ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 5 ವರ್ಷಗಳಾಗುತ್ತಾ ಬರುತ್ತಿದೆ. ಹತ್ಯೆಯ ಆರೋಪಿಗಳನ್ನು ಬಂಧಿಸಿ 3 ವರ್ಷಗಳಾಗುತ್ತಿವೆ. ಆರೋಪಿಗಳ ಪರವಾಗಿ 60ಕ್ಕೂ ಹೆಚ್ಚು ವಕೀಲರು ವಕಾಲತ್ತು ವಹಿಸಿದ್ದರು. ಅವರು ವಿನಾಕಾರಣ ಸಲ್ಲಿಸಿದ್ದ ಅರ್ಜಿಗಳಿಂದ ಗೌರಿ ಹತ್ಯೆ ಪ್ರಕರಣದ ವಿಚಾರಣೆ ತಡವಾಗಿತ್ತು. ದೂರುದಾರರಾದ ಕವಿತಾ ಲಂಕೇಶ್‌ರವರು ತ್ವರಿತ ಕೋರ್ಟು ರಚಿಸಿ ಆದಷ್ಟು ಬೇಗ ವಿಚಾರಣೆ ಆರಂಭಿಸಬೇಕೆಂದು ಮನವಿ ಮಾಡಿದ್ದರು. ಕೊನೆಗೂ ಈ ವರ್ಷದ ಮೇ 27ರಿಂದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಹಾಲ್ ನಂ.1ರಲ್ಲಿ ಸೆಷನ್ಸ್ ನ್ಯಾಯಾಧೀಶರಾದ ಸಿ.ಎಂ ಜೋಶಿಯವರ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಪ್ರತಿ ತಿಂಗಳ ಮೊದಲ ಸೋಮವಾರದಿಂದ ಐದು ದಿನಗಳ ಕಾಲ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಆ ಭಾಗವಾಗಿ ಜುಲೈ 4ರಿಂದ 8ನೇ ತಾರೀಖಿನವರೆಗೆ 5 ದಿನಗಳ ಕಾಲ ವಿಚಾರಣೆ ನಡೆಯಿತು.
ಗೌರಿ ಲಂಕೇಶ್ ಹತ್ಯೆಯ 18 ಆರೋಪಿಗಳಲ್ಲಿ ಪೊಲೀಸರು 17 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ 11 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ಉಳಿದ 06 ಜನರು ನರೇಂದ್ರ ದಾಬೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿಯವರ ಹತ್ಯೆ ಪ್ರಕರಣದಲ್ಲಿಯೂ ಆರೋಪಿಗಳಾಗಿರುವ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಅರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗುತ್ತಿದೆ. 18ನೇ ಆರೋಪಿ ವಿಕಾಸ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ.
ಈ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302, 120(ಬಿ) ಸೇರಿದಂತೆ ಸಂಘಟಿತ ಸಂಚು, ಶಸ್ತ್ರಾಸ್ತ್ರ ಕಾಯಿದೆ ಕಲಮುಗಳು ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ (KOCCA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು 527 ಜನ ಸಾಕ್ಷಿಗಳು ಹಾಗೂ 1000ಕ್ಕೂ ಹೆಚ್ಚು ಪುರಾವೆಗಳನ್ನು ಸಂಗ್ರಹಿಸಿದ್ದು, ಸುಮಾರು 10 ಸಾವಿರ ಪುಟಗಳ ಬೃಹತ್ ಚಾರ್ಜ್‌ಶೀಟ್‌ಅನ್ನು 2018ರ ನವಂಬರ್‌ನಲ್ಲೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
’ಎಲ್ಲಾ ಆರೋಪಿಗಳು ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಎಂಬ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ಸನಾತನ ಸಂಸ್ಥೆಯ ಮಾರ್ಗದರ್ಶಕ ಗ್ರಂಥವಾಗಿರುವ ’ಕ್ಷಾತ್ರ ಧಾರ್ಮ ಸಾಧನ’ದಿಂದ ಪ್ರೇರಣೆ ಪಡೆದಿದ್ದಾರೆ. ಸನಾತನ ಸಂಸ್ಥೆಯ ಸಿದ್ಧಾಂತವು ಹಿಂದೂ/ಸನಾತನ ಧರ್ಮಕ್ಕೆ ಕಂಟಕಪ್ರಾಯವಾಗಿರುವ ’ದುರ್ಜನ’ರನ್ನು ಹತ್ಯೆ ಮಾಡುವ ಮೂಲಕ ಸನಾತನ ಧರ್ಮಕ್ಕೆ ಇರುವ ಅಡ್ಡಿಯನ್ನು ನಿವಾರಿಸಿಕೊಳ್ಳಬೇಕು; ಅದರಲ್ಲೂ ಸ್ವಧರ್ಮೀಯರಲ್ಲೇ ಇರುವ ದ್ರೋಹಿಗಳನ್ನು ಶಿಕ್ಷಿಸಬೇಕು ಎಂಬುದಾಗಿದೆ. ಇದನ್ನೇ ಆ ಗ್ರಂಥವೂ ಹೇಳುತ್ತದೆ. ಈ ಸಿದ್ಧಾಂತವೇ ಆರೋಪಿಗಳಿಗೆ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡುವಂತೆ ಪ್ರೇರಣೆ ನೀಡಿದೆ.
