ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ದ ಅಮೆರಿಕದ ಪ್ರಾಸಿಕ್ಯೂಟರ್ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಆರೋಪಿಗಳು 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭವನ್ನು ನಿರೀಕ್ಷಿಸುವ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿದ್ದರು ಎನ್ನಲಾಗಿದೆ.
ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿರುವ ಅಮೆರಿಕದ ಅಟಾರ್ನಿ ಕಚೇರಿಯ ಮಾಹಿತಿ ಪ್ರಕಾರ, ಗೌತಮ್ ಅದಾನಿ, ಸಾಗರ್ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಲಾಗಿದೆ. ಬಂಡವಾಳ ಆಕರ್ಷಿಸಲು ಅಮೆರಿಕದ ಹೂಡಿಕೆದಾರರು ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳಿಗೆ ಸುಳ್ಳು ಮತ್ತು ತಪ್ಪು ಹೇಳಿಕೆ ನೀಡಿರುವ ಆರೋಪ ಇವರ ಮೇಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ನ್ಯಾಯಾಧೀಶರು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ದ ಬಂಧನ ವಾರೆಂಟ್‌ಗಳನ್ನು ಹೊರಡಿಸಿದ್ದಾರೆ. ಆ ವಾರೆಂಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ರಾಯಿಟರ್ಸ್ ತಿಳಿಸಿದೆ.
“An arrest warrant has been issued by US authorities against Gautam Adani.”
Will he hide in Modi’s house? pic.twitter.com/17zLUhPhUW— Prashant Bhushan (@pbhushan1) November 21, 2024
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯವಹಾರ ನಡೆಸಿದ್ದ ಕಂಪನಿಯ ಮಾಜಿ ಅಧಿಕಾರಿಗಳಾದ ರಂಜಿತ್ ಗುಪ್ತಾ ಹಾಗೂ ರೂಪೇಶ್ ಅಗರವಾಲ್ ಹಾಗೂ ಕೆನಡಾ ಮೂಲದ ಹೂಡಿಕೆದಾರರಾದ ದೀಪಕ್ ಮಲ್ಹೋತ್ರಾ ಮತ್ತು ಸೌರಬ್ ಅಗರವಾಲ್ ಅವರು ಲಂಚ ನೀಡಿರುವುದು ವಿದೇಶಿ ಭ್ರಷ್ಟ ಕಾರ್ಯಾಚರಣೆ ಕಾಯ್ದೆಯಡಿ ಅಪರಾಧವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.
“ತಮ್ಮ ವ್ಯವಹಾರಗಳಿಗೆ ಅನುಕೂಲವಾಗುವಂತೆ ಭಾರತ ಸರ್ಕಾರದ ಅಧಿಕಾರಿಗಳಿಗೆ ಆರೋಪಿಗಳು ಲಂಚ ನೀಡಿದ್ದಾರೆ. ಲಂಚ ಹಾಗೂ ಭ್ರಷ್ಟಾಚಾರದ ಕುರಿತು ಸುಳ್ಳು ಹೇಳಿಕೆಗಳ ಮೂಲಕ ಅದಾನಿ ಹಾಗೂ ಇತರ ಆರೋಪಿಗಳು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇತರ ಆರೋಪಿಗಳು ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪವನ್ನು ಮರೆಮಾಚಲು ಯತ್ನಿಸಿದ್ದಾರೆ” ಎಂದು ಆರೋಪಿಸಲಾಗಿದೆ.
ದೋಷಾರೋಪಣೆಯ ಪ್ರಕಾರ, ಆರೋಪಿಗಳು ವಂಚನೆಗೆ ಗೌತಮ್ ಅದಾಮಿ ಅವರನ್ನು “ನ್ಯೂಮೆರೊ ಯುನೊ” ಮತ್ತು “ಬಿಗ್ ಮ್ಯಾನ್” ಎಂಬ ಕೋಡ್ ಹೆಸರುಗಳೊಂದಿಗೆ ಖಾಸಗಿಯಾಗಿ ಕರೆಯತ್ತಿದ್ದರು. ಸಾಗರ್ ಅದಾನಿ ಲಂಚದ ವ್ಯವಹಾರದ ಬಗ್ಗೆ ನಿಗಾ ಇಡಲು ತಮ್ಮ ಸೆಲ್ ಫೋನ್ ಬಳಸಿದ್ದಾರೆ ಎಂದು ಹೇಳಲಾಗಿದೆ.
ಅದಾನಿಗಳು, ವಿನೀತ್ ಜೈನ್ ಸೇರಿದಂತೆ ಅದಾನಿ ಗ್ರೀನ್ ಎನರ್ಜಿಯ ಕಾರ್ಯನಿರ್ವಾಹಕರು ಸಾಲದಾತರು ಮತ್ತು ಹೂಡಿಕೆದಾರರಿಂದ ಭ್ರಷ್ಟಾಚಾರವನ್ನು ಮರೆಮಾಚುವ ಮೂಲಕ ತಮ್ಮ ಕಂಪನಿಗೆ 3 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಸಾಲ ಮತ್ತು ಬಾಂಡ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
“ಈ ಪ್ರಕರಣ ಕುರಿತ ತನಿಖೆಯನ್ನು ತಡೆಯಲು ಎಫ್‌ಬಿಐ, ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟಿ ಅಂಡ್ ಎಕ್ಸ್‌ಚೇಂಜ್ ಕಮಿಷನ್ ಕೂಡಾ ಪ್ರಯತ್ನಿಸುತ್ತಿದೆ” ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾಗಿ ವರದಿಯಾಗಿದೆ.
ಪ್ರಕರಣದ ತನಿಖೆಯನ್ನು ನ್ಯೂಯಾರ್ಕ್‌ನ ಎಫ್‌ಬಿಐ ಕಚೇರಿ ನಡೆಸುತ್ತಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು (ನ.21) ಬೆಳಿಗ್ಗೆ ವರದಿ ಹೊರಬಿದ್ದಿದೆ. ಅದಾನಿ ಗ್ರೂಪ್ ತಮ್ಮ ಮೇಲಿನ ಆರೋಪದ ಕುರಿತು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಪ್ರತಿಕ್ರಿಯಿಸಿಲ್ಲ. ಆರೋಪಿಗಳ ಪರ ವಕೀಲರನ್ನು ತಕ್ಷಣ ಗುರುತಿಸಲು ಸಾಧ್ಯವಾಗಿಲ್ಲ ಎಂದು business-standard.com ವರದಿ ಮಾಡಿದೆ.
ಇದನ್ನೂ ಓದಿ : ಎಕ್ಸಿಟ್ ಪೋಲ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಬಿಜೆಪಿ ಮೈತ್ರಿಗೆ ಗೆಲುವು


