ಬುರ್ಕಾ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದಂತೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಸರ್ಕಾರಿ ಕಾಲೇಜಿನಲ್ಲಿ ಜಾರಿಗೊಳಿಸಿದ ಸಮವಸ್ತ್ರ ನೀತಿಯು ವಿವಾದಕ್ಕೆ ಗುರಿಯಾಗಿದೆ.
ಸಮಾಜವಾದಿ ಪಕ್ಷದ ಯುವ ಘಟಕವು ಪ್ರತಿಭಟನೆ ನಡೆಸಿದ್ದು, ಬುರ್ಖಾ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮುಸ್ಲಿಂ ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಹಿಂದೂ ಕಾಲೇಜಿನ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾ “ಹೊರಗಿನವರ ಪ್ರವೇಶವನ್ನು ತಡೆಯಲು ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ” ಎಂದಿದ್ದಾರೆ.
ಹುಡುಗರಿಗೆ ಬಿಳಿ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್, ಹುಡುಗಿಯರಿಗೆ ಬೂದು ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮವನ್ನು ಸಮವಸ್ತ್ರವಾಗಿ ಅಳವಡಿಸಲಾಗಿದೆ. ಈ ನಿಯಮವು ಯಾವಾಗಲೂ ಜಾರಿಯಲ್ಲಿರುತ್ತದೆ. ಕೆಲವು ಹೊರಗಿನವರು ಅಧ್ಯಾಪಕರೊಬ್ಬರ ಮೇಲೆ ದಾಳಿ ಮಾಡಿದ ನಂತರ, ಕಾಲೇಜು ಅಧಿಕಾರಿಗಳು ಸಮವಸ್ತ್ರ ನಿಯಮವನ್ನು ಜಾರಿಗೊಳಿಸಿದರು. ಕಳೆದ ಅಕ್ಟೋಬರ್ 15ರಂದು ನಿಯಮ ಜಾರಿಯಾದರೂ ಈ ವರ್ಷದ ಜನವರಿ 1 ರಿಂದ ಮಾತ್ರ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಕಾಲೇಜು ಹೇಳಿಕೊಂಡಿದೆ.
ಸಮಾಜವಾದಿ ಪಕ್ಷದ ಯುವ ಘಟಕದ ನೇತೃತ್ವದಲ್ಲಿ ಜನವರಿ ಮೊದಲ ವಾರದಲ್ಲಿ ಕಾಲೇಜು ಗೇಟ್‌ಗಳ ಹೊರಗೆ ಧರಣಿ ಆರಂಭಿಸಿದ ವಿದ್ಯಾರ್ಥಿಗಳು, “ಪ್ರವೇಶದ್ವಾರದಲ್ಲಿ ತಮ್ಮ ಬುರ್ಖಾವನ್ನು ತೆಗೆಯಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸೂಚಿಸಲಾಗುತ್ತಿದೆ. ಹೀಗಾದಾಗ ತರಗತಿಗಳಿಗೆ ಹಾಜರಾಗಲು ಕಷ್ಟವಾಗುತ್ತದೆ” ಎಂದು ದೂರಿದ್ದಾರೆ. ಆದರೆ ಕಾಲೇಜಿನ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ.
“ಪ್ರವೇಶದ್ವಾರದ ಬಳಿ ಇರುವ ಕೊಠಡಿಯನ್ನು ಯಾವಾಗಲೂ ಈ ಉದ್ದೇಶಕ್ಕಾಗಿ ನಿಗದಿಪಡಿಸಲಾಗಿದೆ” ಎಂದು ಕಾಲೇಜು ಹೇಳಿಕೊಂಡಿದೆ. ಜನವರಿಯಲ್ಲಿ ವಿವಾದ ಉಂಟಾದ ಬಳಿಕ ಈ ಕೊಠಡಿಗೆ ‘ಬದಲಾವಣೆ ಕೊಠಡಿ’ ಎಂದು ಹೆಸರಿಡಲಾಗಿದೆ.
