ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನವಾಬ್‌ಗಂಜ್ ಪ್ರದೇಶದಲ್ಲಿ, ಪಪ್ಪು ದಿವಾಕರ್ ಎಂಬ ದಲಿತ ವ್ಯಕ್ತಿಯನ್ನು ಶನಿವಾರ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ತಲೆ ಬೋಳಿಸಿ ಸಾರ್ವಜನಿಕ ಅವಮಾನಕ್ಕೆ ಒಳಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತ ವ್ಯಕ್ತಿಯು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದಿವಾಕರ್ ಗೆಲ್ತಂಡಾ ಗ್ರಾಮದ ನಿವಾಸಿ ಚಂದ್ರಸೇನ್ ಅವರಿಗೆ ಟ್ರ್ಯಾಕ್ಟರ್ ಖರೀದಿಸಲು ₹4.5 ಲಕ್ಷ ಸಾಲ ನೀಡಿದ್ದರು. ವಾಪಸ್ ಕೇಳಿದಾಗ, ಚಂದ್ರಸೇನ್, ಅವರ ಮಗ ಪಪ್ಪು, ಗೋಧನ್ ಲಾಲ್ ಮತ್ತು ಇತರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಅವರನ್ನು ಥಳಿಸಿ, ಜಾತಿ ಆಧಾರಿತ ನಿಂದನೆ ಮಾಡಿ, ಬಲವಂತವಾಗಿ ತಲೆ ಬೋಳಿಸಿದ್ದಾರೆ. ಮೀಸೆ ಮತ್ತು ಹುಬ್ಬುಗಳನ್ನು ಕತ್ತರಿಸಿ, ಗ್ರಾಮಸ್ಥರ ಮುಂದೆ ಅವರ ಮುಖಕ್ಕೆ ಕೆಸರು ಬಳಿದು ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ.
ದೂರಿನ ನಂತರ, ನವಾಬ್‌ಗಂಜ್ ಪೊಲೀಸರು ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚಂದ್ರಸೇನ್ ಮತ್ತು ಗೋಧನ್ ಲಾಲ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಮೂರನೇ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.
ಕಳೆದ ಮೂರು ತಿಂಗಳಿನಿಂದ ಗೆಲಾ ತಾಂಡಾ ಗ್ರಾಮದಲ್ಲಿರುವ ಚಂದ್ರಸೇನ್ ಅವರ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದೆ ಎಂದು ಪಪ್ಪು ಪೊಲೀಸರಿಗೆ ತಿಳಿಸಿದ್ದು, “ಕೆಲವು ತಿಂಗಳ ಹಿಂದೆ, ಚಂದ್ರಸೇನ್ ಟ್ರ್ಯಾಕ್ಟರ್ ಖರೀದಿಸುವ ಹೆಸರಿನಲ್ಲಿ ನನ್ನಿಂದ ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಪಡೆದಿದ್ದ” ಎಂದು ಹೇಳಿದ್ದಾರೆ.
“ನಾನು ಚಂದ್ರಸೇನ್ ಅವರನ್ನು ಹಣ ಮರಳಿಸುವಂತೆ ಕೇಳಿದಾಗ, ಅವರ ಮಗ ಪಪ್ಪು, ಗೋಧನ್ ಮತ್ತು ಇತರ ನಾಲ್ಕೈದು ಜನರು ನನ್ನನ್ನು ಹೊಡೆದರು. ಅವರು ನನ್ನ ಮೇಲೆ ಜಾತಿ ನಿಂದನೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನಂತರ ಅವರು ರೇಜರ್‌ನಿಂದ ನನ್ನ ಮೀಸೆ ಮತ್ತು ಹುಬ್ಬು ಮತ್ತು.ತಲೆ ಬೋಳಿಸಿದರು. ಈ ಘಟನೆ ನನ್ನನ್ನು ಮಾನಸಿಕವಾಗಿ ಅಸ್ಥಿರಗೊಳಿಸಿದೆ. ನಾನು ಅದೇ ದಿನ ನನ್ನ ಬ್ಯಾಗ್‌ನೊಂದಿಗೆ ಬಹೇರಿಗೆ ಹಿಂತಿರುಗಿದೆ” ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


