Homeಕರೋನಾ ತಲ್ಲಣಲಸಿಕಾ ರಾಜಕೀಯ: ಮೇ 1 ರಿಂದ ಲಸಿಕೆ ಎಂಬುದು ನಿಜವೇ? ನಿಮಗೆ ಲಸಿಕೆ ಸಿಗಲು ಎಷ್ಟು...

ಲಸಿಕಾ ರಾಜಕೀಯ: ಮೇ 1 ರಿಂದ ಲಸಿಕೆ ಎಂಬುದು ನಿಜವೇ? ನಿಮಗೆ ಲಸಿಕೆ ಸಿಗಲು ಎಷ್ಟು ತಿಂಗಳು/ವರ್ಷ ಬೇಕು?

ಒಂದು ವರ್ಷದಲ್ಲಿ ಭಾರತವು ತನ್ನದೇ ಆದ ಜನಸಂಖ್ಯೆಗೆ ಲಸಿಕೆ ಹಾಕುವ ಉತ್ಪಾದನಾ ಸಾಮರ್ಥ್ಯ ಹೊಂದಿಲ್ಲ ಎಂದು ಗೊತ್ತಿದ್ದರೂ ಸರ್ಕಾರ ಮಾತ್ರ ಅದನ್ನು ಬಹಿರಂಗವಾಗಿ ಹೇಳಲಿಲ್ಲ.

- Advertisement -

100 ಭಾರತೀಯರ ಪೈಕಿ ಕೇವಲ 8 ಮಂದಿ ಈಗ ಮೊದಲ ಡೋಸ್ (ಕೆಲವರು ಎರಡು ಡೋಸ್) ಲಸಿಕೆ ಪಡೆದಿದ್ದಾರೆ ಅಷ್ಟೇ! ಮೂರು ತಿಂಗಳ ಲಸಿಕಾ ಅಭಿಯಾನದಲ್ಲಿ ಶೇ. 8 ಭಾರತೀಯರ ದೇಹ ತಲುಪಿದ ಲಸಿಕೆ. ಇದೇ ವೇಗದಲ್ಲಿ ಅಭಿಯಾನ ಮುಂದುವರೆದರೆ ಈ ಲಸಿಕಾ ಅಭಿಯಾನ 2023 ದಾಟಿದರೂ ಮುಗಿಯದೇನೋ?

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕಾ ಅಭಿಯಾನ ಶುರು ಆಗಲಿದೆ. ಅಷ್ಟು ಲಸಿಕೆ ನಮ್ಮಲ್ಲಿವೆಯೇ? ಕರ್ನಾಟಕದಲ್ಲಿ ಇನ್ನೂ ಉಚಿತ ಲಸಿಕೆ ನೀಡಲು ಮೀನಮೇಷ ನಡೆದಿದೆ. ಲಸಿಕೆಯ ಬಗ್ಗೆಯೇ ಅನುಮಾನ ಹೊಂದಿರುವ ಬಹುಪಾಲು ಜನರು ಮುಂದೆ ಬರುವರೇ? ಉಚಿತ ಕೊಟ್ಟರೂ ಅಷ್ಟು ಪ್ರಮಾಣದ ಲಸಿಕೆಗಳನ್ನು ಎಲ್ಲಿಂದ ತರುತ್ತಾರೆ?

