Homeಮುಖಪುಟಕಿತ್ತೂರು ಕರ್ನಾಟಕಕ್ಕೆ ಉತ್ತರ ಕನ್ನಡ ಸೇರ್ಪಡೆ; ಜಿಲ್ಲೆಯಲ್ಲಿ ಗೊಂದಲ

ಕಿತ್ತೂರು ಕರ್ನಾಟಕಕ್ಕೆ ಉತ್ತರ ಕನ್ನಡ ಸೇರ್ಪಡೆ; ಜಿಲ್ಲೆಯಲ್ಲಿ ಗೊಂದಲ

- Advertisement -
- Advertisement -

ಕರಾವಳಿ ಮತ್ತು ಮಲೆನಾಡು ಗುಣ-ಧರ್ಮಗಳ ಉತ್ತರ ಕನ್ನಡ ಜಿಲ್ಲೆಯನ್ನು ಬಯಲು ಸೀಮೆಯ ಕಿತ್ತೂರು ಕರ್ನಾಟಕ ಭಾಗಕ್ಕೆ ಸರ್ಕಾರ ಈಚೆಗೆ ಸೇರಿಸಿರುವುದು, ಜಿಲ್ಲೆಯ ಜನರಲ್ಲಿ ಗೊಂದಲ ಮೂಡಿಸಿದೆ. ಮುಂಬೈ ಕರ್ನಾಟಕವೆಂದು ಕರೆಯಲ್ಪಡುತ್ತಿದ್ದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಕಿತ್ತೂರು ಕರ್ನಾಟಕವೆಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಿತ್ತೂರು ಕರ್ನಾಟಕದಲ್ಲಿ ಸೇರಿಸಲಾಗಿರುವ ಬಯಲು ನಾಡಿನ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಮತ್ತು ಸಮುದ್ರ, ಸಹ್ಯಾದ್ರಿ ಬೆಟ್ಟ ಸಾಲಿನ ಉತ್ತರ ಕನ್ನಡದ ಬೌಗೋಳಿಕ ಮತ್ತು ಸಾಂಸ್ಕೃತಿಕ ಗುಣ-ಲಕ್ಷಣಗಳು ವಿಭಿನ್ನವಾಗಿದ್ದು, ಸರ್ಕಾರದ ಈ ತೀರ್ಮಾನ ಅಸಮರ್ಪಕವೆಂಬ ಅನಿಸಿಕೆ ವ್ಯಕ್ತವಾಗುತ್ತಿದೆ.

ಇಷ್ಟು ದಿನವೂ ಉತ್ತರ ಕನ್ನಡ ಅವಜ್ಞೆಗೆ ಒಳಪಟ್ಟಿದೆ. ಅತ್ತ ಮುಂಬೈ ಕರ್ನಾಟಕಕ್ಕೂ ಸೇರದ ಇತ್ತ ಕರಾವಳಿ ಪ್ರದೇಶಕ್ಕೂ ಸೇರದ ಅತಂತ್ರ ಸ್ಥಿತಿ ಜಿಲ್ಲೆಯದಾಗಿತ್ತು. ಹೀಗಾಗಿ ಜಿಲ್ಲೆಯ ಅಭಿವೃದ್ದಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಯಾರನ್ನು ಕೇಳಿದರೂ ಹೇಳುತ್ತಾರೆ. ಕರಾವಳಿ ಭಾಗಕ್ಕೆ ಹೊಂದಿಕೊಂಡಿರುವ ಉತ್ತರ ಕನ್ನಡವನ್ನು ನ್ಯಾಯವಾಗಿ ಕರಾವಳಿ ಕರ್ನಾಟಕವೆಂದು ಗುರುತಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜತೆಗಿಡಬೇಕಿತ್ತು. ಆದರೆ ಇಂಥ ಸರಳ ತೀರ್ಮಾನಕ್ಕೆ ಬದಲು ಭಾಷೆ ಮುಂತಾದ ಯಾವ ಸಾಮ್ಯತೆಯೂ ಇಲ್ಲದ ಕಿತ್ತೂರು ಕರ್ನಾಟಕಕ್ಕೆ ಜೋಡಿಸಿರುವುದರಿಂದ ಜಿಲ್ಲೆ ಮತ್ತಷ್ಟು ಉದಾಸೀನ-ಉಪದ್ರವಕ್ಕೆ ಈಡಾಗುವ ಸಾದ್ಯತೆಯೇ ಹೆಚ್ಚೆಂಬ ಅಸಮಾಧಾನ ಜನಮಾನಸದಲ್ಲಿ ಮೂಡಿದೆ.

