ಗಾಝಿಯಾಬಾದ್, ಮೀರತ್ ಮತ್ತು ಮುಝಾಫರ್ ನಗರ ವ್ಯಾಪ್ತಿಯ 111 ಕಿ.ಮೀ ‘ಕನ್ವರ್ ಮಾರ್ಗ’ ಯೋಜನೆಗಾಗಿ ಸಂಪೂರ್ಣವಾಗಿ ಬೆಳೆದು ನಿಂತಿರುವ 33,000ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಮಾಹಿತಿ ನೀಡಿದೆ.
ಎನ್‌ಜಿಟಿ ಅಧ್ಯಕ್ಷ ಪ್ರಕಾಶ್ ಶ್ರೀವಾಸ್ತವ, ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರ ಸಮಿತಿಯು ಮುಂದಿನ ವಿಚಾರಣೆಯ ದಿನಾಂಕ ಜುಲೈ 8ರೊಳಗೆ ಈ ಕುರಿತು ಹೆಚ್ಚಿನ ವಿವರಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮೂರು ಜಿಲ್ಲೆಗಳಲ್ಲಿ ಯೋಜನೆಗಾಗಿ 1.1 ಲಕ್ಷ ಮರಗಳು ಮತ್ತು ಗಿಡಗಳನ್ನು ಕಡಿಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಎನ್‌ಜಿಟಿ ಉತ್ತರ ಪ್ರದೇಶದ ಸರ್ಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಚಿವಾಲಯ, ಲೋಕೋಪಯೋಗಿ ಇಲಾಖೆ ಮತ್ತು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಕಡಿಯಬೇಕಾದ ಮರಗಳ ವಿವರಗಳನ್ನು ಕೇಳಿತ್ತು. ವಿವರಗಳನ್ನು ಸರ್ಕಾರವು ಒದಗಿಸಿದೆ. ಆದರೆ, ಎನ್‌ಜಿಟಿ ಇನ್ನಷ್ಟು ಮಾಹಿತಿ ನೀಡುವಂತೆ ಸೂಚಿಸಿದೆ.
ಹರಿದ್ವಾರದಲ್ಲಿ ಗಂಗಾನದಿಯಿಂದ ನೀರು ಸಂಗ್ರಹಿಸಿ ವಿವಿಧ ನಗರಗಳು ಮತ್ತು ಹಳ್ಳಿಗಳಿಗೆ ಹಿಂದಿರುಗುವ ಯುಪಿ, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಮಧ್ಯ ಪ್ರದೇಶದ ಸುಮಾರು 1 ಕೋಟಿ ಕನ್ವರ್ ಭಕ್ತರ ಉಪಯೋಗಕ್ಕೆ ವಿಶೇಷ ‘ಕನ್ವರ್ ಮಾರ್ಗ’ ನಿರ್ಮಿಸಲು ಬಯಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಎನ್‌ಜಿಟಿಗೆ ತಿಳಿಸಿದೆ.
“ಈ ಮಾರ್ಗವನ್ನು ಸಾಮಾನ್ಯ ಜನರು ಮತ್ತು ಭಕ್ತರಿಗಾಗಿ ‘ತುಂಬಾ ಜನನಿಬಿಡ’ ವಿಭಾಗದಲ್ಲಿ ಸೇರಿಸಲಾಗಿದೆ. ಮುಝಾಫರ್‌ನಗರ, ಮೀರತ್ ಮತ್ತು ಗಾಝಿಯಾಬಾದ್ ಈ ಮೂರು ಜಿಲ್ಲೆಗಳ ಒಟ್ಟು 54 ಹಳ್ಳಿಗಳು ಈ ಮಾರ್ಗದಲ್ಲಿ ಬರುತ್ತವೆ. ಶ್ರಾವಣ ಮಾಸದಲ್ಲಿ ಸಂಚಾರಕ್ಕೆ ಸಾಕಷ್ಟು ಅಡ್ಡಿಯಾಗುತ್ತಿದೆ” ಎಂದು ಎನ್‌ಜಿಟಿಗೆ ಹೇಳಿದೆ.
ಯೋಜನೆಗೆ ಸಂಬಂಧಿಸಿದಂತೆ ಎನ್‌ಜಿಟಿ ನೀಡಿದ್ದ ಈ ಹಿಂದಿನ ಆದೇಶದಲ್ಲಿ “ಪರಿಸರ ಮಾನದಂಡಗಳ ಅನುಸರಣೆಗೆ ಸಂಬಂಧಿಸಿದ ಗಣನೀಯ ಸಮಸ್ಯೆಗಳನ್ನು” ಎತ್ತಿತ್ತು.
“ಕನ್ವರ್ ಮಾರ್ಗ ಯೋಜನೆಗೆ ಕಡಿಯುವ ಮರಗಳಿಗೆ ಪರ್ಯಾಯವಾಗಿ ರಾಜ್ಯ ಸರ್ಕಾರವು ಲಲಿತ್‌ಪುರ ಜಿಲ್ಲೆಯಲ್ಲಿ 222 ಹೆಕ್ಟೇರ್‌ಗಳನ್ನು ಅರಣ್ಯೀಕರಣಕ್ಕಾಗಿ ಗುರುತಿಸಿದೆ. ನಾವು ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರಕ್ಕೆ (CAMPA)1.5 ಕೋಟಿ ರೂ. ನೀಡಿದ್ದೇವೆ. ನಾವು ಅನುಸರಿಸಿದ ನಿಯಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುತ್ತೇವೆ ಎಂದು ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗಂಗಾ ಮೇಲ್ದಂಡೆ ಕಾಲುವೆಯ ಉದ್ದಕ್ಕೂ ಪಶ್ಚಿಮ ಯುಪಿ ಮತ್ತು ಉತ್ತರಾಖಂಡ ಜಿಲ್ಲೆಗಳ ಮೂಲಕ ಸಾಮಾನ್ಯ ರಸ್ತೆಗೆ ಪರ್ಯಾಯವಾಗಿ ಕನ್ವರ್ ಮಾರ್ಗವನ್ನು 2018ರಲ್ಲಿ ಪ್ರಸ್ತಾಪಿಸಲಾಗಿದೆ. 2020ರಲ್ಲಿ, ಸರ್ಕಾರದ ವೆಚ್ಚ ಮತ್ತು ಹಣಕಾಸು ಸಮಿತಿಯು ಯೋಜನೆಗೆ ತನ್ನ ಅನುಮೋದನೆಯನ್ನು ನೀಡಿದೆ.
ಈ ರಸ್ತೆ ಯೋಜನೆಯು 10 ಪ್ರಮುಖ ಸೇತುವೆಗಳು, 27 ಚಿಕ್ಕ ಸೇತುವೆಗಳು ಮತ್ತು ಒಂದು ರೈಲ್ವೆ ಮೇಲ್ಸೇತುವೆಯನ್ನು ಒಳಗೊಂಡಿವೆ. ಗಂಗಾ ಕಾಲುವೆಯ ಮೇಲಿನ ಸೇತುವೆಗಳು ಬಹುತೇಕ 1850ರ ಸುಮಾರಿಗೆ ನಿರ್ಮಿಸಿದ್ದಾಗಿವೆ.
ಇದನ್ನೂ ಓದಿ : ಕೃಷ್ಣ ಜನ್ಮಸ್ಥಾನ-ಶಾಹಿ ಈದ್ಗಾ ಪ್ರಕರಣ: ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್


