ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಆಹಾರ ಮಳಿಗೆಗಳ ಮಾಲೀಕರು, ನಿರ್ವಾಹಕರು ತಮ್ಮ ಹೆಸರು ಪ್ರದರ್ಶಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಬಾಣಸಿಗರು ಮತ್ತು ಸರ್ವರ್‌ಗಳು ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದೂ ಸರ್ಕಾರ ಆದೇಶಿಸಿರುವುದಾಗಿ ವರದಿ ತಿಳಿಸಿದೆ.
ತಿನಿಸುಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಆದರೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರ್ಕಾರಗಳು ಎರಡು ತಿಂಗಳ ಹಿಂದೆ ನೀಡಿದ್ದ ಇದೇ ರೀತಿಯ ಆದೇಶ ವಿವಾದಕ್ಕೆ ಕಾರಣವಾಗಿತ್ತು. ಪ್ರಸ್ತುತ ಆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯನ್ನೂ ನೀಡಿದೆ.
ಈ ವರ್ಷದ ಕನ್ವರ್ ಯಾತ್ರೆಯ ಸಂದರ್ಭ, ಯಾತ್ರೆ ಸಾಗುವ ಮಾರ್ಗದ ಎಲ್ಲಾ ಅಂಗಡಿ, ಹೋಟೆಲ್ ಮಾಲೀಕರು ತಮ್ಮ ಮತ್ತು ಸಿಬ್ಬಂದಿಯ ಹೆಸರು ಪ್ರದರ್ಶಿಸುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಇದು ಧರ್ಮದ ಆಧಾರದಲ್ಲಿ ಹೋಟೆಲ್‌ಗಳನ್ನು ಗುರುತಿಸಿ ಒಂದು ಸಮುದಾಯದ ವ್ಯಾಪಾರ ಬಹಿಷ್ಕರಿಸುವ ಹುನ್ನಾರ ಎಂದು ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು.
ಸರ್ಕಾರದ ಆದೇಶ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ಉಂಟು ಮಾಡುತ್ತದೆ ಎಂದು ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜುಲೈ 22 ರಂದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಂಗಳವಾರ ಹೊಸ ಆದೇಶ ನೀಡಿರುವ ಸಿಎಂ ಆದಿತ್ಯನಾಥ್, ಸಹರಾನ್‌ಪುರದಲ್ಲಿ ಬಾಲಕರು ರೊಟ್ಟಿ ಮೇಲೆ ಉಗುಳಿದ್ದಾರೆ ಮತ್ತು ಗಾಝಿಯಾಬಾದ್‌ನಲ್ಲಿ ಮಾರಾಟಗಾರರೊಬ್ಬರು ಗ್ರಾಹಕರಿಗೆ ಮೂತ್ರದೊಂದಿಗೆ ಹಣ್ಣಿನ ರಸ ಬೆರೆಸಿ ಕೊಟ್ಟಿದ್ದಾರೆ ಎಂದು ಆರೋಪಿಸಿರುವ ವಿಡಿಯೋಗಳ ಕುರಿತು ಉಲ್ಲೇಖಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜ್ಯೂಸ್, ದಾಲ್ ಮತ್ತು ರೊಟ್ಟಿಯಂತಹ ಆಹಾರ ಪದಾರ್ಥಗಳಿಗೆ ಮಾನವ ತ್ಯಾಜ್ಯ, ತಿನ್ನಲಾಗದ ಅಥವಾ ಕೊಳಕು ಪದಾರ್ಥಗಳನ್ನು ಕಲಬೆರಕೆ ಮಾಡುವ ಘಟನೆಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿದೆ. ಈ ಕೃತ್ಯಗಳು ಕ್ರೂರವಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತವೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಹೋಟೆಲ್, ರೆಸ್ಟೋರೆಂಟ್ ಮಾಲೀಕರು, ಸಿಬ್ಬಂದಿ ಆಹಾರಕ್ಕೆ ಕಲಬೆರಕೆ ಅಥವಾ ಕೊಳಕು ಪದಾರ್ಥ ಬೆರೆಸಿದರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಹೆಸರು ಪ್ರದರ್ಶಿಸುವ ಅವಶ್ಯಕತೆ ಏನಿದೆ? ಹೆಸರು ಪ್ರದರ್ಶಿಸುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತದಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಹೆಸರಿಗೆ ಸ್ವಚ್ಛತೆಯ ಕಾರಣ ನೀಡಿದರೂ, ಸರ್ಕಾರದ ಆದೇಶದ ಹಿಂದೆ ಯಾರನ್ನೋ ಗುರಿಯಾಗಿಸುವ ಉದ್ದೇಶ ಇದೆ ಎಂಬ ಚರ್ಚೆಗಳು ಸಾಮಾಜಿಕ ಜಾತಾಣಗಳಲ್ಲಿ ನಡೆಯುತ್ತಿದೆ.
ಇದನ್ನೂ ಓದಿ : 3 ಕೃಷಿ ಕಾನೂನುಗಳನ್ನು ವಾಪಾಸು ತರಬೇಕು: ಬಿಜೆಪಿ ಸಂಸದೆ ಕಂಗನಾ ರಣಾವತ್ ಆಗ್ರಹ


