ದಲಿತ ಕಾನ್‌ಸ್ಟೆಬಲ್ ಒಬ್ಬರ ಮದುವೆ ಮೆರವಣಿಗೆಯ ಮೇಲೆ ಪ್ರಬಲ ಜಾತಿ ವ್ಯಕ್ತಿಗಳು ದಾಳಿ ಮಾಡಿ; ಡಿಜೆ ಸಂಗೀತವನ್ನು ವಿರೋಧಿಸಿ, ವಾಹನವನ್ನು ಧ್ವಂಸಗೊಳಿಸಿದ್ದಾರೆ. ಜನರ ಮೇಲೆ ಕಲ್ಲು ತೂರಾಟ ನಡೆಸಿರುವ ಜಾತಿವಾದಿಗಳು, ವರನನ್ನು ಕುದುರೆಯಿಂದ ಬಲವಂತವಾಗಿ ಕೆಳಗಿಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆಗೆ ಆಗಮಿಸಿದ್ದ ಹಲವಾರು ಅತಿಥಿಗಳನ್ನು ಜಾತಿವಾದಿಗಳು ಗಾಯಗೊಳಿಸಿದ್ದಾರೆ ಎಂದು ಬುಲಂದ್‌ಶಹರ್‌ನಲ್ಲಿ ಭಾನುವಾರ ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿ, ಐವರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಗಾಜಿಯಾಬಾದ್‌ನಲ್ಲಿ ಪಿಎಸಿ ಕಾನ್‌ಸ್ಟೆಬಲ್ ಆಗಿರುವ ವರ ರಾಬಿನ್ ಸಿಂಗ್ (31) ಸೋಮವಾರ ಲಖಾವತಿಯ ಮಹಿಳಾ ಕಾನ್‌ಸ್ಟೆಬಲ್ ಅವರನ್ನು ಮದುವೆಯಾಗುತ್ತಿದ್ದರು. ಅವರ ತಂದೆ ನಂದ್ರಾಮ್ ಸಿಂಗ್, ರಾತ್ರಿ 8 ಗಂಟೆ ಸುಮಾರಿಗೆ ಜಹಾಂಗೀರಾಬಾದ್ ಪ್ರದೇಶದ ಟಿಟೋನಾ ಗ್ರಾಮದ ಮೂಲಕ ಬರಾತ್ ಹಾದು ಹೋಗುತ್ತಿದ್ದಾಗ ಠಾಕೂರ್ ಸಮುದಾಯದ 20-25 ಜನ ಪುರುಷರು ಮೆರವಣಿಗೆಯನ್ನು ತಡೆದರು.
“ಡಿಜೆ ಸಂಗೀತದೊಂದಿಗೆ ತಮ್ಮ ಪ್ರದೇಶದಲ್ಲಿ ಬರಾತ್ ಹಾದು ಹೋಗುವುದನ್ನು ಅವರು ಆಕ್ಷೇಪಿಸಿದರು. ಅವರು ನಮ್ಮ ಮೇಲೆ ಕಲ್ಲು ತೂರಿದರು, ಬಲವಂತವಾಗಿ ನನ್ನ ಮಗನನ್ನು ಕುದುರೆಯಿಂದ ಕೆಳಗಿಳಿಸಿ, ಡಿಜೆ ವಾಹನವನ್ನು ಧ್ವಂಸಗೊಳಿಸಿದರು. ದಾಳಿಯಲ್ಲಿ ಕೆಲವು ಅತಿಥಿಗಳು ಗಾಯಗೊಂಡರು. ನನ್ನ ಮಗ ಗಂಭೀರ ಹಾನಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ” ಎಂದು ಅವರು ವಿವರಿಸಿದ್ದಾರೆ.
ಕೆಲವು ದಾಳಿಕೋರರು ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ರಾಬಿನ್ ಹೇಳಿದ್ದಾರೆ. “ನನ್ನ ನಿಶ್ಚಿತಾರ್ಥದ ದಿನ ನಾನು ಅವರಲ್ಲಿ ಕೆಲವರನ್ನು ಗುರುತಿಸಿದೆ. ಅವರು ಮೆರವಣಿಗೆಯಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರು, ದಲಿತ ಬಾರಾತ್ ತಮ್ಮ ಪ್ರದೇಶದಲ್ಲಿ ಹಾದು ಹೋಗಬಾರದು ಎಂದು ಹೇಳಿದರು. ಅವರು ಡಿಜೆ ಚಾಲಕನನ್ನು ಥಳಿಸಿ ಉಪಕರಣಗಳನ್ನು ನಾಶಪಡಿಸಿದರು. ನಾವು ಬಾರಾತ್ನೊಂದಿಗೆ ಮನೆಗೆ ಮರಳಬೇಕಾಯಿತು. ವಧುವಿನ ಮನೆಗೆ ಕಾರಿನಲ್ಲಿ ಹೋದರು, ಎಲ್ಲವೂ ಯೋಜಿಸಲಾಗಿತ್ತು. ಆದರೆ, ಈ ಹಿಂಸಾಚಾರದಿಂದಾಗಿ ಎಲ್ಲವೂ ವ್ಯರ್ಥವಾಯಿತು” ಎಂದು ಪೊಲೀಸ್ ಕಾನ್‌ಸ್ಟೆಬಲ್ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ; ವಿಎಚ್‌ಪಿ ವೇದಿಕೆಯಲ್ಲಿ ವಿವಾದಾತ್ಮಕ ಹೇಳಿಕೆ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಮನ್ಸ್


