ದೇಶದಲ್ಲೆ ಅತೀ ಹಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು ಪ್ರಕಟಿಸಿದೆ. ‘‘ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ- 2021” ಕರಡಿನ ಪ್ರಕಾರ, ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಥವಾ ಬಡ್ತಿ ಪಡೆಯುವ ಮತ್ತು ಯಾವುದೇ ರೀತಿಯ ಸರ್ಕಾರಿ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.
ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ (ಯುಪಿಎಸ್ಎಲ್‌ಸಿ)ದ ವೆಬ್‌ಸೈಟ್, “ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗ ಜನಸಂಖ್ಯೆಯ ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಕರಡು ಮಸೂದೆಯನ್ನು ಸಿದ್ಧಪಡಿಸಿದೆ” ಎಂದು ಹೇಳಿದೆ.
ಇದನ್ನೂ ಓದಿ: ಕ್ರೀಡಾ ತರಬೇತುದಾರ ಪಿ. ನಾಗರಾಜನ್ ವಿರುದ್ಧ ಮತ್ತೆ 7 ಲೈಂಗಿಕ ದೌರ್ಜನ್ಯದ ದೂರು
ಎರಡು ಮಕ್ಕಳ ನೀತಿಯನ್ನು ಅಳವಡಿಸಿಕೊಳ್ಳುವವರಿಗೆ ಸರ್ಕಾರವು ಹಲವು ಪ್ರೋತ್ಸಾಹಕಗಳನ್ನೂ ಘೋಷಿಸಿದೆ. ನೀತಿಯನ್ನು ಅನುಸರಿಸುವ ಸರ್ಕಾರಿ ನೌಕರರು ಸಂಪೂರ್ಣ ಸೇವೆಯ ಸಮಯದಲ್ಲಿ ಎರಡು ಹೆಚ್ಚುವರಿ ಇಂಕ್ರಿಮೆಂಟ್‌ಗಳನ್ನು ಪಡೆಯಬಹುದಾಗಿದೆ. ಜಮೀನು ಅಥವಾ ಮನೆಯನ್ನು ಖರೀದಿಸಲು ಸಬ್ಸಿಡಿ ಪಡೆಯಬಹುದಾಗಿದೆ. ಶುಲ್ಕಗಳ ಮೇಲೆ ರಿಯಾಯಿತಿ ಪಡೆಯಬಹುದಾಗಿದೆ.
ಭತ್ಯೆ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೌಕರರ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಮೂರು ಶೇಕಡ ಹೆಚ್ಚಳದೊಂದಿಗೆ ಮಾತೃತ್ವ ಅಥವಾ ಪಿತೃತ್ವದ ರಜೆಯನ್ನು 12 ತಿಂಗಳು ಪಡೆಯಬಹುದಾಗಿದೆ.
ಇದನ್ನೂ ಓದಿ: ಆದಿತ್ಯನಾಥ್ ಸರ್ಕಾರದ ಕೊರೊನಾ ನಿರ್ವಹಣೆಯನ್ನು ಶ್ಲಾಘಿಸಿದ ಬಿಜೆಪಿ!
ಸರ್ಕಾರಿ ಸೇವೆಯಲ್ಲಿಲ್ಲದ ಆದರೆ ಎರಡು ಮಕ್ಕಳ ನೀತಿಯನ್ನು ಅನುಸರಿಸುವವರಿಗೆ ನೀರು ಮತ್ತು ವಿದ್ಯುತ್ ಬಿಲ್‌ಗಳು, ಮನೆ ತೆರಿಗೆ, ಗೃಹ ಸಾಲಗಳ ಮೇಲೆ ರಿಯಾಯಿತಿ ನೀಡಲು ಮಸೂದೆಯು ಪ್ರಸ್ತಾಪಿಸಿದೆ. ಮಹಿಳೆ ಹಾಗೂ ಪುರುಷರಿಬ್ಬರಿಗೂ ಸಂತಾನಹರಣ ಚಿಕಿತ್ಸೆಗೆ ಒಳಗಾಗಲು ಈ ಮಸೂದೆ ಉತ್ತೇಜಿಸುತ್ತದೆ.
ಕಾಯಿದೆಯ ಅನುಷ್ಠಾನದ ಉದ್ದೇಶಕ್ಕಾಗಿ ರಾಜ್ಯ ಜನಸಂಖ್ಯಾ ನಿಧಿಯನ್ನು ರಚಿಸಲಾಗುವುದು ಎಂದು ಸರ್ಕಾರ ಹೇಳಿದೆ. ಸರ್ಕಾರದ ಕರ್ತವ್ಯಗಳನ್ನು ಪಟ್ಟಿ ಮಾಡಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತೃತ್ವ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.
ಕರಡು ಮಸೂದೆಗೆ ಸಾರ್ವಜನಿಕರ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆಗಳನ್ನು ನೀಡಲು ಜುಲೈ 19 ಕೊನೆಯ ದಿನವಾಗಿದೆ.
ಇದನ್ನೂ ಓದಿ: ‘ಹಸಿವೆಂಬ ವೈರಸ್’ಗೆ ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ 11 ಜನರು ಬಲಿ!


