ಮದ್ರಸಾ ಕಾಯ್ದೆಯ ತಿದ್ದುಪಡಿಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕರಡು ಮಸೂದೆಯನ್ನು ಸಿದ್ದಪಡಿಸಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ಮದ್ರಸಾ ಕಾಯ್ದೆ-2004ರ ಅಡಿ ಸ್ಥಾಪಿತವಾಗಿರುವ ಮದ್ರಸಾ ಮಂಡಳಿ ಪ್ರಸ್ತುತ 1ನೇ ತರಗತಿಯಿಂದ ಪದವಿವರೆಗಿನ ತರಗತಿಗಳ ಪಠ್ಯ, ಪರೀಕ್ಷೆ ಸೇರಿದಂತೆ ಎಲ್ಲಾ ವಿಷಯಗಳನ್ನು ನಿಯಂತ್ರಣ, ನಿರ್ವಹಣೆ ಮಾಡುತ್ತಿದೆ. ಕಾಯ್ದೆಗೆ ತಿದ್ದುಪಡಿ ತಂದರೆ, ಮದ್ರಸಾ ಮಂಡಳಿ 1ರಿಂದ 12ರವರೆಗಿನ ತರಗತಿಗಳನ್ನು ಮಾತ್ರ ನಿಯಂತ್ರಣ ಮಾಡಲಿದೆ.
ಕೆಲ ಇಸ್ಲಾಮಿಕ್ ಸಂಸ್ಥೆಗಳಲ್ಲಿ ‘ಮೌಲವಿ, ಫಾಝಿಲ್’ ಎಂಬ ಇಸ್ಲಾಮಿಕ್ ಬಿರುದುಗಳನ್ನು ನೀಡಲಾಗುತ್ತದೆ. ಈ ಪದವಿಗಳನ್ನೂ ಮದ್ರಸಾ ಮಂಡಳಿಯೇ ನಿಯಂತ್ರಣ ಮಾಡುತ್ತಿದೆ. ಅಂದರೆ, ಮದ್ರಸಾ ಮಂಡಳಿಗೆ ಪದವಿ ನೀಡಲು ಅಧಿಕಾರವಿದೆ. ಆದರೆ, 1956ರ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ದ ಕಾಯ್ದೆ ಪದವಿ ನೀಡುವ ಅಧಿಕಾರ ವಿಶ್ವ ವಿದ್ಯಾನಿಲಯಗಳಿಗೆ ಮಾತ್ರ ಇದೆ ಎಂದು ಹೇಳುತ್ತದೆ. ಈ ವಿಚಾರ ಸಂಘರ್ಷಕ್ಕೆ ಕಾರಣವಾಗಬಹುದು. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗಾಗಿ, ಉತ್ತರ ಪ್ರದೇಶ ಸರ್ಕಾರ ಮದ್ರಸಾ ಕಾಯ್ದೆಗೆ ತಿದ್ದುಪಡಿ ತಂದು ಪದವಿ ವಿಷಯವನ್ನು ಹೊರಗಿಡಲು ಮುಂದಾಗಿದೆ.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ 2004ರ ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿ ಕಾಯ್ದೆ (Uttar Pradesh Board of Madrasa Education Act)ಯ ಸಾಂವಿಧಾನಿಕ ಸಿಂಧುತ್ವವನ್ನು 2024ರ ನವೆಂಬರ್ 5ರಂದು ಎತ್ತಿ ಹಿಡಿದಿದೆ. ಈ ಮೂಲಕ ಕಾಯ್ದೆಯನ್ನು ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಬದಿಗೊತ್ತಿದೆ.
2024ರ ಮಾರ್ಚ್‌ನಲ್ಲಿ, ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿ ಕಾಯ್ದೆ-2004 ಅನ್ನು ರದ್ದುಗೊಳಿಸಿತ್ತು. ಈ ಕಾಯ್ದೆ ಜಾತ್ಯತೀತತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಆದರೆ, ಏಪ್ರಿಲ್‌ನಲ್ಲಿ ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವವರೆಗೆ ಹೈಕೋರ್ಟ್ ತೀರ್ಪಿಗೆ ತಡೆ ನೀಡಿತ್ತು. ಬಳಿಕ ನವೆಂಬರ್ 5ರಂದು ಅಂತಿಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದಿದೆ.
ಕಾಯ್ದೆಯ ಕುರಿತ ಮೇಲ್ಮವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ, ಕಾಯ್ದೆ ಸಾಂವಿಧಾನಿಕವಾಗಿದೆ. ಅದನ್ನು ಸಂಪೂರ್ಣವಾಗಿ ರದ್ದುಪಡಿಸಬೇಕಿಲ್ಲ. ಕೆಲವೊಂದು ಆಕ್ಷೇಪಾರ್ಹ ನಿಬಂಧನೆಗಳನ್ನು ಮಾತ್ರ ಮರು ಪರಿಶೀಲಿಸಬೇಕಿದೆ ಎಂದಿತ್ತು.
ಮದ್ರಸಾ ಕಾಯ್ದೆಯು ಮದ್ರಸಾ ಶಿಕ್ಷಣಕ್ಕೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಆರ್‌ಟಿ) ಪಠ್ಯಕ್ರಮದ ಹೊರತಾಗಿ, ಧಾರ್ಮಿಕ ಶಿಕ್ಷಣ ನೀಡಲು ಅನುವು ಮಾಡಿಕೊಡುತ್ತದೆ.
ಮದ್ರಸಾ ಕಾಯ್ದೆಯಡಿ ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡ ಮದ್ರಸಾ ಶಿಕ್ಷಣ ಮಂಡಳಿಯನ್ನು ರಚಿಸಲಾಗುತ್ತದೆ. ಈ ಮಂಡಳಿ ಮದ್ರಸಾ ಶಿಕ್ಷಣದ ಪಠ್ಯ ಪುಸ್ತಕ ಸೇರಿದಂತೆ ಕೋರ್ಸ್ ಮೆಟೀರಿಯಲ್‌ಗಳನ್ನು ಸಿದ್ದಪಡಿಸುವುದು, ‘ಮೌಲವಿ’ (10ನೇ ತರಗತಿಗೆ ಸಮಾನ) ಮತ್ತು ‘ಪಾಝಿಲ್’ (ಸ್ನಾತಕೋತ್ತರಕ್ಕೆ ಸಮಾನ) ಕೋರ್ಸ್‌ಗಳಿಗೆ ಪರೀಕ್ಷೆಗಳನ್ನು ನಡೆಸುವುದು ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ನಡೆಸುತ್ತದೆ. ಈ ಮದ್ರಸಾ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಕಾಯ್ದೆಯ ಸೆಕ್ಷನ್ 9ರಡಿ ವಿವರಿಸಲಾಗಿದೆ.
ಇದನ್ನೂ ಓದಿ : ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆ ಮೇಲೆ ಸಂಪೂರ್ಣ ನಿಷೇಧ: ಅಸ್ಸಾಂ ಸಿಎಂ ಘೋಷಣೆ


