ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಸಂಬಂಧ ಶುಕ್ರವಾರ (ಅ.25) ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಯತ್ನಾಳ್ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಖಾಜಾ ಸಾಬ್ ಮುಷರಿಫ್ ಅವರು ಹೈಕೋರ್ಟ್‌ನ ಕಲಬುರಗಿ ಪೀಠದ ಮೊರೆ ಹೋಗಿದ್ದರು. ಮುಷರಿಫ್ ಅವರ ಅರ್ಜಿಯಲ್ಲಿನ ದೋಷವಿದೆ ಎಂದಿದ್ದ ಹೈಕೋರ್ಟ್ ಪೀಠ, ಅರ್ಜಿ ವಜಾಗೊಳಿಸಿ ಮುಷರಿಫ್ ಅವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಮುಷರಿಫ್ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ಕೈಗೆತ್ತಿಕೊಂಡಿದೆ.
ಹೈಕೋರ್ಟ್ ವಿಧಿಸಿರುವ 1 ಲಕ್ಷ ರೂ. ದಂಡದ ಮೊತ್ತವನ್ನು ರದ್ದುಪಡಿಸಲು ನಿರಾಕರಿಸಿರುವ ಪೀಠವು, ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿದೆ.
ಪ್ರಕರಣದಲ್ಲಿ ಹೈಕೋರ್ಟ್ ಸಮಗ್ರ ದೃಷ್ಟಿಕೋನದಿಂದ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಮುಷರಿಫ್ ಅವರು ಆಕ್ಷೇಪಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮುಷರಿಫ್ ಅವರನ್ನು ಹಿರಿಯ ವಕೀಲ ಸಂಜಯ್ ಹೆಗ್ಡೆ, ವಕೀಲರಾದ ಅನಂತ ಪ್ರಸಾದ್ ಮಿಶ್ರಾ, ರಹಮತುಲ್ಲಾ ಕೊತ್ವಾಲ್ ಮತ್ತು ಸಿದ್ದಿಕಾ ಆಯಿಶಾ ಪ್ರತಿನಿಧಿಸಿದ್ದರು.
ಇದನ್ನೂ ಓದಿ : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ | ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು : ಶಾಸಕ ಸ್ಥಾನ ರದ್ದು?