ವಿವಿಧ ಮೂಲಗಳನ್ನು ಆಧರಿಸಿ ನಾನುಗೌರಿ.ಕಾಂ ಇಲ್ಲಿ ಲಸಿಕೆ ಕುರಿತ ಹಲವು ಸತ್ಯಗಳನ್ನು ಮತ್ತು ಈ ನಿಟ್ಟಿನಲ್ಲಿ ಮೋದಿ ಸರ್ಕಾರ ತೋರಿದ ಉಡಾಫೆಯನ್ನು ನಿಮ್ಮ ಮುಂದೆ ಇಡುತ್ತಿದೆ.
‘ಅವರ್ ವರ್ಲ್ಡ್ ಇನ್ ಡಾಟಾ’ ಪ್ರಕಾರ, 2021 ರ ಏಪ್ರಿಲ್ 20 ರಂದು ವಿಶ್ವದಾದ್ಯಂತ ನೀಡಲಾದ ಒಟ್ಟು ಕೊವಿಡ್ ಲಸಿಕೆ ಪ್ರಮಾಣ 928.68 ದಶಲಕ್ಷ ಡೋಸ್. ಭಾರತವು 127.13 ದಶಲಕ್ಷ (ಮಿಲಿಯನ್) ಡೋಸ್‌ಗಳನ್ನು ನೀಡಿದೆ. ಅಮೆರಿಕ 213.39 ಮಿಲಿಯನ್ ಮತ್ತು ಚೀನಾ 195.02 ಮಿಲಿಯನ್ ಡೋಸ್ ಲಸಿಕೆಗಳನ್ನು ಜನರ ದೇಹಕ್ಕೆ ತೂರಿಸಿವೆ. ಅಂದರೆ ಅಮೆರಿಕ ಜನಸಂಖ್ಯೆಯ ಸುಮಾರು ಶೇ. 40 ಜನರಿಗೆ ಲಸಿಕೆ ದೊರೆತಾಗಿದೆ. ಭಾರತೀಯ ಜನಸಂಖ್ಯೆಯ ಕೇವಲ ಶೇ.8 ಜನ ಮಾತ್ರ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಸರ್ಕಾರ ಶೇಕಡಾವಾರು ಲೆಕ್ಕ ಹೇಳದೇ 127.13 ದಶಲಕ್ಷ ಜನರಿಗೆ ಲಸಿಕೆ ನೀಡಿದ್ದೇವೆ ಎಂದು absolute number ಹೇಳುವ ಮೂಲಕ ಬೀಗುತ್ತಿದೆ! (ಸಾಂಕ್ರಾಮಿಕ ಶುರುವಾದಾಗಲಿಂದಲೂ, ಅನುಕೂಲಕರ ಅಂಕಿಅಂಶ ಪದ್ಧತಿಯನ್ನು-ಒಂದು ಆಯಾಮ ಹೇಳುವಾಗ ಶೇಕಡಾವಾರು, ಇನ್ನೊಂದು ಆಯಾಮ ಹೇಳುವಾಗ absolute number ಪದ್ಧತಿ- ಬಳಸುತ್ತ ಜನರನ್ನು ಸರ್ಕಾರ ದಾರಿ ತಪ್ಪಿಸುತ್ತ ಬಂದ ಬಗೆಯನ್ನು ಇತ್ತೀಚೆಗೆ ನಾನುಗೌರಿ.ಕಾಂ ದಿ ಪ್ರಿಂಟ್ ವಿಶ್ಲೇಷಣೆ ಆಧರಿಸಿ ಬರೆದಿತ್ತು)

ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಏಪ್ರಿಲ್ 22 ರವರೆಗೆ ಭಾರತವು 94 ದೇಶಗಳಿಗೆ 66 ಮಿಲಿಯನ್ ಲಸಿಕೆ ಡೋಸ್‌ಗಳನ್ನು ರಫ್ತು ಮಾಡಿದೆ. ಇದರಲ್ಲಿ ಕೇವಲ 10.61 ಮಿಲಿಯನ್ ಮಾತ್ರ ಅನುದಾನದ ರೂಪದ್ದು. ಉಳಿದ ಭಾಗವನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ರಫ್ತು ಮಾಡಿತ್ತು, ಇದರಲ್ಲಿ ಭಾಗಶಃ ಕೋವಾಕ್ಸ್ (ಕೊವಿಡ್ ಲಸಿಕೆಗಳಿಗೆ ಸಂಬಂಧಿಸಿದ ವೇದಿಕೆ) ಮೈತ್ರಿಯೊಂದಿಗಿನ ಒಪ್ಪಂದವನ್ನು ಪೂರೈಸಲು ಮತ್ತು ಭಾಗಶಃ ವಿದೇಶಗಳಿಗೆ ನೇರ ಮಾರಾಟವಾಗಿದೆ.

