5 ಕೆಜಿ ಗೋಧಿ ಕದ್ದಿದ್ದಾರೆ ಎಂದು ಶಂಕಿಸಿದ ಕೋಳಿ ಫಾರಂ ಮಾಲೀಕರು, ಮೂವರು ದಲಿತ ಬಾಲಕರನ್ನು ಥಳಿಸಿದ್ದಾರೆ. ಸಾಲದ್ದಕ್ಕೆ, ಸಂತ್ರಸ್ತರ ತಲೆ ಬೋಳಿಸಿ, ಅವರ ಮುಖಕ್ಕೆ ಕಪ್ಪುಬಣ್ಣ ಬಳಿದು ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರ ಮಾಹಿತಿಯನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕೋಳಿ ಫಾರಂಗೆ ಕೆಲಸಕ್ಕೆ ಹಾಜರಾಗದ ಕಾರಣ ಇಬ್ಬರೂ ಹುಡುಗರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತರ ಕುಟುಂಬಗಳು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಾನ್‌ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಟೆಡಿಯಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ವರದಿಯಾಗಿದೆ. 12-14 ವರ್ಷ ವಯೋಮಾನದ ಮೂವರು ಬಾಲಕರನ್ನು ಥಳಿಸಿ, ತಲೆ ಬೋಳಿಸಿ, ಅವರ ಮುಖಕ್ಕೆ ಕಪ್ಪುಮಸಿ ಬಳಿದು ಮೆರವಣಿಗೆ ಮಾಡಿದ್ದಾರೆ.
“ಬಾಲಕರ ಮುಂಗೈಗೆ ‘ಕಳ್ಳ’ ಎಂದು ಬರೆಸಿ, ಕೈ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ನಾನ್‌ಪಾರಾ ಎಸ್‌ಎಚ್‌ಒ ಪ್ರದೀಪ್ ಸಿಂಗ್ ಮಾತನಾಡಿ, “ಸಂತ್ರಸ್ತರ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ, ನಾಲ್ವರು ಆರೋಪಿಗಳಾದ ನಜೀಮ್ ಖಾನ್, ಖಾಸಿಮ್ ಖಾನ್, ಇನಾಯತ್ ಮತ್ತು ಸಾನು ವಿರುದ್ಧ ಬುಧವಾರ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ವಿಭಾಗಗಳಲ್ಲಿ ದೂರು ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮದ ಮಾಜಿ ಮುಖ್ಯಸ್ಥ ಸಾನು ತಲೆಮರೆಸಿಕೊಂಡಿದ್ದು, ಉಳಿದ ಮೂವರನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಗ್ರಾಮದಲ್ಲಿ ಕೋಳಿ ಫಾರಂ ನಡೆಸುತ್ತಿದ್ದ ನಾಝಿಮ್ ಮತ್ತು ಖಾಸಿಂ, 5 ಕೆಜಿ ಗೋಧಿ ಕಳ್ಳತನ ಮಾಡಿದ್ದಾರೆ ಎಂದು ಬಾಲಕರ ಮೇಲೆ ಆರೋಪ ಮಾಡಿದ್ದರು. ಇಬ್ಬರೂ ಬಾಲಕರಿಗೆ ಜಾತಿ ನಿಂದನೆ ಮಾಡಿ, ತಲೆ ಬೋಳಿಸಿದ್ದಾರೆ. ಅವರ ಮುಖಕ್ಕೆ ಕಪ್ಪುಮಸಿ ಬಳಿದು ಗ್ರಾಮದಲ್ಲಿ ಮೆರವಣಿಗೆ ಮಾಡುವ ಮುನ್ನ ವಿದ್ಯುತ್ ತಂತಿಯಿಂದ ಕತ್ತು ಹಿಸುಕಲು ಯತ್ನಿಸಿದರು. ನಮ್ಮ ಮುಂದೋಳಿನ ಮೇಲೆ ‘ಕಳ್ಳ’ ಎಂದು ಬರೆಯಲಾಗಿದೆ ಎಂದು ಸಂತ್ರಸ್ತರು ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಗಳ ಜೊತೆಗೂಡಿ ಸಾನು ಮತ್ತು ಇನಾಯತ್ ಹುಡುಗರಿಗೆ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದ್ದಾರೆ.
ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ಈ ಮಧ್ಯೆ, ಕೋಳಿ ಫಾರಂಗೆ ಕೆಲಸಕ್ಕೆ ಹಾಜರಾಗದ ಕಾರಣ ನಜೀಮ್ ಮತ್ತು ಖಾಸಿಮ್ ಮೂವರು ಬಾಲಕರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತ ಬಾಲಕರ ಕುಟುಂಬ ಸದಸ್ಯರು ಹೇಳಿದ್ದಾರೆ. ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಾಕಷ್ಟು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ; ಕೇಂದ್ರದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆ; ಸರ್ವಾನುಮತದಿಂದ ತಿರಸ್ಕರಿಸಿದ ಕೇರಳ ವಿಧಾನಸಭೆ


