ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಶೇಕಡ 50ಕ್ಕೆ ಹೆಚ್ಚಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಘೋಷಿಸಿದ್ದರು. ಅದರಂತೆ, ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ಜಾರಿಗೆ ತರುವ ಕುರಿತು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (ಸಿಬಿಪಿ) ಕರಡು ಅಧಿಸೂಚನೆ ಹೊರಡಿಸಿದೆ ಎಂದು ವರದಿಯಾಗಿದೆ.
“ರಷ್ಯನ್ ಒಕ್ಕೂಟದ ಸರ್ಕಾರದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಇರುವ ಬೆದರಿಕೆಗಳನ್ನು ಪರಿಹರಿಸುವುದು” ಎಂಬ ಶೀರ್ಷಿಕೆಯ, ಆಗಸ್ಟ್ 6, 2025ರಂದು ಟ್ರಂಪ್ ಸಹಿ ಹಾಕಿದ ಕಾರ್ಯಕಾರಿ ಆದೇಶ ಸಂಖ್ಯೆ 14329 ಅನ್ನು ಜಾರಿಗೆ ತರಲು ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಧಿಸೂಚನೆಯು ಭಾರತದ ಉತ್ಪನ್ನಗಳಾದ ವಸ್ತುಗಳ ಆಮದಿನ ಮೇಲೆ ಹೊಸ ಸುಂಕ ದರವನ್ನು ನಿರ್ದಿಷ್ಟಪಡಿಸಿದೆ ಎಂದು ವರದಿಗಳು ಹೇಳಿವೆ.
ಆಗಸ್ಟ್ 27, 2025ರಂದು ಪ್ರಕಟಿಸಲು ನಿರ್ಧರಿಸಲಾದ ಕರಡು ಅಧಿಸೂಚನೆಯಲ್ಲಿ, ಟ್ರಂಪ್ ಅವರ ಕಾರ್ಯಕಾರಿ ಆದೇಶಕ್ಕೆ ಅನುಗುಣವಾಗಿ ಯುನೈಟೆಡ್ ಸ್ಟೇಟ್ಸ್‌ನ ಹಾರ್ಮೋನೈಸ್ಡ್ ಟ್ಯಾರಿಫ್ ವೇಳಾಪಟ್ಟಿಯನ್ನು (HTSUS) ಮಾರ್ಪಡಿಸುವುದು ಅಗತ್ಯವೆಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಹೊಸ ಸುಂಕಗಳು ಆಗಸ್ಟ್ 27, 2025ರಿಂದ ಜಾರಿಗೆ ಬರಲಿವೆ ಎಂದು ಸಿಬಿಪಿ ಸ್ಪಷ್ಟಪಡಿಸಿದೆ. ಆಗಸ್ಟ್ 27ರ ತಡರಾತ್ರಿ 12:01ರಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಕೆಗಾಗಿ ಆಮದು ಮಾಡಿಕೊಳ್ಳುವ ಅಥವಾ ಬಳಕೆಗಾಗಿ ಗೋದಾಮುಗಳಿಂದ ಪಡೆದುಕೊಳ್ಳುವ ಭಾರತದ ಎಲ್ಲಾ ಉತ್ಪನ್ನಗಳಿಗೆ ಹೆಚ್ಚಿನ ಸುಂಕಗಳು ಅನ್ವಯಿಸುತ್ತವೆ ಎಂದು ತಿಳಿಸಲಾಗಿದೆ.
ಜುಲೈ 30, 2025ರಂದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ಘೋಷಿಸಿದ್ದರು.
“ನೆನಪಿಡಿ, ಭಾರತ ನಮ್ಮ ಸ್ನೇಹಿತನಾಗಿದ್ದರೂ, ನಾವು ವರ್ಷಗಳಲ್ಲಿ ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರ ಮಾಡಿದ್ದೇವೆ. ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚಿವೆ, ವಿಶ್ವದಲ್ಲೇ ಅತ್ಯಧಿಕವಾಗಿವೆ ಮತ್ತು ಅವರು ಇತರ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ”ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನ ಪೋಸ್ಟ್‌ನಲ್ಲಿ ಹೇಳಿದ್ದರು.
