ಉತ್ತರ ಪ್ರದೇಶದ ಅಮ್ರೋಹಾದಲ್ಲಿ 28 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಶಾಲಾ ವ್ಯಾನ್ ಮೇಲೆ ಶುಕ್ರವಾರ ಅಪರಿಚಿತ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಎಸ್ ಆರ್ ಎಸ್ ಇಂಟರ್ ನ್ಯಾಷನಲ್ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ವ್ಯಾನ್ ಮೇಲೆ ಮುಸುಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ ಘಟನೆ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಶಂಕಿತರ ವಿರುದ್ಧ ಗಜರೌಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಒಬ್ಬರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಶ್ವೇತಾಭ್ ಭಾಸ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ವ್ಯಾನ್ ಚಾಲಕನೇ ದಾಳಿಕೋರರ ಗುರಿಯಾಗಿದ್ದಾನೆ ಎಂದು ನಂಬಲಾಗಿದೆ. ಅದೃಷ್ಟವಶಾತ್ ಚಾಲಕ ಮತ್ತು ಶಾಲಾ ಮಕ್ಕಳು ಸುರಕ್ಷಿತವಾಗಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುನ್ವರ್ ಅನುಪಮ್ ಸಿಂಗ್ ಅವರು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಾಗ ಇಬ್ಬರು-ಮೂರು ವ್ಯಕ್ತಿಗಳು ಬಸ್‌ಗೆ ಹೊಂಚು ಹಾಕಿದ್ದಾರೆ ಎಂದು ಹೇಳಿದ್ದಾರೆ. ಅವರು ಮೊದಲು ಚಾಲಕನ ಕಿಟಕಿಯ ಕೆಳಗೆ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಚಾಲಕನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದರು.
ನಾಲ್ಕು ದಿನಗಳ ಹಿಂದೆ ಸ್ಕೂಟಿಯೊಂದು ಬಸ್ಸಿನ ಬದಿಗೆ ಢಿಕ್ಕಿ ಹೊಡೆದು ವ್ಯಾನ್ ಚಾಲಕ ಮತ್ತು ಸ್ಕೂಟಿ ಮಾಲೀಕರ ನಡುವೆ ಜಗಳಕ್ಕೆ ಕಾರಣವಾಗಿ ನಾಲ್ಕು ದಿನಗಳ ಹಿಂದೆ ನಡೆದ ಜಗಳದಿಂದಾಗಿ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ತನ್ನನ್ನು ಟಾರ್ಗೆಟ್ ಮಾಡಿರಬಹುದು ಎಂದು ಚಾಲಕ ಆರೋಪಿಸಿದ್ದಾರೆ.
ಚಾಲಕನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಪೊಲೀಸರು ಹಿಂದಿನ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಇದು ಗುಂಡಿನ ದಾಳಿಗೆ ಕಾರಣವಾಗಬಹುದು ಎಂದು ಸಿಂಗ್ ತಿಳಿಸಿದರು.
ಮುಸುಕುಧಾರಿಗಳು ಗುಂಡು ಹಾರಿಸುವುದನ್ನು ಮುಂದುವರೆಸಿದ್ದರಿಂದ ಭಯಭೀತರಾದ ಶಾಲಾ ಮಕ್ಕಳು ತಮ್ಮ ಸೀಟಿನ ಕೆಳಗೆ ಅಡಗಿಕೊಂಡು ಸಹಾಯಕ್ಕಾಗಿ ಕೂಗಿದರು. ವ್ಯಾನ್ ಚಾಲಕ ತಕ್ಷಣ ಕ್ರಮ ಕೈಗೊಂಡು ಶಾಲಾ ಆಡಳಿತ ಮಂಡಳಿಗೆ ತಿಳಿಸುವ ಮೊದಲು ವಾಹನವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ. ಶಾಲೆಯ ಅಧಿಕಾರಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ; ಠಾಣೆಯ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯ; ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ


