ವಸಾಹತುಗಾರ ಇಸ್ರೇಲ್‌ನ ವಶದಲ್ಲಿರುವ ಪ್ಯಾಲೆಸ್ತೀನ್‌ನ ಗಾಝಾದಲ್ಲಿ “ತಕ್ಷಣದ, ಬೇಷರತ್ತಾದ ಮತ್ತು ಶಾಶ್ವತ ಕದನ ವಿರಾಮ”ಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಅಮೆರಿಕ ಮತ್ತೆ ವಿರೋಧಿಸಿದೆ. ನಿರ್ಣಯದ ವಿರುದ್ಧ ತನ್ನ ವಿಶೇಷ ಅಧಿಕಾರ ವೀಟೊ ಬಳಸಿ ಅದನ್ನು ವಿರೋಧಿಸಿದ್ದು, ಅದಾಗ್ಯೂ, ಕೌನ್ಸಿಲ್‌ನಲ್ಲಿ ಉಳಿದ 14 ದೇಶಗಳು ‘ಕದನ ವಿರಾಮ’ದ ಪರವಾಗಿ ಮತ ಚಲಾಯಿಸಿದವು. ಬೇಷರತ್ ಗಾಝಾ ಕದನ ವಿರಾಮ
ಗಾಝಾದಲ್ಲಿನ ಪರಿಸ್ಥಿತಿಯನ್ನು “ದುರಂತ” ಎಂದು ಕರೆದಿರುವ ಭದ್ರತಾ ಮಂಡಳಿಯ ನಿರ್ಣಯವು, “ಗಾಝಾಗೆ ಮಾನವೀಯ ನೆರವು ಪ್ರವೇಶದ ಮೇಲಿನ ಎಲ್ಲಾ ನಿರ್ಬಂಧಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ತೆಗೆದುಹಾಕಬೇಕು. ಜೊತೆಗೆ ವಿಶ್ವಸಂಸ್ಥೆ ಮತ್ತು ಮಾನವೀಯ ಸಂಘಟನೆಗಳು ಅದರ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ವಿತರಣೆ ಮಾಡಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದೆ.
ಇಸ್ರೇಲ್ ಅನ್ನು ರಕ್ಷಿಸುವ ಸಲುವಾಗಿ ಭದ್ರತಾ ಮಂಡಳಿಯ ಕರಡು ಕದನ ವಿರಾಮ ನಿರ್ಣಯವನ್ನು ಅಮೆರಿಕ ವೀಟೊ ಮಾಡಿದ್ದು ಇದು ಐದನೇ ಬಾರಿಯಾಗಿದೆ. ಕದನ ವಿರಾಮ ಬೇಡಿಕೆಯು ಹಮಾಸ್ ಹಿಡಿದಿಟ್ಟಿರುವ ಎಲ್ಲಾ ಒತ್ತೆಯಾಳುಗಳ ತಕ್ಷಣದ ಮತ್ತು ಬೇಷರತ್ತಾದ ಬಿಡುಗಡೆಗೆ ನೇರವಾಗಿ ಸಂಬಂಧಿಸಿಲ್ಲ ಎಂಬ ಆಧಾರದ ಮೇಲೆ ಬೈಡೆನ್ ಆಡಳಿತದ ಅಡಿಯಲ್ಲಿ ನವೆಂಬರ್‌ನಲ್ಲಿ ಕೂಡಾ ಅಮೆರಿಕ ಇದೇ ರೀತಿಯ ನಿರ್ಣಯವನ್ನು ವೀಟೊ ಮಾಡಿತು.
ನಿರ್ಣಯದ ಪಠ್ಯವನ್ನು ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪಾಕಿಸ್ತಾನ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸೊಮಾಲಿಯಾ ಸಹ-ಪ್ರಾಯೋಜಿಸಿವೆ. ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಯುಕೆ ಸಹ ನಿರ್ಣಯದ ಪರವಾಗಿ ಮತ ಚಲಾಯಿಸಿದವು.
“ನಮ್ಮಲ್ಲಿ ಹೆಚ್ಚಿನವರು ಒಂದೇ ದೃಷ್ಟಿಕೋನದಲ್ಲಿ ಒಮ್ಮುಖವಾಗುತ್ತಿರುವಂತೆ ತೋರುತ್ತಿದ್ದರೂ, ಮಂಡಳಿಯು ತನ್ನ ಜವಾಬ್ದಾರಿಯನ್ನು ಹೊರದಂತೆ ತಡೆಯಲಾಯಿತು” ಎಂದು ವಿಶ್ವಸಂಸ್ಥೆಯಲ್ಲಿನ ಫ್ರಾನ್ಸ್ ರಾಯಭಾರಿ ಜೆರೋಮ್ ಬೊನ್ನಾಫಾಂಟ್ ಹೇಳಿದ್ದಾರೆ.