ಕೋವಿಡ್ ಲಸಿಕೆಗಳ ಜಾಗತಿಕ ಪ್ರಮಾಣಕ್ಕೆ ಭಾರತದ ಕೊಡುಗೆ 193 ಮಿಲಿಯನ್. 929 ಮಿಲಿಯನ್ ಡೋಸ್‌ಗಳಲ್ಲಿ ಇದು ಶೇ.21 ಆಗಿದೆ. ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ನಂಬಿರುವ ನಂಬಿಕೆಗೆ-‘ಬಡ ದೇಶಗಳಿಗೆ ಭಾರತವು ಕೋವಿಡ್ ಲಸಿಕೆಗಳ ಭದ್ರಕೋಟೆಯಾಗಿದೆ’ ಎಂಬ ನಂಬಿಕೆ!- ಇದು ತದ್ವಿರುದ್ಧವಾಗಿದೆ.. ಈ ನಂಬಿಕೆಯ ಅಂಕಿಅಂಶಗಳ ಆಧಾರವು ವಿಶ್ವದ ಲಸಿಕೆಗಳ ಉತ್ಪಾದನೆಯಲ್ಲಿ ಭಾರತ ಶೇ. 60ರಷ್ಟು ಕೊಡುಗೆ ನೀಡುತ್ತದೆ ಎಂಬ ಪುನರಾವರ್ತಿತ ಅಸತ್ಯದ ಹೇಳಿಕೆಯಾಗಿದೆ.

ಇದು ಭಾರತದ ಸಾಮರ್ಥ್ಯದ ಅಂದಾಜುನ್ನು ಓವರ್ ಎಸ್ಟಿಮೇಟ್ ಮಾಡಿದ್ದಕ್ಕೆ ನಿದರ್ಶನವಾಗಿದೆ. ಇಂಟರ್ನ್ಯಾಷನಲ್ ಮಾರ್ಕೆಟ್ ಅನಾಲಿಸಿಸ್ ರಿಸರ್ಚ್ ಅಂಡ್ ಕನ್ಸಲ್ಟಿಂಗ್ ಗ್ರೂಪ್‌ನ 2019 ರ ವರದಿಯು ಭಾರತವು “ಯುನಿಸೆಫ್‌ಗೆ ಸರಬರಾಜು ಮಾಡಿದ ಒಟ್ಟು ಲಸಿಕೆಗಳಲ್ಲಿ ಸುಮಾರು 60% ರಷ್ಟಿದೆ” ಎಂದು ಹೇಳಿದೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಯುನಿಸೆಫ್ ಹೆಚ್ಚಾಗಿ ಮಕ್ಕಳ ವ್ಯಾಕ್ಸಿನೇಷನ್ ಡಿಟಿಪಿ, ಎಂಎಂಆರ್, ಪೋಲಿಯೊ ಇತ್ಯಾದಿಗಳನ್ನು ಪೂರೈಸುತ್ತದೆ. ಇದರ ಅವಶ್ಯಕತೆಯು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳ ಮತ್ತು ವಯಸ್ಕರ ವ್ಯಾಕ್ಸಿನೇಷನ್‌ಗಳನ್ನು ಒಳಗೊಂಡಿಲ್ಲ.
ಅದೇನೇ ಇದ್ದರೂ, ಇದು ಇನ್ನೂ ಗಮನಾರ್ಹ ಕೊಡುಗೆ ಮತ್ತು ಭಾರತೀಯ ಲಸಿಕೆ ತಯಾರಕರ ಶ್ಲಾಘನೀಯ ಸಾಧನೆಯಾಗಿದೆ. ಆದರೆ ಈ ಹೆಚ್ಚಿನ ಸಾಮರ್ಥ್ಯವನ್ನು ಕೋವಿಡ್ ಸಾಂಕ್ರಾಮಿಕಕ್ಕೆ ಲಸಿಕೆಗಳನ್ನು ತಯಾರಿಸಲು ಸುಲಭವಾಗಿ ಪರಿವರ್ತಿಸಲಾಗುವುದಿಲ್ಲ.

