ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿನ ದಿಗ್ವಿಜಯವು 2024ರ ಲೋಕಸಭಾ ಚುನಾವಣೆಗೆ ದಾರಿಯಾಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುವ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಅವರು ಮಾತನಾಡಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯ ತಳಮಟ್ಟದ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುವ ನಿಟ್ಟಿನಲ್ಲಿ ಅಮಿತ್ ಶಾ ಮಾತನಾಡಿದ್ದು, “ಕಾರ್ಯಕರ್ತರು ಪ್ರತಿ ಕುಟುಂಬದ ಕನಿಷ್ಠ ಮೂರು ಮತಗಳನ್ನು ಬಿಜೆಪಿಗೆ ಹಾಕಿಸಬೇಕು. ಏಕೆಂದರೆ ಉತ್ತರ ಪ್ರದೇಶದ ಗೆಲುವು ಮುಂಬರುವ ಲೋಕಸಭೆಗೆ ತೆರೆದ ಬಾಗಿಲಾಗಲಿದೆ” ಎಂದು ಕರೆ ನೀಡಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಅವರು, ಬೂತ್ ಮಟ್ಟದ ಪ್ರಚಾರಗಳನ್ನು ಬಲಪಡಿಸುವಂತೆ ಪಕ್ಷದ ಕಾರ್ಯಕರ್ತರಲ್ಲಿ ಕೇಳಿಕೊಂಡರು. “ಇದಕ್ಕಾಗಿ ಬೂತ್ ಸಮಿತಿಗಳನ್ನು ಸ್ಥಾಪಿಸಬೇಕು” ಎಂದು ಸೂಚಿಸಿದರು.
ಇದನ್ನೂ ಓದಿರಿ: ಲಾಕಪ್ ಡೆತ್: ’ಉತ್ತರ ಪ್ರದೇಶದಲ್ಲಿ ಮಾನವ ಹಕ್ಕುಗಳು ಉಳಿದಿವೆಯೇ?’- ರಾಹುಲ್ ಗಾಂಧಿ
“ಬಿಜೆಪಿಗೆ ಮತ ಹಾಕಲು ತಲಾ 60 ಜನರ ಮೇಲೆ ಪ್ರತಿಯೊಬ್ಬ ವ್ಯಕ್ತಿಯೂ ಪ್ರಭಾವ ಬೀರಬೇಕು. ಒಂದು ವಲಯದಿಂದ ಕನಿಷ್ಠ 20 ಮತಗಳನ್ನು ಗಳಿಸುವ ಗುರಿಯನ್ನು ಇಟ್ಟುಕೊಳ್ಳಬೇಕು. ಪಕ್ಷದ ಪ್ರತಿ ಕಾರ್ಯಕರ್ತ ಪ್ರತಿ ಕುಟುಂಬಗಳಿಂದ ತಲಾ ಮೂರು ಮತಗಳನ್ನು ಗಳಿಸಬೇಕು” ಎಂದು ಅವರು ಹೇಳಿದ್ದಾರೆ.
“ಇದು ಸಾಮಾನ್ಯ ಚುನಾವಣೆಯಲ್ಲ. ಇದು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಚುನಾವಣೆಯಾಗಿದೆ. ರೈತರಿಗೆ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆ, ಪ್ರಧಾನಿಯವರ ಕಾರ್ಯಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ತಿಳಿಸಬೇಕು” ಎಂದಿರುವ ಅವರು, ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ದೇಶದಾದ್ಯಂತ ರೈತರು ನಡೆಸುತ್ತಿರುವ ಹೋರಾಟದ ಕುರಿತು ಅವರು ಪ್ರಸ್ತಾಪಿಸಲಿಲ್ಲ.
“ಕಾಂಗ್ರೆಸ್ ಕಾರ್ಯಕರ್ತರು ಇಷ್ಟು ವರ್ಷಗಳಿಂದ ಭ್ರಷ್ಟಾಚಾರ, ಅವ್ಯವಸ್ಥೆ ಮತ್ತು ವಿಭಜಕ ರಾಜಕೀಯದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಎಷ್ಟು ಕಾಲ ಆಡಳಿತ ನಡೆಸಿತೋ ಅಷ್ಟು ಕಾಲ ಬಿಜೆಪಿ ಅಧಿಕಾರ ನಡೆಸಿದರೆ ಭಾರತ ಆರ್ಥಿಕ ಶಕ್ತಿ ಕೇಂದ್ರವಾಗಿ ಬದಲಾಗುತ್ತದೆ” ಎಂದಿದ್ದಾರೆ.
“ಯೋಗಿ ಆದಿತ್ಯನಾಥ್ ಅವರ ಸರ್ಕಾರ ಗೂಂಡಾರಾಜ್ ಹಾಗೂ ಮಾಫಿಯಾವನ್ನು ನಿಯಂತ್ರಿಸಿದೆ. ನಾವು ಮುಂದಿನ ಐದು ವರ್ಷಗಳಲ್ಲಿ ಉತ್ತಮ ಉತ್ತರ ಪ್ರದೇಶವನ್ನು ರೂಪಿಸಬೇಕಾಗಿದೆ. ಯುಪಿ ಗೆಲುವು 2024ಕ್ಕೆ ಬಾಗಿಲು ತೆರೆಯುತ್ತದೆ” ಎಂದು ತಿಳಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರ ಮತ್ತು ಗೂಂಡಾ ರಾಜ್ ಬಗ್ಗೆ ಜನರಿಗೆ ತಿಳಿಸಲು ಮನೆಮನೆಗೆ ಕಾರ್ಯಕರ್ತರು ಭೇಟಿ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: 28 ವರ್ಷಗಳಿಂದಾದ ಪ್ರಯೋಗಗಳ ಫಲ- ಒಂದು ವರ್ಷದ ರೈತ ಚಳವಳಿ