“ನಾನು ಈ ಪ್ರತಿಭಟನೆಯನ್ನು ಬೆಂಬಲಿಸುವುದಿಲ್ಲ. ಬುರ್ಖಾ ಹಾಕಿಕೊಂಡು ಬರುವ ಹುಡುಗಿಯರಿಗೆ ಕಾಲೇಜು ಆಡಳಿತ ಮಂಡಳಿ ಜಾಗ ನೀಡಿದೆ. ಬುರ್ಖಾ ಹಾಕದೆ ಬರಬೇಕೆಂದು ಅವರೇನು ಹೇಳುತ್ತಿಲ್ಲ. ಬುರ್ಖಾ ತೆಗೆದು ಕಾಲೇಜಿನೊಳಗೆ ಬರುಲು ಹೇಳುತ್ತಿದ್ದಾರೆ. ಅವರು ಹಿಜಾಬ್ ಮೇಲೆ ನಿರ್ಬಂಧಗಳನ್ನು ಹಾಕಿಲ್ಲ” ಎಂದು ಮೊದಲ ವರ್ಷದ ಎಂ.ಕಾಂ ವಿದ್ಯಾರ್ಥಿ ಇಕ್ರಾ ಅವರು ‘ನ್ಯೂಸ್‌ಲಾಂಡ್ರಿ’ ಜಾಲತಾಣಕ್ಕೆ ತಿಳಿಸಿದ್ದಾರೆ.
“ಕಾಲೇಜಿಗೆ ಪ್ರವೇಶ ಪಡೆಯುವ ಸಮಯದಲ್ಲೇ ಈ ಸಮವಸ್ತ್ರಕ್ಕೆ ಒಪ್ಪಿಗೆ ನೀಡುವ ನಿಬಂಧನೆಗೆ ಸಹಿ ಹಾಕಲಾಗಿರುತ್ತದೆ. ವಿದ್ಯಾರ್ಥಿನಿಯವರು ಮತ್ತು ಪೋಷಕರಿಗೆ ಸಮಸ್ಯೆಯಾಗಿಲ್ಲ. ಇದು ಹೊರನವರ ಪ್ರಶ್ನೆಯಷ್ಟೇ” ಎಂದು ಮಾಹಿತಿ ನೀಡಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿನಿ ಅಟೂಫಾ ಪ್ರತಿಕ್ರಿಯಿಸಿದ್ದು, “ಪ್ರತಿಭಟನಾಕಾರರು ಹೊರಗಿನವರು. ತಮ್ಮ ಗುರುತನ್ನು ಮುಚ್ಚಿಕೊಳ್ಳಲು ಬುರ್ಖಾವನ್ನು ಧರಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ಆದರೆ ಬುರ್ಖಾ ಧರಿಸಿದ್ದ ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ‘ನ್ಯೂಸ್‌ಲಾಂಡ್ರಿ’ ತಿಳಿಸಿದೆ.
“ಈಗ ಯಾವುದೇ ವಿವಾದವಿಲ್ಲ” ಎಂದು ಕಾಲೇಜಿನ ಮುಖ್ಯ ಅಧಿಕಾರಿ ಎಪಿ ಸಿಂಗ್ ಹೇಳಿದ್ದಾರೆ. “ವಿದ್ಯಾರ್ಥಿಗಳು ತಮ್ಮ ಬುರ್ಖಾವನ್ನು ಪ್ರವೇಶದ್ವಾರದಲ್ಲಿಯೇ ತೆಗೆಯುವಂತೆ ಹೇಳುವುದರ ಬಗ್ಗೆ ತಪ್ಪು ತಿಳಿವಳಿಕೆ ರವಾನೆಯಾಗಿದೆ. ಈ ಸುದ್ದಿ ಎಲ್ಲೆಡೆ ಪ್ರಸಾರವಾಗಿದೆ. ಇದಕ್ಕಾಗಿ ಬುರ್ಕಾ ತೆಗೆಯುವುದಕ್ಕಾಗಿಯೇ ಕೊಠಡಿಯನ್ನು ನೀಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಸುಮಾರು ಆರು ತಿಂಗಳ ಹಿಂದೆ ಪ್ರೊಫೆಸರ್ ಎ.ಯು.ಖಾನ್ ಅವರ ಮೇಲೆ ಕಾಲೇಜಿನ ಪ್ರವೇಶದ್ವಾರದಲ್ಲಿ ಹೊರಗಿನ ವ್ಯಕ್ತಿಗಳು ಹಲ್ಲೆ ನಡೆಸಿದ ನಂತರ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಾಲೇಜು ನಿರ್ಧರಿಸಿತು” ಎಂದು ವಿವರಿಸಿದ್ದಾರೆ.
