ಇತ್ತೀಚಿನ ದಿನಗಳಲ್ಲಿ ಉತ್ತರಾಖಂಡದಾದ್ಯಂತ ಕನಿಷ್ಠ 170 ಮದರಸಾಗಳನ್ನು ಮುಚ್ಚಲಾಗಿದೆ ಎಂದು ವರದಿಯಗಳಿಂದ ತಿಳಿದುಬಂದಿದೆ. ಮದರಸಾ ಮಂಡಳಿ ಅಥವಾ ಶಿಕ್ಷಣ ಇಲಾಖೆಯಲ್ಲಿ ನೋಂದಣಿ ಕೊರತೆಯೇ ಈ ಕ್ರಮಕ್ಕೆ ಕಾರಣವೆಂದು ರಾಜ್ಯ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಹಲ್ದ್ವಾನಿಯ ಮುಸ್ಲಿಂ ಬಹುಸಂಖ್ಯಾತ ಬನ್ಭುಲ್ಪುರ ಪ್ರದೇಶದಲ್ಲಿ, ಜಿಲ್ಲಾಡಳಿತ, ಪುರಸಭೆ ಮತ್ತು ಸ್ಥಳೀಯ ಪೊಲೀಸರ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಏಪ್ರಿಲ್ 13 ರ ಭಾನುವಾರ ವಿಶೇಷ ತಪಾಸಣೆ ನಡೆಸಿತು. ಕಾರ್ಯಾಚರಣೆಯ ಸಮಯದಲ್ಲಿ, ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಏಳು ಮದರಸಾಗಳನ್ನು ಸೀಲ್ ಮಾಡಲಾಗಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಸರ್ಕಾರ ನೇಮಿಸಿದ ವಿಶೇಷ ತಂಡಗಳು ನಡೆಸಿದ ವಿವರವಾದ ಸಮೀಕ್ಷೆಗಳ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಧಾಮಿ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ತೀವ್ರಗಾಮಿತ್ವದತ್ತ ಕರೆದೊಯ್ಯುವ ಸಂಸ್ಥೆಗಳನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ. ಮದರಸಾಗಳ ಮುಚ್ಚುವ ಕ್ರಮವನ್ನು ಐತಿಹಾಸಿಕ ಹೆಜ್ಜೆ” ಎಂದು ಅವರು ಬಣ್ಣಿಸಿದರು.
ಇದು ಕೇವಲ ಆರಂಭವಾಗಿರಬಹುದು ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ. ಸುಮಾರು 500 ಮದರಸಾಗಳು ಪ್ರಸ್ತುತ ಪರಿಶೀಲನೆಯಲ್ಲಿದ್ದು ಮುಚ್ಚುವ ಸಾಧ್ಯತೆಯನ್ನು ಎದುರಿಸುತ್ತಿವೆ. ಮುಚ್ಚಲಾದ ಹಲವು ಮದರಸಾಗಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದವು.
ಇದಕ್ಕೆ ಪ್ರತಿಕ್ರಿಯೆಯಾಗಿ, ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಮುಸ್ಲಿಂ ಧರ್ಮಗುರುಗಳು ಈ ಕ್ರಮವನ್ನು ನ್ಯಾಯಯುತ ಮತ್ತು ಪುರಾವೆ ಆಧಾರಿತ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯವನ್ನು ಒತ್ತಾಯಿಸಿದ್ದಾರೆ. ಪಾರದರ್ಶಕತೆ ಇಲ್ಲದೆ ವ್ಯಾಪಕ ಕ್ರಮಗಳು ಅಪನಂಬಿಕೆಯನ್ನು ಬೆಳೆಸಬಹುದು, ಈಗಾಗಲೇ ಗುರಿಯಾಗಿಸಿಕೊಂಡಿರುವ ದುರ್ಬಲ ಸಮುದಾಯಗಳನ್ನು ಮತ್ತಷ್ಟು ಅಂಚಿನಲ್ಲಿಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಛತ್ತೀಸ್‌ಗಢ| ಪ್ರಬಲ ಜಾತಿ ಬಾಲಕಿಯೊಂದಿಗೆ ಮಾತನಾಡಿದ್ದಕ್ಕೆ ದಲಿತ ಯುವಕನಿಗೆ ಚಿತ್ರಹಿಂಸೆ; ವಿವಸ್ತ್ರಗೊಳಿಸಿ ಹಲ್ಲೆ