ಗೌರಿಯವರ ಬರಹಗಳು-ಭಾಷಣಗಳನ್ನು ಹಿಂದೂ ವಿರೋಧಿ ಎಂದು ಭಾವಿಸಿದ ಆರೋಪಿಗಳು ಜೊತೆಗೂಡಿ, ಸಂಚು ನಡೆಸಿ, ತರಬೇತಿ ಪಡೆದು ಹತ್ಯೆ ಮಾಡಿದ್ದಾರೆ. ಒಬ್ಬೊಬ್ಬ ಆರೋಪಿಗಳು ಈ ಹತ್ಯೆಯಲ್ಲಿ ಒಂದೊಂದು ನಿರ್ದಿಷ್ಟ ಪಾತ್ರ ವಹಿಸಿದ್ದಾರೆ’ ಎಂದು ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್‌ರವರು ವಾದಿಸಿದ್ದಾರೆ.
ವಿಚಾರಣೆಯ ದಿನ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಮಂಡ್ಯ ಮೂಲದ ಮೊದಲ ಸಾಕ್ಷಿಯೊಬ್ಬರು ಆರೋಪಿಗಳಾದ ಕೆ.ಟಿ ನವೀನ್‌ಕುಮಾರ್, ಅಮೋಲ್ ಕಾಳೆ, ಅಮಿತ್ ದೆಗ್ವೇಕರ್ ಮತ್ತು ಸುಜಿತ್ ಕುಮಾರ್‌ರನ್ನು ಗುರುತಿಸಿದ್ದಾರೆ. ಅವರನ್ನು ಭೇಟಿ ಆಗಿರುವುದಾಗಿಯೂ, ಅವರು ಏರ್‌ಗನ್ ಮೂಲಕ ತರಬೇತಿ ಪಡೆಯುತ್ತಿರುವುದನ್ನು ನೋಡಿರುವುದಾಗಿಯೂ ತಿಳಿಸಿದ್ದಾರೆ. ಅದೇ ರೀತಿ ಎರಡನೇ ಸಾಕ್ಷಿ ಆಯುಧ ಮಾರುವ ಅಂಗಡಿಯವ ಶಸ್ತ್ರಾಸ್ತ್ರ ಖರೀದಿಸಿದ್ದ ಆರೋಪಿ ಕೆ.ಟಿ ನವೀನ್ ಕುಮಾರ್‌ನನ್ನು ಗುರುತಿಸಿದ್ದಾರೆ. ಈ ನವೀನ್ ಕುಮಾರ್ ಕೆ.ಎಸ್ ಭಗವಾನ್ ಹತ್ಯೆಗೆ ಸಂಚು ಹೂಡಿದ್ದ ಆರೋಪಿ ಸಹ ಆಗಿದ್ದಾನೆ.
