ತಾನು ಪ್ರೀತಿಯಿಂದ ಸಾಕಿದ್ದ ಬೆಕ್ಕಿನ ಸಾವಿನಿಂದ ಕಂಗಾಲಾದ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಮಹಿಳೆಯೊಬ್ಬರು, ಅದು ಮತ್ತೆ ಜೀವಕ್ಕೆ ಬರುತ್ತದೆ ಎಂಬ ಆಶಯದೊಂದಿಗೆ ಎರಡು ದಿನಗಳ ಕಾಲ ಅದರ ಶವವನ್ನು ತನ್ನ ಹತ್ತಿರದಲ್ಲೇ ಇಟ್ಟುಕೊಂಡಿದ್ದರು. ಆಕೆಯ ಭರವಸೆಗಳು ಭಗ್ನಗೊಂಡಾಗ, ಮರುದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಮ್ರೋಹಾದ ಹಸನ್‌ಪುರ ನಿವಾಸಿಯಾಗಿದ್ದ 32 ವರ್ಷದ ಪೂಜಾ, ಸುಮಾರು ಎಂಟು ವರ್ಷಗಳ ಹಿಂದೆ ದೆಹಲಿಯ ವ್ಯಕ್ತಿಯನ್ನು ವಿವಾಹವಾದರು. ಆದರೆ, ಎರಡು ವರ್ಷಗಳ ನಂತರ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತು. ಅಂದಿನಿಂದ ಅವರು ತಮ್ಮ ತಾಯಿ ಗಜ್ರಾ ದೇವಿಯೊಂದಿಗೆ ತಮ್ಮ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದರು.
ಒಂಟಿತನವನ್ನು ನಿಭಾಯಿಸಲು, ಪೂಜಾ ಒಂದು ಸಾಕು ಬೆಕ್ಕನ್ನು ದತ್ತು ಪಡೆದಿದ್ದು, ದರಾದೃಷ್ಟವಶಾತ್ ಅದು ಗುರುವಾರ ಸತ್ತುಹೋಯಿತು. ಆಕೆಯ ತಾಯಿ ಪ್ರಾಣಿಯನ್ನು ಹೂಳಲು ಸೂಚಿಸಿದಾಗ, ಪೂಜಾ ನಿರಾಕರಿಸಿದರು. ಅದು ಮತ್ತೆ ಜೀವಂತವಾಗುತ್ತದೆ ಎಂದು ಪಟ್ಟುಹಿಡಿದಿದ್ದರು. ಪೂಜಾ ಎರಡು ದಿನಗಳ ಕಾಲ ಬೆಕ್ಕಿನ ಶವವನ್ನು ಬಿಡಲು ಇಷ್ಟವಿರಲಿಲ್ಲ. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಅದನ್ನು ಹೂಳಲು ಮನವೊಲಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ, ಮೃತ ಮಹಿಳೆ ತಮ್ಮ ಮನೆಯ ಮೂರನೇ ಮಹಡಿಯಲ್ಲಿರುವ ತನ್ನ ಕೋಣೆಯಲ್ಲಿ ಬೀಗ ಹಾಕಿಕೊಂಡರು. ಆ ರಾತ್ರಿ 8 ಗಂಟೆ ಸುಮಾರಿಗೆ, ಗಜ್ರಾ ದೇವಿ ತನ್ನ ಮಗಳನ್ನು ನೋಡಲು ಹೋದರು. ಪೂಜಾಳ ಶವ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದನ್ನು ಹಾಗೂ ಹತ್ತಿರದಲ್ಲಿ ಸತ್ತ ಬೆಕ್ಕು ಬಿದ್ದಿರುವುದನ್ನು ಅವರು ಕಂಡರು. ಆಕೆಯ ಕಿರುಚಾಟದಿಂದ ಎಚ್ಚೆತ್ತುಕೊಂಡ ನೆರೆಹೊರೆಯವರು, ತಕ್ಷಣ ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಮನೆಗೆ ಆಗಮಿಸಿದರು ಮತ್ತು ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿತು. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ನಕಲಿ ಮತದಾರರ ಗುರುತಿನ ಚೀಟಿಗಳು ನಕಲಿ ಮತದಾರರನ್ನು ಸೂಚಿಸುವುದಿಲ್ಲ: ಭಾರತೀಯ ಚುನಾವಣಾ ಆಯೋಗ


