇ ಪ್ರಮುಖ ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲ. ನಮ್ಮ ದೇಶದಲ್ಲಿಯ ಈ ರೀತಿಯ ನೀತಿಗಳನ್ನು ಇದುವರೆಗೆ ಕಂಡಿಲ್ಲ. ಈ ನೀತಿಯು ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ.
ಯುಜಿಸಿಯ ಕರಡು ಪಠ್ಯಕ್ರಮ ನೀತಿಯ ದಾಖಲೆಯು ಬ್ರಿಟಿಷ್ ಮತ್ತು ಅಮೆರಿಕನ್ ಪಠ್ಯಪುಸ್ತಕಗಳಿಂದ ತೆಗೆದುಕೊಂಡ ವಿವಿಧ ವಿಷಯಗಳ ಸಂಗ್ರಹವಾಗಿದೆ. ಆದರೆ, ಈ ದಾಖಲೆಯು ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯಶಾಹಿ (ಉದಾಹರಣೆಗೆ, ಬ್ರಿಟಿಷ್ ಆಳ್ವಿಕೆ) ಯ ಶೋಷಣಾತ್ಮಕ ಪಾತ್ರವನ್ನು ಸ್ಪಷ್ಟವಾಗಿ ಗುರುತಿಸುವುದಿಲ್ಲ ಅಥವಾ ಒತ್ತಿಹೇಳುವುದಿಲ್ಲ ಎಂದು ವರದಿಯಲ್ಲಿ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.
ಕರಡು ಚೌಕಟ್ಟಿನಲ್ಲಿ ‘ಭಾರತೀಯ ಜ್ಞಾನ ವ್ಯವಸ್ಥೆಯ ಹಿಂದೂ-ವಿಶೇಷತಾವಾದಿ ಗ್ರಹಿಕೆ’ ಯನ್ನು ವರದಿ ಟೀಕಿಸಿದೆ.
ಸಮಿತಿಯ ವಿಶೇಷ ಆಹ್ವಾನಿತರಾಗಿರುವ ಥಾಪರ್, ಈ ನೀತಿಯು ಶೈಕ್ಷಣಿಕ ಗುಣಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ಉನ್ನತ ಶಿಕ್ಷಣವನ್ನು ಕೇವಲ ಕಂಠಪಾಠಕ್ಕೆ ಸೀಮಿತಗೊಳಿಸುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಕರಡು ನೀತಿಯ ಉದ್ದಕ್ಕೂ ‘ಭಾರತೀಯ ಜ್ಞಾನ ವ್ಯವಸ್ಥೆ’ ಎಂಬ ಪದದ ಅಸ್ಪಷ್ಟ ಬಳಕೆಯನ್ನು ಸಮಿತಿ ವಿರೋಧಿಸಿದೆ. ಯಾವುದೇ ಸ್ಪಷ್ಟ ವ್ಯಾಖ್ಯಾನ ಅಥವಾ ವಿಶ್ಲೇಷಣೆಯನ್ನು ಇದಕ್ಕೆ ಕೊಡಲಾಗಿಲ್ಲ ಎಂದಿದ್ದಾರೆ.
ಕೆಲವು ಗ್ರಂಥಗಳು ಸಂಸ್ಕೃತದಲ್ಲಿ ರಚಿತವಾಗಿದ್ದರೂ ಸಹ, ಕ್ರಿ.ಶ. ಮೊದಲನೆಯ ಮತ್ತು ಎರಡನೆಯ ಸಹಸ್ರಮಾನದ ಆರಂಭದಲ್ಲಿ, ಭಾರತ, ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ ಮತ್ತು ಚೀನಾದಾದ್ಯಂತ ಪೂರ್ವ-ವಿಜ್ಞಾನದ (ಪ್ರೊಟೊ-ಸೈನ್ಸ್) ಕುರಿತಾದ ಚಿಂತನೆಗಳು ಗಣನೀಯವಾಗಿ ವಿನಿಮಯವಾಗುತ್ತಿದ್ದವು,” ಎಂದು ಥಾಪರ್ ಹೇಳಿದ್ದು, ಈ ಚಿಂತನೆಗಳಿಗೆ ಭೌಗೋಳಿಕ ಗಡಿಗಳನ್ನು ಅಥವಾ ಧಾರ್ಮಿಕ ಮೂಲವನ್ನು ನಿರ್ದಿಷ್ಟಪಡಿಸಲಾಗದು ಎಂದಿದ್ದಾರೆ.
ಕೇಂದ್ರದಿಂದ ಸಂಸದೀಯ ಸ್ಥಾಯಿ ಸಮಿತಿಗಳ ಅವಧಿ ವಿಸ್ತರಣೆ ಸಾಧ್ಯತೆ: ಶಶಿ ತರೂರ್ ಸ್ಥಾನ ಅಬಾಧಿತ?