ಗೌರಿ ಲಂಕೇಶ್‌ರವರ ಹತ್ಯೆಯ ನಂತರ ಮಹಜರು ಸಮಯದಲ್ಲಿ ಹಾಜರಿದ್ದ ಫೋಟೊಗ್ರಾಫರ್‌ರನ್ನು ಆರೋಪಿ ಪರ ವಕೀಲರು ಪಾಟಿ ಸವಾಲಿಗೆ ಒಳಪಡಿಸಿದರು. ಬಂದೂಕಿನ ಗುಂಡುಗಳು ಬಿದ್ದಿದ್ದ ಮಾರ್ಕುಗಳು, ಶಾಂತಿ ನಗರ ಲ್ಯಾಬ್ ಒಂದರಲ್ಲಿ ಸಿಸಿಟಿವಿ ಫೂಟೇಜ್ ಸೇರಿ ಇತರ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಜೊತೆಗಿದ್ದೆ ಎಂದು ಅವರು ಸಾಕ್ಷಿ ನುಡಿದಿದ್ದಾರೆ. ಜೊತೆಗೆ ಗೌರಿ ಲಂಕೇಶ್‌ರವರ ಮನೆ ಕೇಬಲ್ ರಿಪೇರಿ ಮಾಡುತ್ತಿದ್ದವರನ್ನು ಸಾಕ್ಷಿಗಳಾಗಿ ಪರಿಗಣಿಸಿ ಹೇಳಿಕೆ ಪಡೆಯಲಾಗಿದೆ. ಆತ ಕೇಬಲ್ ಸಮಸ್ಯೆಯ ಕುರಿತು ಮೇಡಂ ದೂರಿದ್ದರು. ರೀಪೇರಿ ಮಾಡಲು ಬರುವಷ್ಟರಲ್ಲಿ ಹತ್ಯೆಯಾಗಿತ್ತು ಎಂದಿದ್ದಾನೆ.
ಆನಂತರ ಗೌರಿ ಲಂಕೇಶ್‌ರವರ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರು ಉದ್ಯೋಗಿಗಳನ್ನು ಆರೋಪಿ ಪರ ವಕೀಲರು ಪಾಟಿ ಸವಾಲು ಮಾಡಿದ್ದಾರೆ. ಆರೋಪಿ ಪರ ವಕೀಲರ ಪ್ರಶ್ನೆಗಳ ಸ್ಯಾಂಪಲ್ ಇದು..
ವಕೀಲರು: ನಿಮ್ಮ ಕಚೇರಿಗೆ ನಕ್ಸಲೈಟರು ಬರುತ್ತಿದ್ದರ?
ಸಾಕ್ಷಿ: ಗೊತ್ತಿಲ್ಲ, ಏಕೆಂದರೆ ಹಲವಾರು ಜನ ಬರುತ್ತಿದ್ದರು. ಯಾರೆಂದು ನಮಗೆ ತಿಳಿದಿಲ್ಲ.
ವಕೀಲರು: ನಿಮ್ಮ ಕಚೇರಿಯಲ್ಲಿ ಹಲವು ವಿಚಾರಗಳಿಗೆ ಜಗಳ ನಡೆಯುತ್ತಿತ್ತ?
ಸಾಕ್ಷಿ: ಇಲ್ಲ, ನನಗೆ ಹೆಚ್ಚು ಗೊತ್ತಿಲ್ಲ, ನನ್ನ ಕೆಲಸ ಕಚೇರಿ ನಿರ್ವಹಣೆ ಮಾತ್ರವೇ ಆಗಿತ್ತು.
ಗೌರಿ ಲಂಕೇಶ್‌ರವರ ಮನೆ ಮುಂದೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿನ ಗಾರೆ ಕೆಲಸಗಾರನನ್ನು ಇದೇ ರೀತಿ ವಕೀಲರು ಪಾಟಿ ಸವಾಲಿಗೆ ಒಳಪಡಿಸಿದರು.
ಕೆಲಸಗಾರ: ನಾನು ಸಂಜೆ ಕೆಲಸ ಮುಗಿಸಿ ಊಟ ಮಾಡುತ್ತಿದ್ದಾಗ ಢಂ-ಢಂ ಎಂದು ಸದ್ದಾಯಿತು. ಮಹಡಿ ಮೇಲೆ ಏನೋ ಬಿದ್ದಿರಬೇಕು ಎಂದು ಹೋಗಿ ನೋಡಿ ಏನೂ ಇಲ್ಲ ಎಂದು ಕೆಳಗಿಳಿದು ಬಂದಾಗ ಗೌರಿ ಲಂಕೇಶ್‌ರವರ ಮನೆ ಮುಂದೆ ಜನಗಳು ಸೇರಿದ್ದರು.