“ಇಂದು, ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಗಾಝಾ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ವೀಟೊ ಮಾಡುವ ಮೂಲಕ ಅಮೆರಿಕ ಬಲವಾದ ಸಂದೇಶವನ್ನು ಕಳುಹಿಸಿದೆ” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತದಾನದ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಇಸ್ರೇಲ್ ಮತ್ತು ಹಮಾಸ್ ಸಮಾನ ಎಂದು ತಪ್ಪಾಗಿ ಪ್ರತಿಪಾದಿಸುವ ಅಥವಾ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ನಿರ್ಲಕ್ಷಿಸುವ ಯಾವುದೇ ಪಠ್ಯವನ್ನು ಅಮೆರಿಕ ಬೆಂಬಲಿಸುವುದಿಲ್ಲ. ಅಮೆರಿಕವು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ.” ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಕೂಡ ಅಮೆರಿಕದ ವೀಟೋವನ್ನು ಸ್ವಾಗತಿಸಿದೆ. “ಇಸ್ರೇಲ್‌ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಏಕಪಕ್ಷೀಯ ನಿರ್ಣಯವನ್ನು ವೀಟೋ ಮಾಡಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಮತ್ತು ಆಡಳಿತಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಪ್ರಸ್ತಾವಿತ ನಿರ್ಣಯವು ಹಮಾಸ್ ಅನ್ನು ಬಲಪಡಿಸುತ್ತದೆ ಮತ್ತು ಒತ್ತೆಯಾಳು ಒಪ್ಪಂದವನ್ನು ಸಾಧಿಸುವ ಅಮೆರಿಕದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ” ಎಂದು ಇಸ್ರೇಲ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಗಿಡಿಯಾನ್ ಸಾರ್ ಹೇಳಿದ್ದಾರೆ.
ಅದಾಗ್ಯೂ, ಯುನೈಟೆಡ್ ಕಿಂಗ್‌ಡಮ್(ಯುಕೆ) ಈ ನಿರ್ಣಯವನ್ನು ಬೆಂಬಲಿಸಿದ್ದು, ಅದರ ರಾಯಭಾರಿ ಬಾರ್ಬರಾ ವುಡ್‌ವರ್ಡ್ ಅವರು ಇಸ್ರೇಲ್‌ನ ಹೊಸ ನೆರವು ವ್ಯವಸ್ಥೆಯನ್ನು “ಅಮಾನವೀಯ” ಎಂದು ಕರೆದಿದ್ದಾರೆ. ಜೊತೆಗೆ, ಇಸ್ರೇಲ್ ಈಗಲೇ ನೆರವಿನ ಮೇಲಿನ ನಿರ್ಬಂಧಗಳನ್ನು ಕೊನೆಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.
“ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ವಿಸ್ತರಿಸುವ ಮತ್ತು ಸಹಾಯವನ್ನು ತೀವ್ರವಾಗಿ ನಿರ್ಬಂಧಿಸುವ ಇಸ್ರೇಲ್ ಸರ್ಕಾರದ ಈ ನಿರ್ಧಾರಗಳು ಅಸಮರ್ಥನೀಯ, ಅಸಮಾನ ಮತ್ತು ಪ್ರತಿಕೂಲವಾಗಿವೆ ಮತ್ತು ಯುಕೆ ಅವುಗಳನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ.” ಎಂದು ಅವರು ಹೇಳಿದ್ದಾರೆ.
ಭದ್ರತಾ ಮಂಡಳಿಯ ಇತರ ಸದಸ್ಯರು ವೀಟೊ ಅಧಿಕಾರ ಚಲಾಯಿಸಿದ ಅಮೆರಿಕವನ್ನು ಟೀಕಿಸಿದ್ದಾರೆ. “ವಿಫಲವಾದ ಈ ನಿರ್ಣಯವು ಮಂಡಳಿಯ ಆತ್ಮಸಾಕ್ಷಿಯ ಮೇಲೆ ನೈತಿಕ ಕಳಂಕವಾಗಿ ಉಳಿಯುವುದಲ್ಲದೆ, ತಲೆಮಾರುಗಳವರೆಗೆ ಪ್ರತಿಧ್ವನಿಸುವ ರಾಜಕೀಯ ಅನ್ವಯದ ಅದೃಷ್ಟದ ಕ್ಷಣವಾಗಿ ಉಳಿಯುತ್ತದೆ” ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಹೇಳಿದ್ದಾರೆ.
ವಿಶ್ವಸಂಸ್ಥೆಗೆ ಚೀನಾದ ರಾಯಭಾರಿ ಫು ಕಾಂಗ್ ಪ್ರತಿಕ್ರಿಯಿಸಿ, “ಇಂದಿನ ಮತದಾನದ ಫಲಿತಾಂಶವು, ಮತ್ತೊಮ್ಮೆ ಗಾಝಾದಲ್ಲಿನ ಸಂಘರ್ಷವನ್ನು ಶಮನಗೊಳಿಸಲು ಮಂಡಳಿಯ ಅಸಮರ್ಥತೆಗೆ ಮೂಲ ಕಾರಣ ಅಮೆರಿಕದ ಪುನರಾವರ್ತಿತ ಅಡಚಣೆಯಾಗಿದೆ ಎಂದು ಬಹಿರಂಗಪಡಿಸುತ್ತದೆ.” ಎಂದು ಹೇಳಿದ್ದಾರೆ.
