ಸಚಿವರೊಬ್ಬರಿಗೆ ಶಿಕ್ಷೆಯಾಗಿ ಮತ್ತೊಬ್ಬರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ, ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಮುಂದಾಗಿದೆ.
ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಿದ ನಂತರ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಆರಂಭಿಸಬಹುದು ಎಂದು ಮೂಲಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ರಾಜಕೀಯ ಪ್ರೇರಿತ ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗುವುದು. ಗಂಭೀರ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ. ವಿರೋಧ ಪಕ್ಷಗಳ ಅಧಿಕಾರವಧಿಯಲ್ಲಿ ಸಚಿವರು ಮತ್ತು ಪಕ್ಷದ ಶಾಸಕರ ವಿರುದ್ಧದ ಹಲವು ಪ್ರಕರಣಗಳು ದಾಖಲಾಗಿವೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಹೆಚ್ಚಿನ ಪ್ರಕರಣಗಳು ‘ರಾಜಕೀಯ ಪ್ರೇರಿತ’ವಾಗಿವೆ. ಅವುಗಳನ್ನು ಹಿಂಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಪಾದಿಸಲಾಗಿದೆ. ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಅಧಿಕಾರದಲ್ಲಿದ್ದಾಗ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನೂ ಹಿಂಪಡೆಯಲಾಗುತ್ತಿದೆ ಎಂದಿದ್ದಾರೆ.
ಯುಪಿ ಕ್ಯಾಬಿನೆಟ್‌ನಲ್ಲಿರುವ 52 ಸಚಿವರ ಪೈಕಿ 22 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಅವರಲ್ಲಿ ಹೆಚ್ಚಿನವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣಗಳಲ್ಲಿ ತಪ್ಪಿತಸ್ಥರಾದರೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬಹುದು.
ಇದನ್ನೂ ಓದಿರಿ: ಎಸಿಬಿ ರದ್ದು ಮಾಡಿದ ಹೈಕೋರ್ಟ್: ಏನಂತಾರೆ ರಾಜಕಾರಣಿಗಳು?
ರಾಜ್ಯ ವಿಧಾನಸಭೆಯ 403 ಶಾಸಕರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದ ಸಚಿವರಲ್ಲಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಯೋಗೇಂದ್ರ ಉಪಾಧ್ಯಾಯ, ಧರ್ಮಪಾಲ್ ಸಿಂಗ್ ನಂದ್ ಗೋಪಾಲ್ ನಂದಿ ಮೊದಲಾದವರ ಹೆಸರುಗಳಿವೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ರಾಕೇಶ್ ಸಚನ್ ಅವರನ್ನು ಅಪರಾಧಿ ಎಂದು ಕಾನ್ಪುರ್ ನ್ಯಾಯಾಲಯ ತೀರ್ಪು ನೀಡಿದೆ. ಸಚಿವ ಮತ್ತು ಬಿಜೆಪಿಯ ಮೈತ್ರಿಕೂಟದ ಪಾಲುದಾರ ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದರಿಂದ ಸರ್ಕಾರ ಮುಜುಗರಕ್ಕೊಳಗಾಗಿದೆ. ವಿರೋಧ ಪಕ್ಷಗಳು ಕಟು ಟೀಕೆಗಳನ್ನು ಮಾಡುತ್ತಿವೆ. ಕೂಡಲೇ ಸಚಿವರನ್ನು ವಜಾಗೊಳಿಸಬೇಕು ಎಂದು ಎಸ್‌ಪಿ ಮತ್ತು ಕಾಂಗ್ರೆಸ್ ಒತ್ತಾಯಿಸಿವೆ.