ವಕೀಲರು: ಗಾರೆ ಕೆಲಸ ಮುಗಿದ ಮೇಲೆ ಸ್ನಾನ ಮಾಡದೆಯೇ ಊಟ ಮಾಡುತ್ತೀರಾ? ಹೇಗೆ ಸಾಧ್ಯ?
ಕೆಲಸಗಾರ: ಢಂ-ಢಂ ಎಂದು ಸದ್ದಾದಾಗ ನಾನು ಹೊರಗೆಬಂದೆ.
ವಕೀಲರು: ಎಷ್ಟು ಬಾರಿ ಢಂ-ಢಂ ಎಂದು ಸದ್ದಾಯಿತು?
ಕೆಲಸಗಾರ: ಸುಮಾರು ಸಲ ಢಂ-ಢಂ ಎಂದು ಸದ್ದಾಯಿತು.
ವಕೀಲರು: ನೀವು ಕೆಲಸ ಮಾಡುತ್ತಿದ್ದ ಮನೆಯಿಂದ ಗೌರಿ ಲಂಕೇಶ್‌ರವರ ಮನೆ ಬಾಗಿಲಿಗೆ ಎಷ್ಟು ಅಡಿ ದೂರವಿದೆ?
ಕೆಲಸಗಾರ: ಆ ಮನೆಯಿಂದ ಬೀದಿಯಾಚೆ ಗೌರಿ ಲಂಕೇಶ್‌ರವರ ಮನೆಯಿದೆ.
ಎಷ್ಟು ಅಡಿ, ಎಷ್ಟು ಮೀಟರ್ ಇದೆ ಎಂದು ಆ ವ್ಯಕ್ತಿ ಏಕೆ ಅಳತೆ ಮಾಡಬೇಕು ಎಂದು ಮಧ್ಯಪ್ರವೇಶಿಸಿ ಪ್ರಶ್ನಿಸಿದ ನ್ಯಾಯಾಧೀಶರು ಈ ಪಾಟಿ ಸವಾಲನ್ನು ಕೊನೆಗೊಳಿಸಿದರು.
ಪ್ರಕರಣದ ದೂರುದಾರರು ಮತ್ತು ಗೌರಿ ಲಂಕೇಶ್‌ರವರ ಸಹೋದರಿಯನ್ನು ಪಾಟಿ ಸವಾಲಿಗೆ ಒಳಪಡಿಸಲಾಯಿತು. ಅದರಲ್ಲಿ ವಕೀಲರ ಪ್ರಶ್ನೆಗಳ ಧಾಟಿ ಹೀಗಿತ್ತು.
ಗೌರಿಯವರು ಕೆಲ ನಕ್ಸಲರನ್ನು ಹೊರಗಡೆಗೆ ಕರೆದುಕೊಂಡು ಬಂದಿದ್ದರು. ಇದರಿಂದ ಉಳಿದ ನಕ್ಸಲರಿಗೆ ವೈಮನಸ್ಸು ಇತ್ತು. ಹತ್ಯೆಗೆ ಅದೇ ಕಾರಣವಲ್ಲವೇ? ನಕ್ಸಲೈಟರು ಕೊಲೆ ಮಾಡಿರುತ್ತಾರೆ. ಆದರೆ ಪೊಲೀಸರು ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಹೇಳಿಕೊಟ್ಟು ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ತನಿಖೆ ನಡೆಸುತ್ತಿದ್ದೀರಿ ಅಲ್ಲವೇ?
ಬನ್ನೇರುಘಟ್ಟ ಹಾಗೂ ನೆಲಮಂಗಲದ ಬಳಿ ಇರುವ ಆಸ್ತಿಯ ವಿಲೇವಾರಿ ಕುರಿತು ನಿಮ್ಮ ಕುಟುಂಬದ ಒಳಗೆ ವೈಮನಸ್ಯವಿತ್ತು. ನಿಮಗೂ ಮತ್ತು ನಿಮ್ಮ ಅಕ್ಕನಿಗೂ ಅಲ್ಲದೆ ನಿಮ್ಮ ತಮ್ಮನಿಗೂ ಗೌರಿಯವರಿಗೂ ವೈಮನಸ್ಯವಿತ್ತು ಅಲ್ಲವೇ?
