ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆಗೆ ವಿರೋಧ ಮುಂದುವರೆದಿದೆ. ನೂತನ ಪಠ್ಯದಲ್ಲಿ ಬ್ರಹ್ಮಶ್ರಿ ನಾರಾಯಣಗುರುಗಳ ಪಠ್ಯ ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಲ್ಲವ ಸಮಾಜದ ಮುಖಂಡರು ಹೆದ್ದಾರಿ ಬಂದ್ ಸೇರಿದಂತೆ ಪಾದಾಯಾತ್ರೆ ನಡೆಸುವ ಮೂಲಕ ಬೃಹತ್ ಹೋರಾಟಕ್ಕೆ ಅಣಿಯಾಗಿದ್ದಾರೆ.
ಶುಕ್ರವಾರ ಸಂಜೆ ಮಂಗಳೂರಿನ ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಪೂರ್ವಸಭೆ ನಡೆಸಿದ ಬಿಲ್ಲವ ಸಮಾಜದ ಮುಖಂಡರು ನಾರಾಯಣ ಗುರುಗಳ ಪಠ್ಯ ಮರು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ 50 ದಿನಗಳವರೆಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ನೀಡಲಾಗಿದ್ದ ಸಮಾಜ ಸುಧಾರಕರಾದ ನಾರಾಯಣಗುರುಗಳ ಕುರಿತ ಪಾಠವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿದೆ. ಇದು ವಿರೋಧಕ್ಕೆ ಕಾರಣವಾಗಿದೆ.
ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು 7ನೇ ತರಗತಿಯ ಕನ್ನಡದಲ್ಲಿ ಸಂಕ್ಪಿಪ್ತವಾಗಿ ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣಗುರುಗಳ ಪಠ್ಯವನ್ನು ವಿವರವಾಗಿ ನೀಡಲಾಗಿತ್ತು. ಆದರೆ ನೂತನ ಸಮಿತಿಯು ಕೇವಲ 7ನೇ ತರಗತಿಯ ಕನ್ನಡದಲ್ಲಿ ಸಂಕ್ಪಿಪ್ತ ಪಠ್ಯ ಮಾತ್ರ ಉಳಿಸಿಕೊಂಡಿದ್ದು, 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ಸಂಪೂರ್ಣ ವಿವರನ್ನು ಕಿತ್ತುಹಾಕಿದೆ. ಹಲವಾರು ಧಾರ್ಮಿಕ ಸಮಾಜ ಸುಧಾರಕರ ಪಠ್ಯಗಳು 7ನೇ ತರಗತಿಯ ಕನ್ನಡ ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಎರಡು ಕಡೆ ಇವೆ. ಆದರೆ ನಾರಾಯಣಗುರುಗಳ ಪಠ್ಯವನ್ನು ಮಾತ್ರ ಒಂದೇ ಕಡೆ ಇರಿಸಿ, ಮತ್ತೊಂದು ಕಡೆ ತೆಗೆಯಲಾಗಿದೆ.
ಇದನ್ನೂ ಓದಿ: ಚಕ್ರತೀರ್ಥ ಹೇಳಿದ್ದು ಸುಳ್ಳು: 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿಲ್ಲ ನಾರಾಯಣಗುರು, ಪೆರಿಯಾರ್ ಪಾಠ!
ಈ ಹಿಂದೆ ಗಣರಾಜ್ಯೋತ್ಸವ ಟ್ಯಾಬ್ಲೋ ವಿಚಾರದಲ್ಲಿಯೂ ಸಹ ನಾರಾಯಣಗುರುಗಳಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿತ್ತು. ಈಗ ರಾಜ್ಯ ಬಿಜೆಪಿ ಸರ್ಕಾರ ಅವರ ಪಠ್ಯ ಕೈಬಿಟ್ಟಿದೆ. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯನವರ ಹೆಸರಿಡಬೇಕು, ಬಿಲ್ಲವ ಅಭಿವೃದ್ದಿ ಮಂಡಳಿ ರಚಿಸಬೇಕು, ಬಿಲ್ಲವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯಗಳಿಗಾಗಿ ಹಿಂದಿನಿಂದ ಹೋರಾಟ ನಡೆಯುತ್ತಿದೆ. ಆದರೆ ಇವೆಲ್ಲಕ್ಕೂ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಬಿಲ್ಲವ ಮುಖಂಡರನ್ನು ಕೆರಳಿಸಿದೆ. ಹಾಗಾಗಿ ಬಿಲ್ಲವ ಸಂಘ ಸಂಸ್ಥೆಗಳು ರಿಲೇ ರೀತಿಯ ಪಾದಯಾತ್ರೆ, ಹೆದ್ದಾರಿ ಬಂದ್ ಸೇರಿದಂತೆ 50 ದಿನಗಳವರೆಗೆ ನಿರಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಿತ್ತರಂಜನ್ ಕೆ, ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶೈಲೇಂದ್ರ ಬೈ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಸೇರಿದಂತೆ ನೂರಾರು ಹೋರಾಟಗಾರರು, ಮುಖಂಡರು ಭಾಗವಹಿಸಿದ್ದರು.


