ನವದೆಹಲಿ: ಮೊಬೈಲ್ ಫೋನ್‌ನಲ್ಲಿ ಪಾಕಿಸ್ತಾನಿ ಹಾಡನ್ನು ಆಲಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 13 ರಂದು ಜಿಲ್ಲೆಯ ಭೂತಾ ಪ್ರದೇಶದ ಸಿಂಘೈ ಮುರಾವನ್ ಗ್ರಾಮದ ಇಬ್ಬರು ಬಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 16 ಮತ್ತು 17ರ ಹರೆಯದ ಸೋದರ ಸಂಬಂಧಿಗಳು ಸಿಂಘೈ ಮುರಾವನ್‌ನಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನೆರೆಯ ದೇಶವನ್ನು ಹೊಗಳಿದ ಹಾಡನ್ನು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿ ಆಶಿಶ್ ಎಂಬವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಾಕಿಸ್ತಾನಿ ಹಾಡನ್ನು ಪ್ಲೇ ಮಾಡಿದ್ದನ್ನು ವಿರೋಧಿಸಿದ ಆಶಿಶ್, ಬಾಲಕರೊಂದಿಗೆ ಜಗಳವಾಡಿದ್ದಾರೆ. ಘಟನೆಯ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಹಾಡು ಕೇಳುವುದನ್ನು ನಿಲ್ಲಿಸುವಂತೆ ಇಬ್ಬರಿಗೂ ಹೇಳಲಾಯಿತು. ಆದರೆ ನಿಂದನೆ ಮಾಡಿದ ಬಾಲಕರು ಭಾರತದ ಬಗ್ಗೆಯೂ ಕೆಟ್ಟದ್ದಾಗಿ ಮಾತನಾಡಿದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಏಪ್ರಿಲ್ 13 ರ ಬುಧವಾರ ಸಂಜೆ 5 ಗಂಟೆಗೆ ಇಬ್ಬರನ್ನು ಕರೆದುಕೊಂಡು ಹೋಗಲಾಯಿತು. ಇಡೀ ರಾತ್ರಿ ಠಾಣೆಯಲ್ಲಿ ಇರಿಸಿಕೊಳ್ಳಲಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಸ್ಥಳೀಯ ವರದಿಗಾರನಿಂದ ವಿಡಿಯೊ ಸಂಗ್ರಹಿಸಿದ ‘ದಿ ವೈರ್’ ವರದಿ ಮಾಡಿದ್ದು, “ಇವರಿಬ್ಬರ ಸೋದರಸಂಬಂಧಿ ಸದ್ದಾಂ ಹುಸೇನ್ ಪ್ರಕಾರ ಕಿರಿಯ ಸಹೋದರ ಕೇವಲ 40 ಸೆಕೆಂಡ್ ಹಾಡು ಹಾಕಿದ್ದಾನೆ. ಬೇಕಂತಲೇ ಪ್ಲೇ ಮಾಡಿಲ್ಲ. ನಂತರ ಕ್ಷಮೆಯಾಚಿಸಿದ್ದಾರೆ. ಆದರೆ ಕ್ಷಮೆಯನ್ನು ಒಪ್ಪಿಕೊಂಡಿಲ್ಲ.”
ಕಿರಿಯ ಹುಡುಗನ ಚಿಕ್ಕಮ್ಮ ಸಹನಾ ಅವರು ಕಿರಾಣಿ ಅಂಗಡಿಯಿಂದ ಕೆಲವು ನಿಮಿಷಗಳ ಕಾಲ ಹೊರಹೋಗಿದ್ದಾಗ ಘಟನೆ ನಡೆದಿದೆ. ಅರಿವಿಗೆ ಬಾರದೆ ಹಾಡು ಪ್ಲೇ ಮಾಡಿ ಬಂಧನಕ್ಕೊಳಗಾದುದನ್ನು ಕಂಡು ಸಹನಾ ಆತಂಕಿತರಾಗಿದ್ದಾರೆ. “ಈ ಬಾಲಕರು ವಿದ್ಯಾವಂತರಲ್ಲ. ಅವರ ಪರವಾಗಿ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
ಪಾಕಿಸ್ತಾನಿ ಬಾಲ ಕಲಾವಿದೆ ಆಯತ್ ಆರಿಫ್ ಅವರ ‘ಪಾಕಿಸ್ತಾನ್ ಜಿಂದಾಬಾದ್’ ಹಾಡನ್ನು ಈ ಹುಡುಗರು ಕೇಳುತ್ತಿದ್ದರು ಎನ್ನಲಾಗಿದೆ.
ಬರೇಲಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ), ರಾಜ್‌ಕುಮಾರ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದು, ದೂರಿನ ಮೇರಿಗೆ ಎಫ್‌ಐಆರ್ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಇಂದಿರಮ್ಮನ ಕಾಲದಿಂದಲೂ ಲಿಂಗತ್ವ ಅಲ್ಪಸಂಖ್ಯಾತರ ಜೊತೆ ಇದ್ದದ್ದು ಕಾಂಗ್ರೆಸ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಕ್ಕಯ್ ಮನದಾಳ
ಬರೇಲಿಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ರೋಹಿತ್ ಸಿಂಗ್ ಸಜ್ವಾನ್ ಅವರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, “ಯುವಕರನ್ನು ಇಂದು ಬೆಳಿಗ್ಗೆ ವಿಚಾರಣೆಗೆ ಕರೆಯಲಾಗುತ್ತಿದೆ ಎಂದು ನನಗೆ ತಿಳಿಸಿದ್ದರಿಂದ ರಾತ್ರಿಯಿಡೀ ಪೊಲೀಸರು ಅವರನ್ನು ಬಂಧಿಸಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ರೆಕಾರ್ಡ್ ಮಾಡಿದ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸದ ಕಾರಣ ಅಂತಹ ಸಂದರ್ಭಗಳಲ್ಲಿ ನೋಟಿಸ್‌ಗಳನ್ನು ಸಲ್ಲಿಸಲು ಅವಕಾಶವಿದೆ. ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ವರದಿಯನ್ನು ನೀಡಲು ನಾನು ಹಿರಿಯ ಪೊಲೀಸರಲ್ಲಿ ಕೇಳುತ್ತೇನೆ” ಎಂದಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153B, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


