ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಡಿಜೆ ಸಂಗೀತ ನುಡಿಸುವ ವಿವಾದದ ನಂತರ ದಲಿತ ವರನ ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶುಕ್ರವಾರ ಠಾಕೂರ್ ಸಮುದಾಯಕ್ಕೆ ಸೇರಿದ ಎಂಟು ಜನರನ್ನು ಬಂಧಿಸಲಾಗಿದ್ದು, ಇತರ ಹಲವರನ್ನು ಬಂಧಿಸಲು ಶೋಧ ನಡೆಯುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಠಾಕೂರ್ ಸಮುದಾಯದ 29 ಜನರು, ಸುಮಾರು 50 ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿ ತಿಳಿಸಿರುವ ಪ್ರಕಾರ, ಗುರುವಾರ ರಾತ್ರಿ ಧಮ್ರವಾಲಿ ಗ್ರಾಮದಲ್ಲಿ ಮೆರವಣಿಗೆ ಪ್ರಬಲ ಜಾತಿಯ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ದಾಳಿ ನಡೆಸಲಾಗಿದೆ. ಲಾಠಿ ಮತ್ತು ಕಲ್ಲುಗಳಿಂದ ಹಲ್ಲೆಗೊಳಗಾದ ನಂತರ ಸುಮಾರು ಒಂದು ಡಜನ್ ದಲಿತರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಶುಕ್ರವಾರ ಸಂಜೆಯ ವೇಳೆಗೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಕೊಟ್ವಾಲಿ (ಗ್ರಾಮೀಣ) ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿತ್ತು. ಆದರೆ, ಬುಲಂದ್‌ಶಹರ್ ಬಿಜೆಪಿ ಸಂಸದ ಭೋಲಾ ಸಿಂಗ್ ಮಧ್ಯಪ್ರವೇಶಿಸುವವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಬಿಜೆಪಿಯ ದಲಿತ ಮತ್ತು ಹಿಂದುಳಿದ ಜಾತಿ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಪಿ. ಸಿಂಗ್, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಮುಖ್ಯಮಂತ್ರಿ ಕಚೇರಿಯ ಜೊತೆಗೆ ಲಕ್ನೋದಲ್ಲಿರುವ ಪಕ್ಷದ ಪ್ರಧಾನ ಕಚೇರಿಗೂ ಈ ವಿಷಯವನ್ನು ತಲುಪಿಸಿದ್ದಾರೆ.
“ಇದು ದುರದೃಷ್ಟಕರ ಘಟನೆಯಾಗಿದ್ದು, ಜಾತಿವಾದಿ ಪಕ್ಷಪಾತ ಪ್ರದರ್ಶಿಸಿದವರನ್ನು ಕಬ್ಬಿಣದ ಕೈಯಿಂದ ಎದುರಿಸಬೇಕು, ಇದರಿಂದ ಇತರರು ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸಬಾರದು. ಎಫ್‌ಐಆರ್‌ನಲ್ಲಿ ಹೆಸರಿಸಲಾದವರು, ಭಾಗಿಯಾಗಿರುವ ಇತರರು ತಲೆಮರೆಸಿಕೊಳ್ಳದಂತೆ ನೋಡಿಕೊಳ್ಳಲು ನಾನು ವೈಯಕ್ತಿಕವಾಗಿ ಪೊಲೀಸ್ ಕ್ರಮವನ್ನು ಮೇಲ್ವಿಚಾರಣೆ ಮಾಡುತ್ತೇನೆ” ಎಂದು ಸಂಸದರು ಶುಕ್ರವಾರ ಸ್ಥಳೀಯ ವರದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ; ಇಂದೋರ್| ಕಳ್ಳತನ ಮಾಡಿ ಗೆಳತಿಯರನ್ನು ಕುಂಭಮೇಳಕ್ಕೆ ಕರೆದೊಯ್ದ ಕದೀಮರು; ಹಿಂದಿರುಗಿದ ಬಳಿಕ ಬಂಧನ


