ಯೆಮನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಎಂದು ಹೌತಿ ಆಡಳಿತದ ಆರೋಗ್ಯ ಸಚಿವಾಲಯ ತಿಳಿಸಿದೆ.
“ಯುಎಸ್ ದಾಳಿಯಲ್ಲಿ ಐವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 53 ಜನರು ಸಾವನ್ನಪ್ಪಿದ್ದಾರೆ ಮತ್ತು 98 ಜನರು ಗಾಯಗೊಂಡಿದ್ದಾರೆ” ಎಂದು ಹೌತಿ ಆರೋಗ್ಯ ಸಚಿವಾಲಯದ ವಕ್ತಾರ ಅನಿಸ್ ಅಲ್-ಅಸ್ಬಾಹಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದಾರೆ.
ಶನಿವಾರ ರಾತ್ರಿ ಹೌತಿ ನೆಲೆಗಳನ್ನು ಗುರಿಯಾಗಿಸಿ ಯೆಮನ್‌ನ ರಾಜಧಾನಿ ಸನಾ ಮೇಲೆ ಅಮೆರಿಕದ ಭಾರೀ ವೈಮಾನಿಕ ದಾಳಿ ನಡೆಸಿತ್ತು. ಕೆಂಪು ಸಮುದ್ರದಲ್ಲಿ ಹೌತಿಗಳು ಹಡಗುಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯೆಯಾಗಿ ನಾವು ದಾಳಿ ಮಾಡಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ.
ನಮ್ಮ ದಾಳಿಯಲ್ಲಿ ಹೌತಿಯ ಕೆಲವು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಹೇಳಿದೆ. ಆದರೆ, ಇದನ್ನು ಹೌತಿ ನಿರಾಕರಿಸಿದೆ.
ಯೆಮನ್ ಮೇಲೆ ಅಮೆರಿಕ ದಾಳಿ ಮುಂದುವರೆಸಿದರೆ, ಹೌತಿ ಕೆಂಪು ಸಮುದ್ರದಲ್ಲಿ ಅದರ ಹಡಗುಗಳ ಮೇಲೆ ದಾಳಿ ನಡೆಸಲಿದೆ ಎಂದು ಹೌತಿ ನಾಯಕ ಅಬ್ದುಲ್ ಮಲಿಕ್ ಅಲ್-ಹೌತಿ ಹೇಳಿದ್ದಾರೆ.
ಮತ್ತೊಂದೆಡೆ, ಇಸ್ರೇಲ್ ಗಾಝಾ ಮೇಲಿನ ದಿಗ್ಬಂಧನವನ್ನು ತೆಗೆದು ಹಾಕುವವರೆಗೆ ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ಮುಂದುವರಿಸುವುದಾಗಿ ಹೌತಿಗಳು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ (ಮಾ.17) ಮುಂಜಾನೆ ಅಲ್ ಜೌಫ್ ಮತ್ತು ಹುದೈದಾದಲ್ಲಿ ಅಮೆರಿಕ ದಾಳಿ ನಡೆಸಿದೆ ಎಂದು ಹೌತಿಗಳು ಹೇಳಿದ್ದಾರೆ. ಆದರೆ, ಅಮೆರಿಕ ಇನ್ನೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ಅನ್ನು ತನ್ನ ಶತ್ರು ಎಂದು ಪರಿಗಣಿಸುವ ಇರಾನ್ ಬೆಂಬಲಿತ ಬಂಡಾಯ ಗುಂಪು ಹೌತಿ, ರಾಜಧಾನಿ ಸನಾ ಮತ್ತು ಯೆಮೆನ್‌ನ ವಾಯುವ್ಯ ಪ್ರದೇಶವನ್ನು ನಿಯಂತ್ರಿಸುತ್ತದೆ. ಆದರೆ, ಈ ಗುಂಪು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಕಾರವಲ್ಲ.
ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳನ್ನು ಸಾಮೂಹಿಕ ವಜಾ ಮಾಡಿದ ಟ್ರಂಪ್ ಆಡಳಿತ!