“ನಮಗೆ ಬುರ್ಖಾದಿಂದ ಯಾವುದೇ ಸಮಸ್ಯೆ ಇಲ್ಲ. ವಿದ್ಯಾರ್ಥಿನಿಯರು ಕಾಲೇಜಿಗೆ ಅದನ್ನು ಧರಿಸಿ, ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ತೆಗೆದಿಟ್ಟು ತಮ್ಮ ಡ್ರೆಸ್‌ನಲ್ಲಿ ಪ್ರವೇಶಿಸಿದರೆ ಯಾರಿಗೆ ತೊಂದರೆ? ಜನವರಿ 1 ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೊರಗಿನಿಂದ ಬಂದ ಕೆಲವು ಯುವಕರು ಇದರ ವಿರುದ್ಧ ಪ್ರತಿಭಟಿಸಿದ್ದಾರೆ. ಫೋಟೋಗಳನ್ನು ಕ್ಲಿಕ್ ಮಾಡಿ, ಅದನ್ನು ರಾಜಕೀಯಗೊಳಿಸಿದ್ದಾರೆ. ಸಮವಸ್ತ್ರವು ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಅನ್ವಯವಾಗುತ್ತದೆ” ಎಂದಿದ್ದಾರೆ.
ಕಾಲೇಜು ಪ್ರಾಂಶುಪಾಲ ಮತ್ತು ಪ್ರಾಧ್ಯಾಪಕ ಸತ್ಯವ್ರತ್ ಸಿಂಗ್ ರಾವತ್ ಅವರು ಪ್ರತಿಕ್ರಿಯಿಸಿ, “ಸಮವಸ್ತ್ರವು ನೀತಿ ಸಂಹಿತೆಯ ಭಾಗವಾಗಿದೆ. ಪ್ರವೇಶದ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕುರಿತು ಸಹಿ ಹಾಕಿರುತ್ತಾರೆ. ಕಾಲೇಜಿನಲ್ಲಿ 12,000 ವಿದ್ಯಾರ್ಥಿಗಳಿದ್ದಾರೆ. ಹೆಚ್ಚುತ್ತಿರುವ ಗೂಂಡಾಗಿರಿ ಮತ್ತು ಹೊರಗಿನವರ ಉಪಟಳವನ್ನು ತಡೆಯಲು ಕ್ರಮ ಜರುಗಿಸಲಾಗಿದೆ” ಎಂದು ಹೇಳಿದ್ದಾರೆ.
“ಪ್ರತಿಭಟನಕಾರರು ಕಾಲೇಜು ವಿದ್ಯಾರ್ಥಿಗಳಲ್ಲ. ನಮಗೆ ಯಾರೊಂದಿಗೂ ಸಮಸ್ಯೆ ಇಲ್ಲ, ಅವರು ಸ್ಕಾರ್ಫ್ ಅಥವಾ ಹಿಜಾಬ್ ಧರಿಸಬಹುದು. ಆದರೆ ಸಮವಸ್ತ್ರ ಕಡ್ಡಾಯವಾಗಿದೆ. ಬದಲಾಯಿಸುವ ಕೋಣೆಯಲ್ಲಿ ಬುರ್ಖಾವನ್ನು ತೆಗೆಯಬೇಕು. ಅಂತಿಮವಾಗಿ, ಸಮವಸ್ತ್ರವನ್ನು ಧರಿಸಲು ಇಷ್ಟಪಡದವರೊಂದಿಗೆ ತಕರಾರುಗಳಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕ್ರಮವು ಕಾನೂನುಬದ್ಧವಾಗಿದೆಯೇ?
ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, “ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ಅಧಿಕಾರವು ಪ್ರಾಂಶುಪಾಲರಿಗೆ ಇರುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಎಂ.ಕಾಮ್ ವಿದ್ಯಾರ್ಥಿನಿ ಮೆಹಕ್ ಅನ್ಸಾರಿ ಮಾತನಾಡಿ, “ಬಟ್ಟೆ ಬದಲಾಯಿಸುವ ಕೊಠಡಿ ಇದ್ದಾಗ ಬುರ್ಖಾ ತೆಗೆದರೆ ಏನು ತೊಂದರೆ? ರಸ್ತೆಯಲ್ಲಿ ಬುರ್ಖಾ ತೆಗೆಯುವಂತಾಗಿದೆ ಎಂಬುದು ಸುಳ್ಳು” ಎಂದು ಹೇಳಿದ್ದಾರೆ.
ಮತ್ತೋರ್ವ ವಿದ್ಯಾರ್ಥಿ ಮಧು ಮನ್ಶಾ ಮಾತನಾಡಿ, “ಈ ಹಿಂದೆ ಗುರುತಿನ ಚೀಟಿ ತಪಾಸಣೆ ಇಲ್ಲದ ಕಾರಣ ಯಾರಾದರೂ ಕಾಲೇಜಿಗೆ ಪ್ರವೇಶಿಸುತ್ತಿದ್ದರು. ಆದರೆ ಈಗ ಗುರುತಿನ ಚೀಟಿಯನ್ನೂ ಪರಿಶೀಲಿಸಲಾಗಿದೆ. ಈಗ ಗುರುತಿನ ಚೀಟಿ ಮತ್ತು ಸಮವಸ್ತ್ರ ಹೊಂದಿರುವವರು ಮಾತ್ರ ಪ್ರವೇಶಿಸಬಹುದು” ಎಂದಿದ್ದಾರೆ.
ಕಾಲೇಜಿನಲ್ಲಿ ಡಿಫೆನ್ಸ್ ಸ್ಟಡೀಸ್ ಕಲಿಸುವ ಪ್ರೊಫೆಸರ್ ಆನಂದ್ ಕುಮಾರ್, “ಮಾಧ್ಯಮದ ಒಂದು ವಿಭಾಗವು ದಾರಿ ತಪ್ಪಿಸುವ ವರದಿ ಮಾಡುತ್ತಿದೆ. ಹಿಜಾಬ್ ಅನ್ನು ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ. ಆದರೆ ಅವರಿಗೆ ಹಿಜಾಬ್ ಮತ್ತು ಬುರ್ಖಾ ನಡುವಿನ ವ್ಯತ್ಯಾಸ ತಿಳಿದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊತ್ವಾಲಿ ಎಸ್‌ಎಚ್‌ಒ ವಿಪ್ಲವ್ ಶರ್ಮಾ ಮಾತನಾಡಿ, “ಕಾಲೇಜಿನಲ್ಲಿ ಡ್ರೆಸ್ ಕೋಡ್ ಬಹಳ ಹಿಂದಿನಿಂದಲೂ ಇದೆ. ಅಂತಹದ್ದೇನೂ ಇಲ್ಲದಿರುವಾಗ ಬುರ್ಖಾ ಸಮಸ್ಯೆ ಎಂದು ಮಾಧ್ಯಮಗಳು ತಪ್ಪುದಾರಿಗೆಳೆಯುವ ಸುದ್ದಿಗಳನ್ನು ನೀಡುತ್ತಿವೆ” ಎಂದು ಟೀಕಿಸಿದ್ದಾರೆ.


