ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ರಾಜೀನಾಮೆ ಪರ್ವ ಮುಂದುವರೆಯುತ್ತಲೇ ಇದೆ. ಇಂದು ಪಶ್ಚಿಮ ಉತ್ತರ ಪ್ರದೇಶದ ಫಿರೋಜಾಬಾದ್‌ನ ಬಿಜೆಪಿ ಶಾಸಕ ಮುಖೇಶ್ ವರ್ಮಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಯುಪಿಯಲ್ಲಿ ಕಳೆದ ಮೂರು ದಿನಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನಿಡಿದ 7 ನೇ ನಾಯಕ ಮುಖೇಶ್ ವರ್ಮಾ. ಹಿಂದುಳಿದ ವರ್ಗಗಳ ಪ್ರಮುಖ ಮುಖಂಡರಾಗಿರುವ ಮುಖೇಶ್ ವರ್ಮಾ ತಮ್ಮ ರಾಜೀನಾಮೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ಮೊನ್ನೆಯಷ್ಟೆ ರಾಜೀನಾಮೆ ಸಲ್ಲಿಸಿದ್ದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಿಂದುಳಿದ ಜಾತಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಪಕ್ಷವನ್ನು ದೂಷಿಸಿರುವ ಬೇರೆ ನಾಯಕರಂತೆಯೇ ಇವರ ರಾಜೀನಾಮೆ ಪತ್ರವು ಇದೆ. ಜೊತೆಗೆ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು “ದಮನಿತರ ಧ್ವನಿ” ಮತ್ತು “ನಮ್ಮ ನಾಯಕ” ಎಂದು ಕರೆಯುವ ಮೂಲಕ ಮತ್ತೊಂದು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಸಚಿವ ಸ್ಥಾನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ
“ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಗಮನವನ್ನು ನೀಡಲಿಲ್ಲ ಮತ್ತು ಜನಪ್ರತಿನಿಧಿಗಳಿಗೆ ಅಗೌರವ ತೋರಿದ್ದಾರೆ” ಎಂದು ಮುಖೇಶ್ ವರ್ಮಾ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
“ರಾಜ್ಯ ಸರ್ಕಾರವು ದಲಿತರು, ಹಿಂದುಳಿದ ಜಾತಿಗಳು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ದಬ್ಬಾಳಿಕೆ ನಡೆಸಿದೆ. ಈ ನೀತಿಗಳಿಂದಾಗಿ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಶೋಷಿತರ ಧ್ವನಿ ಮತ್ತು ನಮ್ಮ ನಾಯಕ. ನಾನು ಅವರೊಂದಿಗೆ ಇದ್ದೇನೆ” ಎಂದಿದ್ದಾರೆ.
“ಸ್ವಾಮಿ ಪ್ರಸಾದ್ ಮೌರ್ಯ ನಮ್ಮ ನಾಯಕರು, ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಾಯಕರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ” ಎಂದು ಬಿಜೆಪಿಗೆ ಮತ್ತೊಂದು ಆಘಾತ ನೀಡಿದ್ದಾರೆ.


