ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗಳ ಯಾವುದೆ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಕಾಂಗ್ರೆಸ್ ಗುರುವಾರ ಘೋಷಿಸಿದೆ. ಪಕ್ಷವು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿದೆ. ಯುಪಿ ಉಪ ಚುನಾವಣೆ
ಕಾಂಗ್ರೆಸ್‌ನ ಉತ್ತರ ಪ್ರದೇಶ ಮುಖ್ಯಸ್ಥ ಅಜಯ್ ರೈ ಅವರೊಂದಿಗೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಅಥವಾ ಇತರ ಇಂಡಿಯಾ ಮೈತ್ರಿಯ ಪಕ್ಷಗಳ ಗೆಲುವಿಗೆ ಬೇಷರತ್ತಾಗಿ ಶ್ರಮಿಸುತ್ತಾರೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಸ್ತುತ ರಾಜಕೀಯ ಸನ್ನಿವೇಶಗಳಲ್ಲಿ ಪಕ್ಷದ ಸಂಘಟನೆ ಅಥವಾ ಪಕ್ಷವನ್ನು ಬಲಪಡಿಸುವ ಸಮಯ ಅಲ್ಲ, ಬದಲಾಗಿ ಸಂವಿಧಾನವನ್ನು ರಕ್ಷಿಸುವ ಸಮಯವಾಗಿದೆ ಅವರು ಹೇಳಿದ್ದಾರೆ. ಯುಪಿ ಉಪ ಚುನಾವಣೆ
ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾಜವಾದಿ ಪಕ್ಷದ ನಾಯಕತ್ವದೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವಿನಾಶ್ ಪಾಂಡೆ ಹೇಳಿದ್ದಾರೆ.
ಉತ್ತರ ಪ್ರದೇಶದ ಎಲ್ಲಾ ಇಂಡಿಯಾ ಮೈತ್ರಿಯ ಅಭ್ಯರ್ಥಿಗಳು ಸಮಾಜವಾದಿ ಪಕ್ಷದ ಚಿಹ್ನೆಯಾದ ‘ಸೈಕಲ್’ ಚುನಾವಣಾ ಚಿಹ್ನೆಯ ಮೇಲೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ ಒಂದು ದಿನದ ನಂತರ ಕಾಂಗ್ರೆಸ್ ಅದನ್ನು ಸಮರ್ಥಿಸಿಕೊಂಡಿದೆ.
ಆದಾಗ್ಯೂ, ಅಭ್ಯರ್ಥಿ ಮತ್ತು ಚಿಹ್ನೆ ಎರಡೂ ಸಮಾಜವಾದಿ ಪಕ್ಷ ಅಥವಾ ಇತರ ಯಾವುದೇ ಇಂಡಿಯಾ ಮೈತ್ರಿಯ ಪಕ್ಷದ್ದಾಗಿರುತ್ತದೆ, ಕಾಂಗ್ರೆಸ್‌ನದ್ದಲ್ಲ ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ. ಮೈತ್ರಿಯ ನಿರ್ಧಾರವನ್ನು ಯಾವುದೇ ಸೀಟು ಹಂಚಿಕೆ ಲೆಕ್ಕದಲ್ಲಿ ಮಾಡಲಾಗಿಲ್ಲ, ಗೆಲುವಿನ ಲೆಕ್ಕಾಚಾರದಲ್ಲಿ ಮಾಡಲಾಗಿದೆ ಎಂದು ಅಖಿಲೇಶ್ ಯಾದವ್ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಉಪಚುನಾವಣೆ | ಚನ್ನಪಟ್ಟಣ, ಸಂಡೂರಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್ : ಶಿಗ್ಗಾವಿಯಲ್ಲಿ ಹೊಸ ಲೆಕ್ಕಾಚಾರ
“ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಒಗ್ಗಟ್ಟಾಗಿದ್ದು, ದೊಡ್ಡ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಈ ಉಪಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆಲುವಿನ ಹೊಸ ಅಧ್ಯಾಯವನ್ನು ಬರೆಯಲಿದೆ” ಎಂದು ಅಖಿಲೇಶ್ ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಖಿಲೇಶ್ ಅವರು ಗುರುವಾರ X ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದು, ಸಂವಿಧಾನ, ಮೀಸಲಾತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ರಕ್ಷಿಸಲು ತಾವು ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದ ಕತೇಹಾರಿ, ಕರ್ಹಾಲ್, ಮೀರಾಪುರ್, ಘಾಜಿಯಾಬಾದ್, ಮಜವಾನ್, ಸಿಸಮಾವು, ಖೈರ್, ಫುಲ್ಪುರ್ ಮತ್ತು ಕುಂದರ್ಕಿ ಸೇರಿ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗೆ ಮತ್ತೊಮ್ಮೆ ಬೆದರಿಸಿದ ದೆಹಲಿಯ ಬಿಜೆಪಿ ಕೌನ್ಸಿಲರ್!
ಮುಸ್ಲಿಂ ವ್ಯಾಪಾರಿಗೆ ಮತ್ತೊಮ್ಮೆ ಬೆದರಿಸಿದ ದೆಹಲಿಯ ಬಿಜೆಪಿ ಕೌನ್ಸಿಲರ್!


