ಜಿಲ್ಲಾ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ (ಎಸ್‌ಎನ್‌ಸಿಯು) ಚಿಕಿತ್ಸೆ ಪಡೆಯುತ್ತಿದ್ದಾಗ ಅವಧಿ ಮುಗಿದ ಗ್ಲೂಕೋಸ್ ನೀಡಿದ ನಂತರ ತಮ್ಮ ಎರಡು ದಿನಗಳ ಮಗು ಸಾವನ್ನಪ್ಪಿದೆ ಎಂದು ಉತ್ತರ ಪ್ರದೇಶದ ಪಿಲಿಭಿತ್‌ನ ಕುಟುಂಬವೊಂದು ಆರೋಪಿಸಿದೆ.
ರಾಧಾ ಸಿಂಗ್ ಎಂಬ ಮಹಿಳೆ ಜನವರಿ 27 ರಂದು ಮನೆಯಲ್ಲಿ ಸಾಮಾನ್ಯ ಹೆರಿಗೆಯ ಮಗುವಿಗೆ ಜನ್ಮ ನೀಡಿದರು. ನವಜಾತ ಶಿಶುವಿಗೆ ಹಾಲುಣಿಸುವುದು ಕಷ್ಟವಾದ ನಂತರ ಆಸ್ಪತ್ರೆಗೆ ಸಾಗಿಸಲಾಯಿತು.
ವೈದ್ಯರು ಮಗುವನ್ನು ಎಸ್‌ಎನ್‌ಸಿಯು ವಾರ್ಡ್‌ಗೆ ದಾಖಲಿಸಿದರು. ಆದರೆ, ಶೀಘ್ರದಲ್ಲೇ ಅದರ ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಿದರು. ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ, ಮಗುವನ್ನು ಲಕ್ನೋಗೆ ಕಳುಹಿಸಲಾಯಿತು. ಆದರೆ, ಮಾರ್ಗಮಧ್ಯೆ ಶಿಶುವಿನ ಸ್ಥಿತಿ ಹದಗೆಟ್ಟಿ. ಆಂಬ್ಯುಲೆನ್ಸ್‌ನಲ್ಲಿ ನಿಧನವಾಗಿದೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ನವಜಾತ ಶಿಶುವಿನ ಸಾವಿಗೆ ಕಾರಣ ಎಂದು ಕುಟುಂಬ ಆರೋಪಿಸಿದೆ. ಎಸ್‌ಎನ್‌ಸಿಯು ವಾರ್ಡ್‌ನಲ್ಲಿ ಅವಧಿ ಮುಗಿದ ಗ್ಲೂಕೋಸ್ ಬಾಟಲಿಯನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ನಂತರ, ಪೊಲೀಸ್ ದೂರು ದಾಖಲಿಸಲಾಯಿತು ಮತ್ತು ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿಶುವಿನ ಚಿಕ್ಕಪ್ಪ, “ನವಜಾತ ಶಿಶುವಿಗೆ ನೀಡಲಾದ ಬಾಟಲಿಯ ಅವಧಿ ಮೇ 2024 ರಲ್ಲಿ ಮುಗಿದಿದೆ” ಎಂದು ಆರೋಪಿಸಿದರು.
ಈ ಘಟನೆಯು ಜಿಲ್ಲಾ ಆಸ್ಪತ್ರೆಯ ಹೊರಗೆ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಕುಟುಂಬ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕುಟುಂಬ ಸದಸ್ಯರು ಮಗುವಿನ ಶವವನ್ನು ಕೈಗೆ ಡ್ರಿಪ್ ಮತ್ತು ಅವಧಿ ಮೀರಿದ ಗ್ಲೂಕೋಸ್ ಬಾಟಲಿಯೊಂದಿಗೆ ತಂದು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
ಹೆಚ್ಚುತ್ತಿರುವ ಕೋಲಾಹಲದ ನಡುವೆ, ಪಿಲಿಭಿಟ್‌ನ ಮುಖ್ಯ ವೈದ್ಯಾಧಿಕಾರಿ ಅಲೋಕ್ ಕುಮಾರ್, ಪ್ರಕರಣದ ತನಿಖೆಗಾಗಿ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ದೃಢಪಡಿಸಿದರು. ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ, ಇಬ್ಬರು ಸ್ಟಾಫ್ ನರ್ಸ್‌ಗಳಾದ ಪ್ರೀತಿ ಜೈಸ್ವಾಲ್ ಮತ್ತು ಪುಷ್ಪಾ ಮಿಶ್ರಾ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ; ‘ಸಾರ್ವಜನಿಕವಾಗಿ ಯಮುನಾ ನೀರು ಕುಡಿಯಿರಿ..’; ಅಮಿತ್ ಶಾ, ರಾಹುಲ್ ಗಾಂಧಿಗೆ ಕೇಜ್ರಿವಾಲ್ ಸವಾಲು


