ಬಿಜೆಪಿ ಉತ್ತರಾಖಂಡಕ್ಕೆ ತನ್ನ ಮುಖ್ಯಮಂತ್ರಿ ಆಯ್ಕೆಯನ್ನು ಸೋಮವಾರ ಪ್ರಕಟಿಸುವ ಸಾಧ್ಯತೆಯಿದೆ. ಬೆಳಗ್ಗೆ 11 ಗಂಟೆಗೆ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ ಪಕ್ಷದ ವೀಕ್ಷಕರಾಗಿರುವ ಒಕ್ಕೂಟ ಸರ್ಕಾರದ ಸಚಿವ ರಾಜನಾಥ್ ಸಿಂಗ್ ಮತ್ತು ಮೀನಾಕ್ಷಿ ಲೇಖಿ ಅವರು ಮುಖ್ಯಮಂತ್ರಿ ಹೆಸರು ಘೋಷಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಆದರೆ ಗೋವಾ ಮುಖ್ಯಮಂತ್ರಿಯ ಬಗ್ಗೆ ಬಿಜೆಪಿ ಇನ್ನೂ ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎನ್ನಲಾಗಿದೆ.
ನಿನ್ನೆಯಷ್ಟೆ ಗೃಹ ಸಚಿವ ಅಮಿತ್ ಶಾ ಅವರು ಉತ್ತರಾಖಂಡದ ಹಂಗಾಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಸರ್ಕಾರ ರಚನೆಯ ಕುರಿತು ಚರ್ಚಿಸಿದರು.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ತನ್ನ ಸತತ ಎರಡನೇ ಅವಧಿಯನ್ನು ಭದ್ರಪಡಿಸಿಕೊಂಡಿದೆ. ಆದಾಗ್ಯೂ, ಧಾಮಿ ಅವರು ಖತಿಮಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ವೈಫಲ್ಯಗಳ ಮೇಲಿನ ಕೋಪ; ಪಂಜಾಬ್‌ಅನ್ನು ಸುಲಭವಾಗಿ ಒಲಿಸಿಕೊಂಡ ಆಪ್
ಉತ್ತರಾಖಂಡದ ಮುಖ್ಯಮಂತ್ರಿ ಹುದ್ದೆಗೆ ಹಾಲಿ ಮುಖ್ಯಮಂತ್ರಿ ಧಾಮಿ, ಬಿಜೆಪಿಯ ಉತ್ತರಾಖಂಡದ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್, ಪಕ್ಷದ ಸಂಸದ ಅನಿಲ್ ಬಲುನಿ; ಶಾಸಕರಾದ ಧನ್ ಸಿಂಗ್ ರಾವತ್, ಸತ್ಪಾಲ್ ಮಹಾರಾಜ್ ಮತ್ತು ರಿತು ಖಂಡೂರಿ ಮತ್ತು ಪಕ್ಷದ ಸಂಸದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಆಕಾಂಕ್ಷಿಗಳಾಗಿದ್ದಾರೆ.
ಈ ಮಧ್ಯೆ, ಗೋವಾದಲ್ಲಿ ಪ್ರಮೋದ್ ಸಾವಂತ್ ಮತ್ತು ವಿಶ್ವಜಿತ್ ರಾಣೆ ನಡುವೆ ಪೈಪೋಟಿ ನಡೆಯುತ್ತಿದೆ. ಆದರೆ ಆಯ್ಕೆಯ ಬಗ್ಗೆ ಬಿಜೆಪಿ ಇನ್ನೂ ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎನ್ನಲಾಗಿದೆ. ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ಪಡೆಯಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡುವ ಮುನ್ನಾ ದಿನವಾದ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಕಳೆದ ವಾರದ ಆರಂಭದಲ್ಲಿ ಹೇಳಿತ್ತು. ಆದರೆ ಅವರ ಸಂಪುಟದ ಗಾತ್ರ ಅಥವಾ ವಿವಿಧ ಸಚಿವಾಲಯಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿಲ್ಲ.
ಇದನ್ನೂ ಓದಿ: ದೋರನಹಳ್ಳಿ ಸಿಲಿಂಡರ್ ಸ್ಪೋಟ ಪ್ರಕರಣ: ಸಂತ್ರಸ್ತರಿಗೆ ತಲಾ 5 ಲಕ್ಷ ರೂ.ಪರಿಹಾರ ವಿತರಿಸಿದ ಸಿಎಂ


