ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಗಳ ಶೀರ್ಷಿಕೆಗಳಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಬರೆಯಲಾದ ಹಿಂದಿ ಪದಗಳನ್ನು ಬಳಸುವ ಅಭ್ಯಾಸ ಹೆಚ್ಚುತ್ತಿದೆ. ಈ ಪ್ರವೃತ್ತಿಯಿಂದ ಹಿಂದಿ ಮಾತನಾಡದ ನಾಗರಿಕರು ಮತ್ತು ರಾಜ್ಯಗಳಿಗೆ ಅನ್ಯಾಯವಾಗಿದೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಕೇಂದ್ರ ಸಚಿವರು, “ಇಂತಹ ಶೀರ್ಷಿಕೆಗಳು ಅನೇಕ ಜನರಿಗೆ ಮಸೂದೆಗಳು ಮತ್ತು ಕಾಯ್ದೆಗಳ ಹೆಸರುಗಳನ್ನು ಗುರುತಿಸಲು, ಅರ್ಥಮಾಡಿಕೊಳ್ಳಲು ಅಥವಾ ಉಚ್ಚರಿಸಲು ಕಷ್ಟವಾಗಿಸುತ್ತದೆ. ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಗಳ ಶೀರ್ಷಿಕೆಯಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾದ ಹಿಂದಿ ಪದಗಳನ್ನು ಬಳಸುವ ಸರ್ಕಾರದ ಹೆಚ್ಚುತ್ತಿರುವ ಅಭ್ಯಾಸವನ್ನು ನಾನು ವಿರೋಧಿಸುತ್ತೇನೆ” ಎಂದು ಹೇಳಿದರು.
ಸುಮಾರು 75 ವರ್ಷಗಳಿಂದ ಸಂಸತ್ತು ಸ್ಪಷ್ಟ ಮತ್ತು ಸರಳ ಪದ್ಧತಿಯನ್ನು ಅನುಸರಿಸುತ್ತಿದೆ. ಮಸೂದೆಗಳ ಇಂಗ್ಲಿಷ್ ಆವೃತ್ತಿಯಲ್ಲಿ ಇಂಗ್ಲಿಷ್ ಶೀರ್ಷಿಕೆಗಳನ್ನು ಬಳಸಲಾಗುತ್ತಿತ್ತು. ಆದರೆ, ಹಿಂದಿ ಶೀರ್ಷಿಕೆಗಳು ಹಿಂದಿ ಆವೃತ್ತಿಯಲ್ಲಿ ಕಾಣಿಸಿಕೊಂಡವು. ಈ ವ್ಯವಸ್ಥೆಯಿಂದ ಆಡಳಿತ ಸರಾಗವಾಗಿ ಕಾರ್ಯನಿರ್ವಹಿಸಿತು. ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
“ದೀರ್ಘಕಾಲದಿಂದ ಕಾನೂನಿಗಳಿಂದ ಯಾರಿಗೂ ಸಮಸ್ಯೆಯಾಗದಿದ್ದಾಗ, ಈಗ ಮಾತ್ರ ಅದನ್ನು ಏಕೆ ಬದಲಾಯಿಸಬೇಕು” ಎಂದು ಅವರು ಕೇಳಿದರು.
ಈ ಬದಲಾವಣೆಯು ಭಾರತದ ಭಾಷಾ ವೈವಿಧ್ಯತೆಯನ್ನು ನಿರ್ಲಕ್ಷಿಸುತ್ತದೆ. ಹಿಂದಿ ಅಧಿಕೃತ ಭಾಷೆಯಲ್ಲದ ರಾಜ್ಯಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಚಿದಂಬರಂ ಹೇಳಿದರು. ಈ ಕ್ರಮವು ಇಂಗ್ಲಿಷ್ ಭಾಷೆಯು ದೇಶದ ಸಹಾಯಕ ಅಧಿಕೃತ ಭಾಷೆಯಾಗಿ ಮುಂದುವರಿಯುತ್ತದೆ ಎಂಬ ದೀರ್ಘಕಾಲದ ಭರವಸೆಯನ್ನು ದುರ್ಬಲಗೊಳಿಸಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.


