ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಭಾನುವಾರ ಮಾಸ್ಕೋಗೆ ಪ್ರಯಾಣಿಸಲಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. “ಸೋಮವಾರ ಪುಟಿನ್ ಅವರನ್ನು ಭೇಟಿ ಮಾಡಲು ಬಯಸುತ್ತೇನೆ ಎಂದು ಅರಘ್ಚಿ ಹೇಳಿದ್ದಾರೆ” ಎಂದು ರಾಯಿಟರ್ಸ್ ವರದಿಯನ್ನು ಉಲ್ಲೇಖಿಸಿ ಅದು ಹೇಳಿದೆ. ಅಮೆರಿಕದಿಂದ ಬಾಂಬ್ ದಾಳಿ
ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಅಮೆರಿಕಕ್ಕೆ ಗೌರವವಿಲ್ಲ ಎಂದು ತೋರಿಸಿದೆ ಮತ್ತು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುವ ಮೂಲಕ “ಬಹಳ ದೊಡ್ಡ ರೆಡ್ ಲೈನ್” ಅನ್ನು ದಾಟಿದೆ ಎಂದು ಅರಘ್ಚಿ ಅವರು ಹೇಳಿದ್ದಾರೆ. “ಅವರು ಬೆದರಿಕೆ ಮತ್ತು ಶಕ್ತಿಯ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.
ಟರ್ಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದ ಅರಘ್ಚಿ, “ಇರಾನ್ ತನ್ನ ಭದ್ರತೆ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಲು ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ. ದೇಶದ ಸಶಸ್ತ್ರ ಪಡೆಗಳು ಸಂಪೂರ್ಣ ಜಾಗರೂಕತೆಯಿಂದ ಇವೆ. ಮೊದಲು ನಮ್ಮ ಪ್ರತಿಕ್ರಿಯೆಗಾಗಿ ಕಾಯಿರಿ. ಆಕ್ರಮಣಶೀಲತೆ ಕೊನೆಗೊಂಡಾಗ, ಈ ಬಗ್ಗೆ ನಾವು ನಿರ್ಧರಿಸಲಿದ್ದೇವೆ” ಎಂದು ಹೇಳಿದ್ದಾರೆ.
ಭಾನುವಾರ ಅಮೆರಿಕದ ದಾಳಿಯ ನಂತರ ಪ್ರತಿಕ್ರಿಯಿಸಿದ್ದ ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ವಕ್ತಾರ ಬೆಹ್ರೌಜ್ ಕಮಲ್ವಾಂಡಿ, ಪರಮಾಣು ಕ್ಷೇತ್ರದಲ್ಲಿನ ತನ್ನ ಜ್ಞಾನವನ್ನು “ನಾಶಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ಈ ಉದ್ಯಮವು ನಮ್ಮ ದೇಶದಲ್ಲಿ ಬೇರುಗಳನ್ನು ಹೊಂದಿದೆ. ಈ ರಾಷ್ಟ್ರೀಯ ಉದ್ಯಮದ ಬೇರುಗಳನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿದಿರಬೇಕು. ಖಂಡಿತ, ನಾವು ಹಾನಿಯನ್ನು ಅನುಭವಿಸಿದ್ದೇವೆ, ಆದರೆ ಉದ್ಯಮವು ಹಾನಿಯನ್ನು ಅನುಭವಿಸುತ್ತಿರುವುದು ಇದೇ ಮೊದಲಲ್ಲ” ಎಂದು ಅವರು ತಿಳಿಸಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಏಜೆನ್ಸಿ ಫ್ರಾನ್ಸ್-ಪ್ರೆಸ್ ವರದಿ ಮಾಡಿದೆ.
ಈ ನಡುವೆ ಇರಾನ್ ಸಂಸತ್ತು ಹಾರ್ಮುಜ್ ಹಡಗು ಮಾರ್ಗದ ಪ್ರಮುಖ ಜಲಸಂಧಿಯನ್ನು ಮುಚ್ಚಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಮಾರ್ಗವನ್ನು ಮುಚ್ಚುವ ಮೂಲಕ ಜಾಗತಿಕ ವ್ಯಾಪಾರವನ್ನು ಕುಂಠಿತಗೊಳಿಸುವ ಈ ಕ್ರಮದ ಕುರಿತು ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಜಾಗತಿಕ ತೈಲ ಮತ್ತು ಅನಿಲ ಬೇಡಿಕೆಯ ಸುಮಾರು 20% ವ್ಯಾಪಾರ ನಡೆಯುವ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಆದಾಗ್ಯೂ, ಸಂಸದ, ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಎಸ್ಮಾಯಿಲ್ ಕೊಸಾರಿ ಪ್ರತಿಕ್ರಿಯಿಸಿ, ಹೀಗೆ ಮಾಡುವುದು ಕಾರ್ಯಸೂಚಿಯಲ್ಲಿದೆ ಮತ್ತು ಅಗತ್ಯವಿದ್ದಾಗಲೆಲ್ಲಾ ಅದನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇರಾನ್ ಮೇಲೆ ದಾಳಿ ಮಾಡಿರುವ ಕುರಿತು ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರುಥ್ ಸೋಶಿಯಲ್‌ನಲ್ಲಿ ಭಾನುವಾರ ಮಾಹಿತಿ ನೀಡಿದ್ದು, “ಅಮೆರಿಕದ ಪಡೆಗಳು ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ‘ಅತ್ಯಂತ ಯಶಸ್ವಿ’ ದಾಳಿಗಳನ್ನು ನಡೆಸಿವೆ. ಎಲ್ಲಾ ಅಮೆರಿಕನ್ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ” ಎಂದು ತಿಳಿಸಿದ್ದಾರೆ.
“ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಂಬ್ ದಾಳಿ ಮಾಡಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ವಾಪಸ್ ನೆಲೆಗಳಿಗೆ ಹೋಗುತ್ತಿವೆ. ನಮ್ಮ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಈ ರೀತಿ ಕಾರ್ಯಾಚರಣೆ ಮಾಡಬಹುದಾದ ಮತ್ತೊಂದು ಸೇನೆಯು ಜಗತ್ತಿನಲ್ಲಿ ಇಲ್ಲ. ಇದು ಶಾಂತಿಯ ಸಮಯ! ಈ ಬೆಳವಣಿಗೆಯ ಬಗ್ಗೆ ನೀವು ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಅವರು ಉಲ್ಲೇಖಿಸಿದ್ದಾರೆ.
ಇರಾನ್‌ನ ಮೂರು ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಬಳಿಕ, ಪಶ್ಚಿಮ ಏಷ್ಯಾದ ಪ್ರತಿಯೊಬ್ಬ ಅಮೆರಿಕನ್ ನಾಗರಿಕ ಅಥವಾ ಮಿಲಿಟರಿ ಸಿಬ್ಬಂದಿ ಈಗ ನಮ್ಮ ಗುರಿ ಎಂದು ಇರಾನ್‌ನ ಸರ್ಕಾರಿ ದೂರದರ್ಶನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿರುವುದಾಗಿ news18.com ವರದಿ ಮಾಡಿದೆ.
“ಇರಾನ್‌ನ ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಅಮೆರಿಕ ಇರಾನ್ ವಿರುದ್ಧ ಅಪರಾಧ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಇದಕ್ಕೆ ಅವಕಾಶವಿಲ್ಲ. ಅಮೆರಿಕದ ಅಧ್ಯಕ್ಷರೇ, ನೀವು ದಾಳಿ ಪ್ರಾರಂಭಿಸಿದ್ದೀರಿ, ನಾವು ಕೊನೆಗೊಳಿಸುತ್ತೇವೆ” ಎಂದು ಇರಾನ್ ದೂರದರ್ಶನ ಯುಎಸ್ ನೆಲೆಗಳ ಗ್ರಾಫಿಕ್ ಅನ್ನು ಪ್ರದರ್ಶಿಸುತ್ತಾ ಹೇಳಿದೆ” ಎಂದು ವರದಿ ವಿವರಿಸಿದೆ.
ಜೂನ್ 13 ರಂದು ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದ ನಂತರ ದೇಶದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಶನಿವಾರ ಅಜ್‌ಜಝೀರಾ ವರದಿ ಮಾಡಿದೆ. ಇಸ್ರೇಲ್‌ನ “ಆಕ್ರಮಣ” ಕ್ಕೆ ಅಮೆರಿಕ ಸೇರಿಕೊಂಡರೆ ಅದು “ಎಲ್ಲರಿಗೂ ತುಂಬಾ ಅಪಾಯಕಾರಿ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಇರಾನ್‌ನ ಆರೋಗ್ಯ ಸಚಿವಾಲಯದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಹೊಸೈನ್ ಕೆರ್ಮನ್‌ಪೋರ್, ದೇಶದ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಸುತ್ತಿನ ಸಂಘರ್ಷ ಜೂನ್ 13 ರಂದು ಪ್ರಾರಂಭವಾಯಿತು. ಇಸ್ರೇಲ್ ಸೇನೆಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಇರಾನ್‌ನಲ್ಲಿ ಪರಮಾಣು ಗುರಿಗಳೆಂದು ಹೇಳಿಕೊಂಡ ಸ್ಥಳಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತಿಯಾಗಿ ಇರಾನ್ ಸೇನೆಯು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ನಿರಂತರ ದಾಳಿಗಳು ಈ ಪ್ರದೇಶದಲ್ಲಿ ವ್ಯಾಪಕ ಸಂಘರ್ಷದ ಆತಂಕಗಳಿಗೆ ಕಾರಣವಾಗಿವೆ. ಅಮೆರಿಕದಿಂದ ಬಾಂಬ್ ದಾಳಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರ ಪ್ರದೇಶ | ಸೀಟಿನ ವಿಚಾರದಲ್ಲಿ ಜಗಳ: ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯ ಗುಂಪು ಹತ್ಯೆ
ಉತ್ತರ ಪ್ರದೇಶ | ಸೀಟಿನ ವಿಚಾರದಲ್ಲಿ ಜಗಳ: ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯ ಗುಂಪು ಹತ್ಯೆ


Definitely sponsored by Israel. They don’t want worldwide Muslims, Christians and Jews unite together.