ಉತ್ತರ ಕನ್ನಡದ ಅಳಲು ಬೆಂಗಳೂರಿನ ವಿಧಾನಸೌಧಕ್ಕೆ ತಟ್ಟುವುದು ತೀರಾ ಅಪರೂಪ. ರೈತ-ಕಾರ್ಮಿಕ ಹೋರಾಟಗಾರ, ಕವಿ ದಿನಕರ ದೇಸಾಯಿ ನಂತರ ಇಚ್ಛಾಶಕ್ತಿಯ ನಾಯಕತ್ವ ಸಿಗದಿರುವುದರಿಂದಲೇ ಜಿಲ್ಲೆ ಹಿಂದುಳಿದಿದೆ ಎಂಬ ಮಾತಿದೆ. ಅಕ್ಕ-ಪಕ್ಕದ ಜಿಲ್ಲೆಗಳ ಅಭಿವೃದ್ಧಿಗೆ ಹೋಲಿಸಿದರೆ ಉತ್ತರ ಕನ್ನಡ ಶತಮಾನಗಳಷ್ಟು ಹಿಂದುಳಿದಿದೆ! ಉತ್ತರ ಕರ್ನಾಟಕ ಭಾಗಕ್ಕೆ ಘೋಷಣೆಯಾಗುವ ಅಭಿವೃದ್ಧಿ ಯೋಜನೆಗಳು ಉತ್ತರ ಕನ್ನಡ ಕರಾವಳಿಯೆಂಬ ಕಾರಣಕ್ಕೆ ದಕ್ಕುತ್ತಿಲ್ಲ; ಕರಾವಳಿ ಪ್ರದೇಶಕ್ಕೆಂದು ಬರುವ ಯೋಜನೆಗಳು ಉತ್ತರ ಕನ್ನಡ ಮುಂಬೈ ಕರ್ನಾಟಕವೆಂಬ ನೆಪದಿಂದ ನಿರಾಕರಿಸಲಾಗುತ್ತಿದೆ. ಈ ತಾರತಮ್ಯ ಪ್ರಶ್ನಿಸಿ ಜಿಲ್ಲೆಗೆ ನ್ಯಾಯ ಒದಗಿಸುವ ಗಟ್ಟಿ ಧ್ವನಿಯ ನಾಯಕರೇ ಜಿಲ್ಲೆಯಲ್ಲಿಲ್ಲವೆಂಬ ಆಕ್ರೋಶ ಜಿಲ್ಲೆಯಲ್ಲಿದೆ! ಈಗ ಕಿತ್ತೂರು ಕರ್ನಾಟಕಕ್ಕೆ ಸೇರಿದರೆ ಇನ್ನಷ್ಟು ತಾರತಮ್ಯ-ಗೊಂದಲ ಹೆಚ್ಚಾಗುತ್ತದೆಂಬ ಆತಂಕ ಜಿಲ್ಲೆಯಲ್ಲಿ ಮೂಡಿದೆ.

ಉತ್ತರ ಕನ್ನಡದ ಐದು ತಾಲೂಕುಗಳಲ್ಲಿ ಅರಬ್ಬೀ ಸಮುದ್ರಕ್ಕೆ ಸಮಾನಾಂತರವಾಗಿ ಪಶ್ಚಿಮ ಘಟ್ಟದ ಸಾಲು ಹಬ್ಬಿದೆ. ಘಟ್ಟದ ಮೇಲಿನ ಹಲವು ತಾಲೂಕುಗಳು ಮಲೆನಾಡಿನ ಸೆರಗಲ್ಲಿದೆ. ಹೀಗಾಗಿ ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿಸಿ ಸಹ್ಯಾದ್ರಿ ಕರ್ನಾಟಕವೆಂದು ನಾಮಕರಣ ಮಾಡಿದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲವೆಂಬ ಕೂಗೇಳುವ ಸಾಧ್ಯತೆಯೂ ಕಾಣಲರಂಭಿಸಿದೆ. ಕಿತ್ತೂರು ಕನಾಟಕಕ್ಕೆ ಉತ್ತರ ಕನ್ನಡ ಸೇರ್ಪಡೆಯಾಗಿರುವುದರಿಂದ ಕರಾವಳಿಯನ್ನು ಉತ್ತರ ಕರ್ನಾಟಕದ ಜತೆ ಜೋಡಿಸುವ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಮತ್ತು ಬೃಹತ್ ಬಂದರು ಮತ್ತಿತರ ಕಾಮಗಾರಿಗಳಿಗೆ ವೇಗದ ಚಾಲನೆ ಸಿಗಬಹುದೆಂಬ ವಾದವೂ ಇದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅನಾಯಕತ್ವದಿಂದ ಗೊಂದಲ ಹೆಚ್ಚಾಗುತ್ತಿದೆ.


ಇದನ್ನು ಓದಿ: ಭ್ರಷ್ಟಾಚಾರ, ಅವ್ಯವಸ್ಥೆಗಳ ಗೂಡಾಗಿರುವ ಹಂಪಿ ವಿಶ್ವವಿದ್ಯಾಲಯ: ವಿದ್ಯಾರ್ಥಿ, ಪ್ರಾಧ್ಯಾಪಕರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...