ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ.
ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್ ಅವರು ಕ್ಷೌರಿಕ ವಿನೋದ್ ಕುಮಾರ್ ಅವರನ್ನು ತಮ್ಮ ಮನೆಗೆ ಕ್ಷೌರ ಮಾಡಲು ಕರೆದಿದ್ದರು. ಆದರೆ ಕಾರಣಾಂತರಗಳಿಂದ ಅವರು ತಡವಾಗಿ ಬಂದಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಸರ್ಕಲ್ ಆಫೀಸರ್ ಸುನೀಲ್ ಕುಮಾರ್ ಕ್ಷೌರಿಕ ವಿನೋದ್ ಕುಮಾರ್‌ಗೆ ಲಾಕಪ್‌ನಲ್ಲಿ ಇರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತನ ಸಹೋದರ ಶಿವಕುಮಾರ್, ವಿನೋದ್‌ಗೆ ಕ್ಷೌರ ಮಾಡಲು ಇತರ ಗ್ರಾಹಕರು ಇದ್ದ ಕಾರಣ ಸರ್ಕಲ್ ಆಫೀಸರ್ ಅವರ ನಿವಾಸವನ್ನು ತಲುಪಲು ಸ್ವಲ್ಪ ತಡವಾಯಿತು. ಕೆಲವು ಗಂಟೆಗಳ ನಂತರ ಕೆಲವು ಪೊಲೀಸ್ ಸಿಬ್ಬಂದಿ ನಮ್ಮ ಅಂಗಡಿಗೆ ಬಂದರು. ಅವರು ಅಂಗಡಿಯನ್ನು ಮುಚ್ಚಿ ವಿನೋದ್‌ನ್ನು ಬಿಸೌಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಬುಧವಾರ ಮಧ್ಯಾಹ್ನದವರೆಗೂ ಅವರು ವಿನೋದ್‌ನನ್ನು ಲಾಕ್‌ಅಪ್‌ನಲ್ಲಿ ಇರಿಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ ಪ್ರತಿಕ್ರಿಯಿಸಿದ್ದು, ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಯ ನಡೆಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ: ಮತದಾರರನ್ನು ಇವಿಎಂ ಬಳಿ ತೆರಳಲೇ ಬಿಡುತ್ತಿರಲಿಲ್ಲ! ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ಆರೋಪ


