ಸುನ್ನೀ ಮಸೀದಿಗೆ ಸಂಬಂಧಿಸಿ ಉಂಟಾದ ಉದ್ವಿಗ್ನತೆಯಿಂದ ಉತ್ತರಾಖಂಡದ ಉತ್ತರಕಾಶಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳೀಯ ಹಿಂದುತ್ವ ಗುಂಪಿನ ‘ಮಹಾಪಂಚಾಯತ್’ಗೆ ಅನುಮತಿ ನೀಡುವುದಿಲ್ಲ ಎಂದು ಬಿಜೆಪಿ ನೇತೃತ್ವದ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಸುನ್ನೀ ಮಸೀದಿಗೆ ರಕ್ಷಣೆ ನೀಡುವಂತೆ ಕೋರಿ ‘ಅಲ್ಪಸಂಖ್ಯಾತ ಸೇವಾ ಸಮಿತಿ’ ಹೈಕೋರ್ಟ್ ಮೊರೆ ಹೋಗಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಮತ್ತು ನ್ಯಾಯಮೂರ್ತಿ ವಿವೇಕ್ ಭಾರತಿ ಶರ್ಮಾ ಅವರಿದ್ದ ಉತ್ತರಾಖಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿದೆ.
ಈ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲರು, ಕಟ್ಟು ನಿಟ್ಟಾದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ದಿನದ 24 ಗಂಟೆಯೂ ಮಸೀದಿ ಸುತ್ತಮುತ್ತ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. ಡಿಸೆಂಬರ್ 1ರಂದು ಸ್ಥಳೀಯ ಹಿಂದುತ್ವ ಗುಂಪು ನಡೆಸಲು ಉದ್ದೇಶಿಸಿರುವ ಮಹಾಪಂಚಾಯತ್‌ಗೆ ಅನುಮತಿ ನೀಡುವುದಿಲ್ಲ ಎಂದಿದೆ.
ರಾಜ್ಯ ಸರ್ಕಾರ ಮಸೀದಿ ಪರಿಸರದಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಿದೆ. ಆದರೂ, ಮಸೀದಿ ಮೇಲೆ ದಾಳಿ ನಡೆಯುವ ಆತಂಕವಿದೆ ಎಂದು ಅರ್ಜಿದಾರರ ಪರ ವಕೀಲ ಕಾರ್ತಿಕೇಯ ಹರಿ ಗುಪ್ತಾ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಉತ್ತರಕಾಶಿಯ ಭಟ್ವಾರಿ ರಸ್ತೆಯಲ್ಲಿರುವ ಸುನ್ನೀ ಮಸೀದಿಯನ್ನು ಸರ್ಕಾರಿ ಭೂಮಿಯನ್ನು ಅಧಿಕೃತವಾಗಿ ಕಟ್ಟಲಾಗಿದೆ. ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಹಿಂದುತ್ವ ಗುಂಪು ಸೆಪ್ಟೆಂಬರ್ 6ರಂದು ಉತ್ತರಕಾಶಿ ಪಟ್ಟಣದಲ್ಲಿ ಮೊದಲ ರ‍್ಯಾಲಿ ನಡೆಸಿತ್ತು. ಆ ಬಳಿಕ ಮಸೀದಿ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ನವೆಂಬರ್ 3ರಂದು ಹಿಂದುತ್ವ ಗುಂಪು ಮತ್ತೊಂದು ರ‍್ಯಾಲಿ ನಡೆಸಿದಾಗ, ಅದು ಹಿಂಸಾಚಾರಕ್ಕೆ ತಿರುಗಿದೆ. ಮಸೀದಿಯನ್ನು ಕೆಡವುತ್ತೇವೆ ಎಂದು ಹಿಂದುತ್ವವಾದಿಗಳು ಮಸೀದಿ ಬಳಿ ಬಂದಾಗ ಪೊಲೀಸರು ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಈ ವೇಳೆ ಘರ್ಷಣೆ ನಡೆದು ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ. ಬಳಿ ಶಾಂತಿ ಸುವ್ಯವಸ್ಥೆ ಕಾಪಾಡಲುವ ಸಲುವಾಗಿ ಪಟ್ಟಣದಲ್ಲಿ ಪೊಲೀಸರು ಧ್ವಜ ಮೆರವಣಿಗೆ ನಡೆಸಿದ್ದಾರೆ.
1969 ರಲ್ಲಿ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ. 1986 ರಲ್ಲಿ ವಕ್ಫ್ ಆಯುಕ್ತರು ಮಸೀದಿಯನ್ನು ಪರಿಶೀಲಿಸಿದ್ದ, ಅದರ ಕಾನೂನುಬದ್ಧತೆಯನ್ನು ದೃಢಪಡಿಸಿದ್ದಾರೆ ಎಂದು ಅಲ್ಪಸಂಖ್ಯಾತ ಸೇವಾ ಸಮಿತಿ ಪರ ವಕೀಲ ಗುಪ್ತಾ ನ್ಯಾಯಾಲಯಕ್ಕೆ ಹೇಳಿದ್ದಾರೆ. ಕಟ್ಟಡದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ಪರಿಗಣಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನ ಡಿಸೆಂಬರ್ 5ಕ್ಕೆ ಮುಂದೂಡಿದೆ.
ಇದನ್ನೂ ಓದಿ : ‘ಬುಲ್ಡೋಜರ್’ ತೀರ್ಪಿನ ಬಳಿಕ ‘ಯುಪಿ ದರೋಡೆಕೋರ’ ಕಾಯಿದೆಯನ್ನು ಪರೀಕ್ಷಿಸಲು ಸುಪ್ರೀಂ ಒಪ್ಪಿಗೆ


