ನೊಯ್ಡಾ: ಪೊಲೀಸ್ ಅನುಮತಿಯಿಲ್ಲದೆ ನಡೆದ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ (ಎಸ್‌ಪಿ) 60 ಕ್ಕೂ ಹೆಚ್ಚು ಸದಸ್ಯರ ವಿರುದ್ಧ ನೋಯ್ಡಾ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಪ್ರತಿಭಟನಾಕಾರನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಪರಿಹಾರಕ್ಕಾಗಿ ಒತ್ತಾಯಿಸಿ ಗ್ರೇಟರ್ ನೊಯ್ಡಾ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪ್ರತಿಕೃತಿ ದಹಿಸಿದ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಮಾಜವಾದಿಯ ಸದಸ್ಯರು ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲವೆಂಬುದನ್ನು ತಳ್ಳಿಹಾಕಿದ್ದಾರೆ. ಪ್ರತಿಭಟಿಸಲು ಅನುಮತಿಯನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಮೋಹಿತ್ ನಗರ, ಲೋಕೇಶ್ ಕುಮಾರ್, ನಿತಿನ್ ಭದಾನ, ಮೋಹಿತ್ ತೋಮರ್ ಅಲಿಯಾಸ್ ನವಾಬಿ, ಜೆಪಿ ಯಾದವ್, ಬಾದಲ್ ಮತ್ತು 60 ಅಪರಿಚಿತ ವ್ಯಕ್ತಿಗಳು ಮುಖ್ಯಮಂತ್ರಿಯ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ಪ್ರತಿಕೃತಿಯನ್ನು ದಹಿಸಿದ ನಂತರ ಎಲ್ಲರೂ ಸ್ಥಳದಿಂದ ಓಡಿಹೋದರು. ಈ ಕುರಿತು ಸೂರಜ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜವಾದಿ ಪಕ್ಷದ ಕೆಲವು ಸದಸ್ಯರನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಸೆಂಟ್ರಲ್ ನೋಯ್ಡಾ) ಶಕ್ತಿ ಮೋಹನ್ ಅವಸ್ತಿ ತಿಳಿಸಿದರು.
ಇದನ್ನೂ ಓದಿ…ದೇಶದಲ್ಲಿ 5.8 ಕೋಟಿ ನಕಲಿ ಪಡಿತರ ಚೀಟಿ ರದ್ದು: ಕೇಂದ್ರ ಆಹಾರ ಸಚಿವಾಲಯ
ಎಸ್‌ಪಿ ಜಿಲ್ಲಾಧ್ಯಕ್ಷ ಸುಧೀರ್ ಭಾಟಿ ಮಾತನಾಡಿ,ನಮ್ಮ ಪ್ರತಿಭಟನೆ ಮುಂದುವರಿಯಲಿದೆ. ರೈತರ ಪರ ಹೋರಾಟ ನಡೆಸಲು ಎಸ್‌ಪಿ ಹೈಕಮಾಂಡ್‌ನಿಂದ ನಮಗೆ ಸೂಚನೆ ನೀಡಲಾಗಿದೆ. ಪ್ರತಿಕೃತಿಯನ್ನು ದಹಿಸುವ ಕಲ್ಪನೆಯು ಪೂರ್ವ ಯೋಜಿತವಲ್ಲ; ಇದು ಒಂದು ಪ್ರತಿಭಟನೆಯ ಭಾಗವಾಗಿತ್ತು ಎಂದು ಹೇಳಿದರು.
ನವೆಂಬರ್ 25ರಂದು ಸೂರಜ್‌ಪುರ ಜಿಲ್ಲಾಧಿಕಾರಿ ಮುಂದೆ ಸಮಾಜವಾದಿ ಪಕ್ಷವು ಮತ್ತೊಂದು ಪ್ರತಿಭಟನೆಯನ್ನು ಆಯೋಜಿಸಲಿದೆ ಎಂದು ಭಾಟಿ ತಿಳಿಸಿದರು.
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಪ್ರದೇಶಗಳ ಅಭಿವೃದ್ಧಿಗಾಗಿ ಭೂ ಸ್ವಾಧೀನಪಡಿಸಿಕೊಂಡಿರುವ ರೈತರ ಕುಂದುಕೊರತೆಗಳನ್ನು ಪರಿಹರಿಸಲು ರಚಿಸಲಾದ ಸರ್ಕಾರದ ತ್ರಿಸದಸ್ಯ ಸಮಿತಿಯ ವರದಿಯನ್ನು ವಿರೋಧಿಸಿ ರೈತರು ಜಿಬಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ…ದಲಿತ ಮಹಿಳೆಯ ಹತ್ಯೆ | 21 ಮಂದಿ ಅಪರಾಧಿಗಳು : ತುಮಕೂರು ನ್ಯಾಯಾಲಯ ಮಹತ್ವದ ತೀರ್ಪು
ಈ ಸಮಿತಿಯು ಅಕ್ಟೋಬರ್ 22 ರಂದು ತನ್ನ ವರದಿಯಲ್ಲಿ ರೈತರ ಮೂರು ನಿರ್ಣಾಯಕ ಬೇಡಿಕೆಗಳನ್ನು ತಿರಸ್ಕರಿಸಿದೆ. 1997 ರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಬದಲಾಗಿ 10% ವಸತಿ ಭೂಮಿ ನೀಡುವುದು, 1997 ರಿಂದ 2002 ರವರೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ರೈತರಿಗೆ ಪರಿಹಾರದಲ್ಲಿ 64.7% ಹೆಚ್ಚಳ ಮಾಡುವುದು, ವಸತಿ ಸಮುಚ್ಚಯಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಅನುಮತಿ ನೀಡುವುದು ರೈತರ ಮೂರು ಪ್ರಮುಖ ಬೇಡಿಕೆಗಳಾಗಿವೆ. ಆದಾಗ್ಯೂ, ಸಮಿತಿಯು ರೈತ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಮೂಲ ವಸತಿ ಭೂಮಿಯಲ್ಲಿ ಕನಿಷ್ಠ 1,000 ಚದರ ಮೀಟರ್‌ಗಳನ್ನು ಬಳಸಲು ಅನುಮತಿಸುವ ಬೇಡಿಕೆಯನ್ನು ಒಪ್ಪಿಕೊಂಡಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ ಪ್ರತಿಕೃತಿ ದಹಿಸಿದ ಘಟನೆಯನ್ನು ಟೀಕಿಸಿದೆ. ಜಿಲ್ಲಾಧ್ಯಕ್ಷ ಗಜೇಂದ್ರ ಮಾವಿ ಮಾತನಾಡಿ, ಅವರಂತಹ ಅರಾಜಕತಾವಾದಿಗಳಿಗೆ (ಎಸ್‌ಪಿ) ರಾಜ್ಯದ ಕಾನೂನು-ಸುವ್ಯವಸ್ಥೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ರಾಜ್ಯದಲ್ಲಿ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು,ಆದರೆ ಅನುಮತಿಯಿಲ್ಲದೆ ಹಾಗೆ ಮಾಡಬಾರದು ಎಂದಿದ್ದಾರೆ.
ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ, 1932 ರ ಸೆಕ್ಷನ್ 7 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ…ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಬದಲಾದರೂ ಗೃಹಲಕ್ಷ್ಮಿ ಹಣ ಸಿಗಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್


