ಉತ್ತರ ಕನ್ನಡದ ವನವಾಸಿ ಗೌಳಿ ಬುಡಕಟ್ಟು ಜನಾಂಗದ ಮೇಲೆ ಅರಣ್ಯ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿ ಒಕ್ಕಲೆಬ್ಬಿಸುವ ಕಾರ್ಯಾಚರಣೆ ಮಾಡುತ್ತದೆಂಬ ಆರೋಪ ಕೇಳಿಬಂದಿದೆ. ಹಳಿಯಾಳದ ಭೀಮನಳ್ಳಿ ಗ್ರಾಮದಲ್ಲಿ ಕಾನೂನು ವಿಧಿ-ವಿಧಾನ ಅನುಸರಿಸದೆ ಬಲತ್ಕಾರದಿಂದ ವನವಾಸಿಗಳ ಕೃಷಿ ಭೂಮಿ ನಾಶಪಡಿಸಿ, ಜನರ ಮೇಲೆ ದಾಳಿ ನಡೆಸಿ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪವರ್ ಕಾರ್ಪೋರೆಷನ್ ಮತ್ತು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 160 ಕ್ಕೂ ಹೆಚ್ಚು ಆರ್ಥಿಕವಾಗಿ ತೀರಾ ದುರ್ಬಲರಾದ ಗೌಳಿ ಬುಡಕಟ್ಟು ಜನಾಂಗದ ಅರಣ್ಯವಾಸಿ ಕುಟುಂಬ ಅನೇಕ ದಶಕಗಳಿಂದ ಸಾಗುವಳಿ ಮಾಡಿಕೊಂಡು ಬದುಕುತ್ತಿವೆ. ಭತ್ತ, ಕಬ್ಬು, ಗೋವಿನ ಜೋಳ ಮುಂತಾದ ಅಲ್ಪಾವಧಿ ಬೆಳೆ ಬೆಳೆಯುತ್ತಿದ್ದಾರೆ. ಸದರೀ ಜಾಗದ ಉಳುಮೆ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆಯಂತೆ ಅರ್ಜಿ ಸಹ ಸಲ್ಲಿಸಿದ್ದಾರೆ. ಅಸಮರ್ಪಕ ಜಿಪಿಎಸ್‌ನಿಂದಾಗಿ ಅರ್ಜಿ ತಿರಸ್ಕೃತಗೊಂಡಿದೆ. ಆದರೆ ಅರ್ಜಿಗಳ ಪುನರ್ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸಲು ಅಧಿಕಾರಿಗಳು ಹವಣಿಸುವುದು ಅಪರಾಧವಾಗುತ್ತದೆಂದು ರವಿ ನಾಯ್ಕ್ ಹೇಳಿದ್ದಾರೆ.
ಉತ್ತರ ಕನ್ನಡದ ವನವಾಸಿ ಗೌಳಿ ಬುಡಕಟ್ಟು ಜನಾಂಗದ ಮೇಲೆ ಅರಣ್ಯ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ಮಾಡಿ ಒಕ್ಕಲೆಬ್ಬಿಸುತ್ತಿದ್ದಾರೆ: ಆರೋಪ pic.twitter.com/ryuuJbs0Fi
— Naanu Gauri (@naanugauri) July 30, 2021
ಭೀಮನಳ್ಳಿಯಲ್ಲಿ ಅರಣ್ಯಾಧಿಕಾರಿಗಳು ಕಾನೂನನ್ನು ಕಡೆಗಣಿಸಿ ಗೌಳಿ ಕುಡುಂಬಗಳ ಮೇಲೆ ಕ್ರೂರವಾಗಿ ದೈಹಿಕ ಹಲ್ಲೆ ನಡೆಸಿ, ಬಲಪ್ರಯೋಗ ನಡೆಸಿದ್ದಾರೆ. ಪುರುಷ ಅರಣ್ಯ ಸಿಬ್ಬಂದಿಯವರು ಮಹಿಳೆಯರನ್ನು ಎಳೆದಾಡಿದ್ದಾರೆ. ಮಹಿಳೆಯರಿಗೆ ರಕ್ತ ಸುರಿಯುವಂತೆ ಅಮಾನವಿಯವಾಗಿ ಬಡಿದಿದ್ದಾರೆ. ದಾಳಿಗೆ ತತ್ತರಿಸಿದ ತರುಣನೊಬ್ಬ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಮಹಿಳಾ ಸಿಬ್ಬಂದಿಗಳು ಸಹ ಅಸಹ್ಯವಾಗಿ ಬೈದಿದ್ದಾರೆ. ಅಮಾಯಕ, ಅನಕ್ಷರಸ್ಥ ವನವಾಸಿ ಮಹಿಳೆಯರ ಮೇಲೆ ದೈಹಿಕ ದಾಳಿ ನಡೆಸಿರುವುದು ವೀಡಿಯೋದಲ್ಲಿ ದಾಖಲಾಗಿದೆ ಎಂದು ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ!

ಜಿಲ್ಲೆಯಲ್ಲಿ ಅರಣ್ಯ ಸಿಬ್ಬಂದಿ ಪದೇಪದೇ ಅರಣ್ಯವಾಸಿಗಳೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದ್ದು, ಮೊನ್ನೆ ಹಲಿಯಾಳದಲ್ಲಿ ಅರಣ್ಯಾಧಿಕಾರಿಗಳು ಮಾಡಿರುವ ದಾಳಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಜಿಲ್ಲಾಧಿಕಾರಿಗಳು ಪ್ರಕರಣವನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಲಪ್ರಯೋಗಿಸಿದ ಅಧಿಕಾರಿಗಳ ವಿರುದ್ದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ರವಿ ನಾಯ್ಕ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂದ ಅನಂತಕುಮಾರ್ ಮಗಳು, ಪಕ್ಷಕ್ಕೆ ಸ್ವಾಗತ ಎಂದ ಎಚ್‌ಡಿಕೆ


