‘ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ’ ಎಂದು ಹೇಳಿದ ಉತ್ತರ ಪ್ರದೇಶದ ದಿಯೋಬಂದ್‌ನ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ಹೊರಗಿಡಲಾಗಿದೆ. ಅವರ ಹೇಳಿಕೆ ಕುರಿತು ವರದಿ ನೀಡಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ದಿಯೋಬಂದ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನರೇಂದ್ರ ಕುಮಾರ್ ಶರ್ಮಾ ಮೇಲಾಧಿಕಾರಿಗಳ ಕ್ರಮಕ್ಕೆ ಗುರಿಯಾದ ಅಧಿಕಾರಿ. ಸದ್ಯಕ್ಕೆ ಅವರನ್ನು ಕೆಲಸದಿಂದ ದೂರ ಇಡಲಾಗಿದ್ದು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದೆ.
ಹಿರಿಯ ಅಧಿಕಾರಿಗಳು ಶರ್ಮಾ ಅವರ ಹೇಳಿಕೆ ಕುರಿತು ಕಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ವರದಿ ಆಧರಿಸಿ ಶರ್ಮಾ ಅವರ ವಿರುದ್ದ ವರ್ಗಾವಣೆ ಅಥವಾ ಇತರ ಕ್ರಮಗಳನ್ನು ಕೈಗೊಳ್ಳಬಹುದು ಎಂದು ವರದಿಯಾಗಿದೆ.
ಅಧಿಕಾರಿ ಮಾಡಿದ ತಪ್ಪೇನು?
ನವೆಂಬರ್ 12ರಂದು ದೆಹಲಿಯ ಕೆಂಪುಕೋಟೆ ಬಳಿ ಸ್ಪೋಟ ಸಂಭವಿಸಿ 13 ಜನರು ಸಾವನ್ನಪ್ಪಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಈ ಸ್ಪೋಟದ ಬಳಿಕ ವದಂತಿಗಳು ಹರಿದಾಡುತ್ತಿದ್ದ ಹಿನ್ನೆಲೆ ಶರ್ಮಾ ಮಂಗಳವಾರ ದಿಯೋಬಂದ್ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಸಮುದಾಯಗಳ ನಾಯಕರ ಸಭೆ ಕರೆದಿದ್ದರು.
ಸಭೆಯಲ್ಲಿ ಮಾತನಾಡಿದ ಶರ್ಮಾ, “ಜನರು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪುದಾರಿಗೆಳೆಯುವ ಸಂದೇಶಗಳನ್ನು ನಂಬಬಾರದು. ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದು ಭಾವಿಸುವುದು ತಪ್ಪು. ಎಲ್ಲಾ ಧರ್ಮಗಳಲ್ಲಿಯೂ ಅಂತಹವರು ಕಂಡು ಬರುತ್ತಾರೆ” ಎಂದು ಹೇಳಿದ್ದರು.
ಮುಂದುವರಿದು, “ಈ ಕುರ್ಚಿ ನನ್ನ ತಾಯಿಯಂತೆ, ತಪ್ಪು ಮಾಡುವವರಿಗೆ ಯಾವುದೇ ಧರ್ಮವಿಲ್ಲ. ನಕ್ಸಲರು ಹಿಂದೂ ಸಮುದಾಯದಲ್ಲೂ ಇದ್ದಾರೆ. ನೌಕಾಪಡೆಯಲ್ಲಿ ಅನೇಕ ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ. ಸೈನ್ಯದಲ್ಲೂ ಹಲವರನ್ನು ಬಂಧಿಸಲಾಗಿದೆ. ಹಲವು ಹಿಂದೂ ಭಯೋತ್ಪಾದಕರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದು ಹೇಳುವುದು ತಪ್ಪು. ಯಾವುದೇ ಧರ್ಮಗ್ರಂಥವು ಇತರರಿಗೆ ಹಾನಿ ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ. 34 ವರ್ಷಗಳ ಕಾಲ ತಾರತಮ್ಯವಿಲ್ಲದೆ ಕೆಲಸ ಮಾಡಿದ್ದೇನೆ” ಎಂದಿದ್ದರು.
