ದಲಿತ ಕುಟುಂಬದ ವಿವಾಹ ಮೆರವಣಿಗೆಗೆ ಕೆಲವು ಪ್ರಬಲ ಜಾತಿಯ ವ್ಯಕ್ತಿಗಳು ಅಡ್ಡಿಪಡಿಸಿ ಹಲ್ಲೆ ನಡೆಸಿರುವ ಘಟನೆ ಕಳೆದ ಶನಿವಾರ (ಜೂನ್ 21, 2025) ರಾತ್ರಿ ಸಂಭವಿಸಿದೆ. ಗಲಬೆ ಬಳಿಕ ಇಟಾ ಜಿಲ್ಲೆಯ ಅವಘಡ ಪೊಲೀಸ್ ಠಾಣೆ ವ್ಯಾಪ್ತಿಯ ಧಕ್ಪುರ ಗ್ರಾಮವು ಭಾನುವಾರ (ಜೂನ್ 22, 2025) ಉದ್ವಿಗ್ನವಾಗಿತ್ತು. ಪರಿಸ್ಥಿತಿ ನಿಯಂತ್ರಿಸುವಾಗ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ದಲಿತರಿಗೆ ಪ್ರಬಲ ಜಾತಿಯವರಿಂದ ಬೆದರಿಕೆ ಇದ್ದು, ಈ ವಿಚಾರದಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಉದ್ವಿಗ್ನತೆಯನ್ನು ಶಮನಗೊಳಿಸಲು ಗ್ರಾಮದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಗ್ರಾಮಕ್ಕೆ ಆಗಮಿಸಿದರು.
“ವರನು ಹತ್ರಾಸ್‌ನಿಂದ ತನ್ನ ಸಂಬಂಧೀಕರೊಡನೆ ಧಕ್ಪುರಕ್ಕೆ ಆಗಮಿಸಿದ್ದ. ವಧು ಅದೇ ಹಳ್ಳಿಯವಳಾಗಿದ್ದರಿಂದ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಸೇರಿದವಳಾಗಿದ್ದರಿಂದ, ಮದುವೆಗೆ ಗ್ರಾಮದ ಎಲ್ಲ ಸಮುದಾಯಗಳು ಆರ್ಥಿಕವಾಗಿ ಬೆಂಬಲ ನೀಡಿದ್ದವು. ಮದುವೆ ಮೆರವಣಿಗೆ ವಧುವಿನ ಮನೆ ಕಡೆಗೆ ಸಾಗುತ್ತಿದ್ದಾಗ, ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸುವಂತೆ ಸಲಹೆ ನೀಡಿದ್ದಾರೆ. ಆದರೆ, ರಜಪೂತ ಸಮುದಾಯದ ವಸತಿ ಪ್ರದೇಶ ಮುಂದೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು. ಮಾತಿನ ಚಕಮಕಿ ನಡುವೆ ಕೆಲವರು ಪೊಲೀಸರ ಮೇಲೆ ಕಲ್ಲು ಎಸೆದರು, ಇದರಲ್ಲಿ ಕಾನ್‌ಸ್ಟೆಬಲ್ ಗಾಯಗೊಂಡರು. ನಾವು ಎರಡೂ ಕಡೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ವೀಡಿಯೊ ದೃಶ್ಯಗಳ ಮೂಲಕ ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ. ಆದರೂ, ಮದುವೆ ಶಾಂತಿಯುತವಾಗಿ ನಡೆಯಿತು” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರ ಹೇಳಿಕೆ ಉಲ್ಲೇಖಿಸಿ ‘ದಿ ಹಿಂದೂ’ ವರದಿ ಮಾಡಿದೆ.
ಪ್ರಬಲ ಜಾತಿಯ ಗುಂಪಿನ ಕೆಲವು ವ್ಯಕ್ತಿಗಳು ಮದುವೆ ಮೆರವಣಿಗೆಗೆ ನಡೆಸದಂತೆ ಬಲವಂತವಾಗಿ ಪ್ರಯತ್ನಿಸಿದ್ದಾರೆ, ಅವರ ಬೀದಿಯಲ್ಲಿ ಮೆರವಣಿಗೆ ಹೋಗದಂತೆ ಬೆದರಿಕೆ ಹಾಕಿದ್ದಾರೆ ಎಂದು ದಲಿತ ಸಮುದಾಯಕ್ಕೆ ಸೇರಿದ ಜನರು ಆರೋಪಿಸಿದ್ದಾರೆ.
ನಮಗೆ ಬೆದರಿಕೆ ಹಾಕುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳಬೇಕು; ಭದ್ರತೆ ಒದಗಿಸಬೇಕೆಂದು ಸ್ಥಳೀಯ ದಲಿತರು ಒತ್ತಾಯಿಸಿದರು.