“ಅಲ್ಲದೆ, ಅವರು ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲು ರಷ್ಯಾದಿಂದಲೇ ಖರೀದಿಸಿದ್ದಾರೆ. ಚೀನಾದೊಂದಿಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರು ಹೌದು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾ ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಇದು ಒಳ್ಳೆಯದಲ್ಲ. ಆದ್ದರಿಂದ ಭಾರತವು ಆಗಸ್ಟ್‌ನಿಂದ ಪ್ರಾರಂಭಿಸಿ ಶೇಕಡ 25ರಷ್ಟು ಸುಂಕವನ್ನು ಮತ್ತು ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ದಂಡವನ್ನೂ ಪಾವತಿಸಬೇಕು” ಎಂದು ಬರೆದುಕೊಂಡಿದ್ದರು.
ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಭಾರತೀಯ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ಹೇರುವ ಬಗ್ಗೆ ಸೋಮವಾರ (ಆಗಸ್ಟ್ 25, 2025) ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, “ಅಮೆರಿಕದ ಆರ್ಥಿಕ ಒತ್ತಡವನ್ನು ಲೆಕ್ಕಿಸದೆ ತಮ್ಮ ಸರ್ಕಾರವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
“ಎಷ್ಟೇ ಒತ್ತಡ ಬಂದರೂ, ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ. ಇಂದು, ಆತ್ಮನಿರ್ಭರ ಭಾರತ ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನು ಪಡೆಯುತ್ತಿದೆ ಮತ್ತು ಇದರ ಹಿಂದೆ ಎರಡು ದಶಕಗಳ ಕಠಿಣ ಪರಿಶ್ರಮವಿದೆ” ಎಂದು ಸೋಮವಾರ ಅಹಮದಾಬಾದ್‌ನಲ್ಲಿ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಮೋದಿ ಹೇಳಿಕೆ ನೀಡಿದ್ದಾರೆ.
ಹೆಚ್ಚುವರಿ ಸುಂಕದ ಪರಿಣಾಮವೇನು?
2024ರಲ್ಲಿ ಅಮೆರಿಕವು ಭಾರತಕ್ಕೆ ಪ್ರಮುಖ ರಫ್ತು ತಾಣವಾಗಿದ್ದು, 87.3 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಕಳಿಸಿಕೊಟ್ಟಿದೆ.
ಶೇ. 50ರಷ್ಟು ಸುಂಕ ‘ವ್ಯಾಪಾರ ನಿರ್ಬಂಧಕ್ಕೆ ಸಮಾನವಾದುದು’ ಎಂದು ಆರ್ಥಿಕ ಸೇವೆಗಳ ಸಂಸ್ಥೆ ನೋಮುರಾದ ವಿಶ್ಲೇಷಕರು ಎಚ್ಚರಿಸಿದ್ದಾರೆ. ಇದು ‘ಕಡಿಮೆ ಮೌಲ್ಯವರ್ಧನೆ ಮತ್ತು ಲಾಭ’ ಹೊಂದಿರುವ ಸಣ್ಣ ಸಂಸ್ಥೆಗಳನ್ನು ನಾಶಪಡಿಸುತ್ತದೆ ಎಂಬುವುದಾಗಿ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
“ಇಷ್ಟೊಂದು ಭಾರವಾದ ಆಮದು ತೆರಿಗೆಳ ಅಡಿಯಲ್ಲಿ ಯಾವುದೇ ಭಾರತೀಯ ಉತ್ಪನ್ನವು ಯಾವುದೇ ಸ್ಪರ್ಧಾತ್ಮಕ ಅಂಚನ್ನು ತಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಮತ್ತೊಂದು ಆರ್ಥಿಕ ಸೇವೆಗಳ ಸಂಸ್ಥೆ ಎಲಾರಾ ಸೆಕ್ಯುರಿಟೀಸ್‌ನ ಗರಿಮಾ ಕಪೂರ್ ಹೇಳಿದ್ದಾಗಿ ವರದಿ ವಿವರಿಸಿದೆ.