“ನನ್ನ 34 ವರ್ಷಗಳ ಸೇವೆಯಲ್ಲಿ, ಒಬ್ಬ ಮುಸ್ಲಿಂ ಕೂಡ ನಾನು ಧರ್ಮದ ಆಧಾರದ ಮೇಲೆ ಪಕ್ಷಪಾತದಿಂದ ನಡೆದುಕೊಂಡಿದ್ದೇನೆ ಎಂದು ಹೇಳಿದರೆ ನಾನು ರಾಜೀನಾಮೆ ನೀಡಿ ನನ್ನ ಕೆಲಸದಿಂದ ಹೊರನಡೆಯುತ್ತೇನೆ. ಹಣಕ್ಕಾಗಿ ಅಲ್ಲ, ಬದಲಾಗಿ ವಿದ್ಯಾರ್ಥಿಯಾಗಿದ್ದಾಗ ಕಂಡ ವ್ಯವಸ್ಥೆಯನ್ನು ಸುಧಾರಿಸಲು ಬಯಸಿದ್ದರಿಂದ ಪೊಲೀಸ್ ಇಲಾಖೆಗೆ ಸೇರಿದೆ. ಠಾಣೆಯೊಳಗೆ ಬಡವರು ಮತ್ತು ಮಧ್ಯವರ್ತಿಗಳ ಶೋಷಣೆ ನಡೆಯುತ್ತಿರುವುದನ್ನು ನೆನಪಿಸಿಕೊಂಡ ಅವರು, ಇದು ಇಲಾಖೆಯಲ್ಲಿ ಸೇವೆ ಮಾಡುವಂತೆ ನನ್ನನ್ನು ಪ್ರೇರೇಪಿಸಿತು ಎಂದು ಭಾವುಕರಾಗಿ ಹೇಳಿದ್ದರು.
UP Inspector Narendra Kumar Sharma, posted in Saharanpur, said:
“Terrorism has no religion. Naxalites were Hindus, and even some Hindu extremists have been arrested from the Navy and Army. Linking terrorism to Muslims is incorrect — a terrorist belongs to no faith.” pic.twitter.com/HK10I3zJV7
— Брат (@1vinci6le) November 13, 2025
ಶರ್ಮಾ ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ವೈರಲ್ ವಿಡಿಯೋ ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಲುಪಿದೆ. ಗುರುವಾರ, ಸಹರಾನ್‌ಪುರ ಎಸ್‌ಎಸ್‌ಪಿ ಆಶಿಶ್ ತಿವಾರಿ ಅವರು ಇನ್ಸ್‌ಪೆಕ್ಟರ್ ಶರ್ಮಾ ಅವರನ್ನು ಪೊಲೀಸ್ ಲೈನ್‌ಗೆ (ತರಬೇತಿ ಕೇಂದ್ರ ಅಥವಾ ಕಚೇರಿ) ಕಳುಹಿಸುವಂತೆ ನಿರ್ದೇಶಿಸಿದ್ದಾರೆ.
ಇನ್‌ಸ್ಪೆಕ್ಟರ್ ಶರ್ಮಾ ಅವರು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ವಿಡಿಯೋದ ಒಂದು ಸಣ್ಣ, ಆಯ್ದ ಭಾಗವನ್ನು ಮಾತ್ರ ಹಂಚಿಕೊಳ್ಳಲಾಗಿದೆ. ನಾನು ಯಾವುದೇ ಧಾರ್ಮಿಕ ಸಮುದಾಯವನ್ನು ಅಪರಾಧಿ ಮಾಡುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಶರ್ಮಾ ಅವರು ಸುಮಾರು 20 ವರ್ಷಗಳಿಂದ ದಿಯೋಬಂದ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯವಾಗಿ ಅವರ ನೇರ ಸಂವಹನ ಶೈಲಿ ಮತ್ತು ನ್ಯಾಯಯುತ ಕೆಲಸದ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ಅನೇಕ ನಿವಾಸಿಗಳು ಅವರ ಪರವಾಗಿ ಮಾತನಾಡಿದ್ದಾರೆ ಎಂದು ನ್ಯೂಸ್ 18 ವರದಿ ಹೇಳಿದೆ.
ಬಜರಂಗದಳದ ದೇವಬಂದ್ ಪ್ರಾಂತೀಯ ಮಾಜಿ ಸಂಚಾಲಕ ವಿಕಾಸ್ ತ್ಯಾಗಿ ಪೊಲೀಸ್ ಅಧಿಕಾರಿಯ ನಡವಳಿಕೆಯನ್ನು ಶ್ಲಾಘಿಸಿದ್ದಾರೆ. ತಪ್ಪುದಾರಿಗೆಳೆಯುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿ ಹಂಚಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬಿಹಾರದ ಗೆಲುವಿನ ಬೆನ್ನಲ್ಲೇ ಹೂಕೋಸು ಫೋಟೋ ಹಂಚಿಕೊಂಡ ಬಿಜೆಪಿ ಸಚಿವ: ಪರೋಕ್ಷವಾಗಿ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ?