ಸಹಾಯದ ಮೇಲಿನ ದೀರ್ಘಾವಧಿಯ ನಿರ್ಬಂಧ ಮತ್ತು ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ಎಂಬ ಯೋಜನೆಯ ಅಸ್ತವ್ಯಸ್ತ ಅನುಷ್ಠಾನದ ನಂತರ ಗಾಝಾದಲ್ಲಿ ಕ್ಷಾಮದ ಪರಿಸ್ಥಿತಿ ಉಂಟಾಗಿತ್ತು. ಈ ಬಗ್ಗೆ ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಎಚ್ಚರಿಕೆ ನೀಡಿದ್ದರಿಂದ ಈ ನಿರ್ಣಯವನ್ನು ಮತಕ್ಕೆ ಹಾಕಲಾಯಿತು.
“ಭಯಭೀತರಾಗುವ, ಗಾಯಗೊಳ್ಳುವ ಅಥವಾ ಗಾಜಾದಲ್ಲಿ ತಿನ್ನಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಡುವ ಪ್ಯಾಲೆಸ್ತೀನಿಯನ್ನರ ಭಯಾನಕ ದೃಶ್ಯಗಳನ್ನು ಜಗತ್ತು ದಿನದಿಂದ ದಿನಕ್ಕೆ ನೋಡುತ್ತಿದೆ” ಎಂದು ವಿಶ್ವಸಂಸ್ಥೆಯ ಪರಿಹಾರ ಮುಖ್ಯಸ್ಥ ಟಾಮ್ ಫ್ಲೆಚರ್ ಬುಧವಾರ ಹೇಳಿದ್ದಾರೆ.
ಅಸ್ಪಷ್ಟ ರಾಜಕೀಯ ಬೆಂಬಲ ಮತ್ತು ಹಣವನ್ನು ಹೊಂದಿರುವ ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ಗುರುವಾರ ಬೆಳಿಗ್ಗೆ ಎರಡನೇ ದಿನವೂ ಗಾಝಾದಲ್ಲಿ ತನ್ನ ವಿತರಣಾ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಘೋಷಿಸಿದೆ. ಅದರ ವಿತರಣಾ ಕೇಂದ್ರದಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದಾಗ ಇಸ್ರೇಲಿ ಗುಂಡಿನ ದಾಳಿಯಿಂದ ಮಂಗಳವಾರ ಕನಿಷ್ಠ 27 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ಈ ಘಟನೆಗಳ ಬಗ್ಗೆ ತಕ್ಷಣದ ಮತ್ತು ಸ್ವತಂತ್ರ ತನಿಖೆ ನಡೆಸಿ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂಬ ವಿಶ್ವಸಂಸ್ಥೆಯ ಕರೆಗೆ ವಿಶ್ವಸಂಸ್ಥೆಗೆ ಯುಕೆ ಖಾಯಂ ಪ್ರತಿನಿಧಿ ವುಡ್‌ವರ್ಡ್ ಬೆಂಬಲ ವ್ಯಕ್ತಪಡಿಸಿದ್ದಾರೆ. “ಇಸ್ರೇಲ್ ಈಗ ನೆರವಿನ ಮೇಲಿನ ತನ್ನ ನಿರ್ಬಂಧಗಳನ್ನು ಕೊನೆಗೊಳಿಸಬೇಕಾಗಿದೆ. ಜೀವಗಳನ್ನು ಉಳಿಸಲು, ದುಃಖವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ವಿಶ್ವಸಂಸ್ಥೆ ಮತ್ತು ಮಾನವೀಯತೆಯಿಳ್ಳವರು ತಮ್ಮ ಕೆಲಸವನ್ನು ಮಾಡಲಿ. ಅದು ಗೌರವ,” ಎಂದು ಅವರು ಹೇಳಿದ್ದಾರೆ. ಬೇಷರತ್ ಗಾಝಾ ಕದನ ವಿರಾಮ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉಚಿತ ಪಾಸ್ ಘೋಷಣೆಯಿಂದ ಹರಿದುಬಂದ ಜನಸಾಗರ; ಆರ್‌ಸಿಬಿ ಸಂಭ್ರಮಾಚರಣೆ ದುರಂತಕ್ಕೆ ಕಾರಣವೇನು?
ಉಚಿತ ಪಾಸ್ ಘೋಷಣೆಯಿಂದ ಹರಿದುಬಂದ ಜನಸಾಗರ; ಆರ್‌ಸಿಬಿ ಸಂಭ್ರಮಾಚರಣೆ ದುರಂತಕ್ಕೆ ಕಾರಣವೇನು?