ಪ್ರಸ್ತುತ ಲಸಿಕೆ ಉತ್ಪಾದನಾ ಕಾರ್ಯತಂತ್ರವು, ಮುಖ್ಯವಾಗಿ ತಯಾರಕರು ತಮ್ಮ ಕಾಲೋಚಿತ ಇನ್‌ಫ್ಲೂಯೆಂಜಾ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ತ್ವರಿತವಾಗಿ ಕೋವಿಡ್ ಶಾಟ್‌ಗಳ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನಾಗಿ ಪರಿವರ್ತಿಸಬಲ್ಲರೇ ಎಂಬುದರ ಮೇಲೆ ನಿಂತಿದೆ. ಫ್ಲೂ ಶಾಟ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಾಲೋಚಿತ ಇನ್‌ಫ್ಲೂಯೆಂಜಾ ಲಸಿಕೆಗಳು ಸಾಮಾನ್ಯವಾಗಿ ಟೆಟ್ರಾವಲೆಂಟ್ ಲಸಿಕೆಗಳಾಗಿವೆ, ಆದರೆ ಸಾಂಕ್ರಾಮಿಕ ಲಸಿಕೆಗಳು ಮೊನೊವಾಲೆಂಟ್ ಎಂದು ನಿರೀಕ್ಷಿಸಲಾಗಿದೆ. ಈ ವ್ಯತ್ಯಾಸವು ಫ್ಲೂ ಶಾಟ್‌ಗಳಂತೆ ತಯಾರಕರು ಮೂರು ಅಥವಾ ನಾಲ್ಕು ಪಟ್ಟು ಕೋವಿಡ್ ಲಸಿಕೆಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ.

ಆದರೆ ಇನ್‌ಫ್ಲೂಯೆಂಜಾ ಲಸಿಕೆಗಳನ್ನು ತಯಾರಿಸಲು ಭಾರತವು ಕಡಿಮೆ ಸಾಮರ್ಥ್ಯವನ್ನು ಹೊಂದಿದೆ, ಏಕೆಂದರೆ ಫ್ಲೂ ಶಾಟ್‌ಗಳ ಮಾರುಕಟ್ಟೆ ಹೆಚ್ಚಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸೀಮಿತವಾಗಿದೆ.

ಸಾಂಕ್ರಾಮಿಕ ರೋಗ ದಾಳಿ ಮಾಡಿದರೆ ಜಗತ್ತು ಅದಕ್ಕೆ ಅಗತ್ಯವಾದ ಲಸಿಕಾ ಉತ್ಪದನಾ ಸಾಮರ್ಥ್ಯ ಹೊಂದಿಲ್ಲ ಎಂದು 2005 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅರಿತುಕೊಂಡಿದೆ.
ವಾಸ್ತವವಾಗಿ, ಆ ಸಮಯದಲ್ಲಿ ಎಸ್‌ಐಐ (ಸೀರಂ) ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿದ್ದು, ಜಿಎಪಿ ಉಪಕ್ರಮದಡಿಯಲ್ಲಿ ಡಬ್ಲ್ಯುಎಚ್‌ಒ ಜೊತೆ ಅನುದಾನ ಮತ್ತು ತಾಂತ್ರಿಕ ಸಹಯೋಗದಿಂದ ಲಾಭ ಪಡೆಯಿತು. ಇದು 2010 ರ ಹೊತ್ತಿಗೆ ಇನ್‌ಫ್ಲೂಯೆಂಜಾ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿತು ಮತ್ತು ಈಗ ಭಾರತದ ಕೋವಿಡ್ ಲಸಿಕೆ ಉತ್ಪಾದನೆಯ ಆಧಾರಸ್ತಂಭವಾಗಿದೆ.

ಎಸ್‌ಐಐ ತಯಾರಿಸಿದ ಕೋವಿಶೀಲ್ಡ್ (ತಿಂಗಳಿಗೆ 60 ಮಿಲಿಯನ್ ಡೋಸ್) ಮತ್ತು ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್ (ತಿಂಗಳಿಗೆ 5 ಮಿಲಿಯನ್ ಡೋಸ್) ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದ್ದಕ್ಕೆ ಸಾಕ್ಷಿ. ಹೀಗಾಗಿ ಈ ವಿಶ್ಲೇಷಣೆಯು ಕೋವಿಡ್ ವಿಷಯದಲ್ಲಿ,ಜಾಗತಿಕ ಉತ್ಪಾದನೆಗೆ ಭಾರತದ ಕೊಡುಗೆ ಕೇವಲ 21% ಮಾತ್ರ, 60% ಅಲ್ಲ ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತದೆ.

