ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆ ಎರಡು ದಿನಗಳ ಉತ್ತರ ಪ್ರದೇಶ ಪ್ರವಾಸದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಕಾನ್ಪುರದ ಕಿದ್ವಾಯಿ ನಗರದಲ್ಲಿರುವ ಬಾಬಾ ನಾಮದೇವ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಜೆ.ಪಿ ನಡ್ಡಾ, “ನಮ್ಮ ಸಿಖ್ ಸಹೋದರರಿಗೆ ಮತ್ತು ಸಮುದಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಕೆಲಸ ಹಿಂದೆಂದೂ ಯಾರು ಮಾಡಿಲ್ಲ, ಉತ್ತಮ ಸಮಾಜ ಸೇವೆ ಮಾಡಲು ಬಾಬಾ ನಾಮದೇವ್ ಅವರಿಂದ ನಾನು ಆಶೀರ್ವಾದ ಮತ್ತು ಶಕ್ತಿಯನ್ನು ಪಡೆಯುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆ ಗೆಲುವು 2024ರ ಲೋಕಸಭೆಗೆ ದಾರಿ: ಅಮಿತ್ ಶಾ
ಬಳಿ ಕಾನ್ಪುರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಅಸಾದುದ್ದೀನ್ ಓವೈಸಿ ಅವರ ವಿರುದ್ಧ ಇಬ್ಬರು ನಾಯಕರು ವಾಗ್ದಾಳಿ ನಡೆಸಿದ್ದಾರೆ.
“ಸಮಾಜವಾದಿ ಪಕ್ಷದ ಅಡಿಯಲ್ಲಿ ಮಾಫಿಯಾ ಆಡಳಿತ ಮತ್ತು ಗೂಂಡಾ ಆಡಳಿತವಿತ್ತು. ಈಗ ಯಾವುದೇ ಮಾಫಿಯಾ ಅಥವಾ ಗೂಂಡಾಗಳು ಕಾಣುತ್ತಿಲ್ಲ. ಯೋಗಿ ಸರ್ಕಾರದಿಂದಾಗಿ ಕೊನೆಗೂ ನಮ್ಮ ಸಹೋದರಿಯರು ಗೂಂಡಾ ಆಡಳಿತದಿಂದ ಮುಕ್ತಿ ಹೊಂದಲು ಸಾಧ್ಯವಾಯಿತು” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಇನ್ನು ಅಸಾದುದ್ದೀನ್ ಓವೈಸಿ ಅವರನ್ನು ಗುರಿಯಾಗಿಸಿ ಮಾತನಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, “ಸಿಎಎ ಹೆಸರಿನಲ್ಲಿ ಭಾವನೆಗಳನ್ನು ಪ್ರಚೋದಿಸುವ ವ್ಯಕ್ತಿಯನ್ನು ನಾನು ಎಚ್ಚರಿಸಲು ಬಯಸುತ್ತೇನೆ. ’ಅಬ್ಬಾ ಜಾನ್’ ಮತ್ತು ‘ಚಾಚಾ ಜಾನ್’ ಬೋಧಕರು ರಾಜ್ಯದಲ್ಲಿ ಇದನ್ನು ಮಾಡಲು ಬಯಸಿದರೆ ಅವರನ್ನು ಹೇಗೆ ಕಟ್ಟುನಿಟ್ಟಾಗಿ ನಿಭಾಯಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿದಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಮತ್ತೆ ಯುಪಿಯಲ್ಲಿ ರಾಜ್ಯಭಾರ ಮಾಡಲು ಉದ್ದೇಶಿಸಿರುವ ಬಿಜೆಪಿ ನಾಯಕರು ಸಿಖ್ ಸಮುದಾವನ್ನು ಸೆಳೆಯಲು ಹಲವು ತಂತ್ರ ಹೂಡುತ್ತಿದ್ದಾರೆ. ಸೋಮವಾರ, ಬಿಜೆಪಿ ನಾಯಕರು ಗೋರಖ್‌ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.