ನೆಲಮಂಗಲದ ಬಳಿ ಅವರ ಜಮೀನಿರುವ ಗ್ರಾಮಸ್ಥರಿಗೂ ನಿಮ್ಮ ಅಕ್ಕನಿಗೂ ಘರ್ಷಣೆಯಾಗಿತ್ತು ಅಲ್ಲವೇ?
ನಿಮ್ಮ ಅಕ್ಕನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತೀಶರಿಗೂ ನಿಮ್ಮ ಅಕ್ಕನಿಗೂ ಸಂಸ್ಥೆಯ ಪಾಲುದಾರಿಕೆಯ ಬಗ್ಗೆ ವೈಮನಸ್ಯವಿತ್ತು ಅಲ್ಲವೇ?
ಈ ಎಲ್ಲಾ ಅಂಶಗಳನ್ನು ಕವಿತಾ ಲಂಕೇಶ್ ಸ್ಪಷ್ಟವಾಗಿ ನಿರಾಕರಿಸಿದರು. ನಕ್ಸಲರಿಂದ ಯಾವುದೇ ಬೆದರಿಕೆ ಇರಲಿಲ್ಲ. ಆಸ್ತಿ ವಿಚಾರದಲ್ಲಿಯೂ ಯಾವುದೇ ಭಿನ್ನಮತ ಇರಲಿಲ್ಲ ಎಂದು ಹೇಳಿಕೆ ನೀಡಿದರು.
ಪೊಲೀಸರು ಮತ್ತು ಪ್ರಾಸಿಕ್ಯೂಸನ್ ವಕೀಲರು ಹೇಳಿಕೊಟ್ಟಿದ್ದನ್ನು ಎಲ್ಲಾ ಸಾಕ್ಷಿಗಳು ಹೇಳುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿದರು. ಆ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಪ್ರಾಸಿಕ್ಯೂಸನ್ ವಕೀಲರಾದ ಬಾಲನ್ ಆಗ್ರಹಿಸಿದರು.
ಪಾಟಿ ಸವಾಲಿನ ಸಂದರ್ಭದಲ್ಲಿ ಕವಿತಾ ಲಂಕೇಶ್‌ರವರು ಗೌರಿ ಹತ್ಯೆಯ ಸುದ್ದಿ ತಿಳಿದುದ್ದನ್ನು ವಿವರಿಸಿದರು. ’ಸೆಪ್ಟಂಬರ್ 05, 2017ರ ರಾತ್ರಿ ಗೌರಿ ಲಂಕೇಶ್‌ರವರು ಕುಸಿದು ಬಿದ್ದಿರುವುದನ್ನು ಪಕ್ಕದ ಮನೆಯವರು ನಮ್ಮ ಅಮ್ಮನಿಗೆ ಫೋನ್ ಮಾಡಿ ತಿಳಿಸಿದರು. ಕೂಡಲೇ ನಾನು ನನ್ನ ಮಗಳೊಂದಿಗೆ ಗೌರಿ ಲಂಕೇಶ್ ಮನೆಯ ಕಡೆ ತೆರಳಿದೆ. ದಾರಿ ಮಧ್ಯೆಯೇ ಹಲವು ಚಾನೆಲ್‌ನವರು ಫೋನ್ ಮಾಡಿ ಗುಂಡೇಟಿನಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಿದರು. ಗೌರಿ ಮನೆ ತಲುಪಿದಾಗ ಒಂದಕ್ಕಿಂತ ಹೆಚ್ಚು ಕಾರ್ಟ್ರಿಜ್‌ಗಳು ಬಿದ್ದಿದ್ದವು’ ಎಂದು ವಿವರಿಸಿದರು. ಅದಕ್ಕೆ ಆರೋಪಿ ಪರ ವಕೀಲರು ’ನೀವು ನಿಮ್ಮ ಮಗಳೊಂದಿಗೆ ಸ್ಥಳಕ್ಕೆ ಹೋದಿರಿ ಎಂದು ಹೇಳಿದಿರಿ. ನಿಮ್ಮ ಮದುವೆ ಯಾವಾಗ ಆಯಿತು’ ಎಂದು ಕೇಳಿದರು. ಅದಕ್ಕೆ ಕವಿತಾ ಅವರು ತನಗೆ ಮದುವೆಯಾಗಿಲ್ಲ ಎಂದರು. ಆ ಉತ್ತರವನ್ನು ನಾಟಕೀಯಗೊಳಿಸಿ ಮರುಪ್ರಶ್ನಿಸಿದ ವಕೀಲರು ’ಮತ್ತೆ ಮದುವೆಯಾಗದೆ ಮಗಳೇ?’ ಎಂದು ಪ್ರಶ್ನಿಸಿದರು. ಇಂಥಾ ಅಸಭ್ಯ ಪ್ರಶ್ನೆಗಳನ್ನು ಕೇಳಬಾರದು ಎಂದು ಪ್ರಾಸಿಕ್ಯೂಸನ್ ವಕೀಲರಾದ ಬಾಲನ್ ಆಕ್ಷೇಪಣೆ ಮಾಡಿದರು. ನ್ಯಾಯಾಧೀಶರು ಕೂಡ ಇಂಥಾ ಅಫೆಂಡ್ ಮಾಡುವ ಪ್ರಶ್ನೆಗಳನ್ನು ಕೇಳಬಾರದು ಎಂದರು.
ಆದರೆ ಕವಿತಾ ಲಂಕೇಶ್‌ರವರು ತನಗೆ ಈ ಪ್ರಶ್ನೆಯಿಂದ ತಾನು ಅಫೆಂಡ್ ಆಗಿಲ್ಲವೆಂದು ಸಮಾಧಾನದಿಂದ ಹೇಳಿ, ತಾನು ಸಿಂಗಲ್ ಮದರ್ ಎಂದು ವಿವರಿಸಿ ಹೇಳಿದರು. ಅಂದರೆ ಇಲ್ಲಿ ಆರೋಪಿ ಪರ ವಕೀಲರು ಪ್ರಕರಣದ ಪಾಟಿ ಸವಾಲು ಮೀರಿ ವೈಯಕ್ತಿಕ ವಿಷಯಗಳನ್ನು ಸಹ ಮುಂದುಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.
ಒಟ್ಟಾರೆಯಾಗಿ ಆರೋಪಿ ಪರ ವಕೀಲರ ಸದ್ಯದ ವಾದ ಗೌರಿಯವರನ್ನು ನಕ್ಸಲೈಟರೋ, ಬೇರೆ ಯಾರೋ ಹತ್ಯೆ ಮಾಡಿದ್ದಾರೆ. ಹಿಂದುತ್ವವಾದಿಗಳ ಮೇಲಿನ ಕೋಪದಿಂದ ಈಗ ಬಂಧಿಸಿರುವ ಆರೋಪಿಗಳ ಮೇಲೆ ಹೊರಿಸಲಾಗುತ್ತದೆ ಎಂಬುದಾಗಿದೆ. ಪ್ರತಿ ವಿಚಾರಣೆಯ ಸಂದರ್ಭದಲ್ಲಿಯೂ ಸುಮಾರು 15-20 ಜನ ವಕೀಲರು ಹಾಜರಾಗುತ್ತಿದ್ದಾರೆ.
ಮುಂದಿನ ವಿಚಾರಣೆ ಆಗಸ್ಟ್ ತಿಂಗಳ 8ರಿಂದ ಪ್ರಾರಂಭವಾಗಲಿದೆ. ಮುಂದಿನ ತಿಂಗಳಿನಿಂದ ಡಿಜಿಟಲ್ ಮತ್ತು ಫೊರೆನ್ಸಿಕ್ ಸಾಕ್ಷಿಗಳ ವಿಚಾರಣೆ ಸಹ ನಡೆಯಲಿದೆ. ದಿನಕ್ಕೆ ಮೂರು ನಾಲ್ಕು ಸಾಕ್ಷಿ ಮಾತ್ರ ವಿಚಾರಣೆ ನಡೆಸಲಾಗುತ್ತಿದೆ. ಹಾಗಾಗಿ ವಿಚಾರಣೆ ಮುಗಿಯಲು ಇನ್ನು ಕನಿಷ್ಟ 2 ವರ್ಷ ಹಿಡಿಯುವ ಸಾಧ್ಯತೆಯಿದೆ ಎಂದು
ಅಂದಾಜಿಸಲಾಗಿದೆ.
ಇದನ್ನೂ ಓದಿ: ಗೌರಿ ಲಂಕೇಶ್ ಮುಸ್ಲಿಂ ಪಕ್ಷಪಾತಿಯಾಗಿದ್ದರೇ? – ಇಸ್ಮತ್ ಪಜೀರ್