ಪ್ರತಿ ಲಸಿಕೆ ತಯಾರಿಕೆಯು ಬಹಳ ಸಂಕೀರ್ಣ ಮತ್ತು ತಾಂತ್ರಿಕ ಪ್ರಕ್ರಿಯೆ ಹೌದು. ಆದರೆ ಅದು ಅರ್ಥವಾಗದ್ದು ಏನಲ್ಲ. ದೇಶದ ನಿಜವಾದ ಲಸಿಕೆ ತಯಾರಿಕೆಯ ಸಾಮರ್ಥ್ಯವನ್ನು ಕೇಂದ್ರ ಸರ್ಕಾರವು ಜನರ ಮುಂದೆ ಇಡಬೇಕಿತ್ತು. ಆದರೆ ಅದು ಹಾಗೇ ಮಾಡದೇ, ಮಾಧ್ಯನಗಳ ನೆರವಿನಿಂದ ಒಣ ಗರ್ವವನ್ನೇ ಸತ್ಯ ಎಂಬಂತೆ ಬಿಂಬಿಸಿತು. ಸತ್ಯ ಹೇಳುವ ರಿಸ್ಕ್ ತೆಗೆದುಕೊಳ್ಳುವುದು ಕೂಡ ಪರಿಹಾರದ ಹಾದಿಯನ್ನು ಸುಲಭಗೊಳಿಸುತ್ತದೆ ಎಂಬುದನ್ನು ಈ ಸರ್ಕಾರ ಎಂದೂ ಒಪ್ಪಿಕೊಳ್ಳಲೇ ಇಲ್ಲ. ಅದರ ಅಂಧ ಭಕ್ತರು ಕೂಡ ಸರ್ಕಾರ- ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯೊಬ್ಬನ ಕುರುಡು ಆರಾಧನೆಯಲ್ಲಿ ಸುಳ್ಳುಗಳನ್ನು ಹರಡುತ್ತ ಬಂದರು.

ವಿವರವಾದ ಬೇಡಿಕೆ-ಪೂರೈಕೆ ಯೋಜನೆ ಬಗ್ಗೆ ತಜ್ಞರು, ವೈದ್ಯರು, ವಿಜ್ಞಾನಿಗಳು ಮತ್ತು ಅಷ್ಟೇ ಮುಖ್ಯವಾಗಿ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ಮಾಡಬೇಕಿತ್ತಲ್ಲವೇ? ತಾನೇ ತಜ್ಞ ಎಂಬಂತೆ ಸುತ್ತಲಿರುವ ‘ಹೂಂ ಸರ್ಕಾರ್’ ಎಂಬ ಹೊಗಳುವ ಐಎಎಸ್‌ಗಳ ಮಾತಿಗೆ ಖುಷಿಗೊಳ್ಳುತ್ತಾ, ತಪ್ಪುಗಳನ್ನು ಎತ್ತಿ ತೋರಿಸಿದವರ ಮೇಲೆ ಅಪಹಾಸ್ಯ ಮಾಡುತ್ತ, ಅದನ್ನು ಗೋಧಿ ಮಾಧ್ಯಮಗಳು ಮತ್ತು ಕೋಟ್ಯಂತರ ಅನುಯಾಯಿಗಳ ಮೂಲಕ ಪ್ರಚಾರ ಮಾಡುತ್ತ ಬಂದ ವ್ಯಕ್ತಿಯೊಬ್ಬ ಇವತ್ತು ಇಡೀ ದೇಶ ಉಸಿರುಗಟ್ಟುವಂತೆ ಮಾಡಿದ್ದಾರೆ. ಯಾವುದೇ ಪೂರೈಕೆ ಸರಪಳಿಯನ್ನು ನಿರ್ವಹಿಸುವುದು ಎಲ್ಲಾ ಸಿದ್ಧಾಂತಗಳಲ್ಲಿ ಅತ್ಯಂತ ಮೂಲಭೂತವಾದದ್ದು ಎಂಬ ಪರಿಜ್ಞಾನ ಈ ಸರ್ಕಾರಕ್ಕೆ ಇಲ್ಲ ಎಂಬುದಕ್ಕೆ ದೆಹಲಿ ಹೈಕೋರ್ಟ್ ಈ ವಾರ ತರಾಟೆಗೆ ತೆಗೆದುಕೊಂಡಿದ್ದೆ ಸಾಕ್ಷಿಯಾಗಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ಒಂದು ವರ್ಷದಲ್ಲಿ ಭಾರತವು ತನ್ನದೇ ಆದ ಜನಸಂಖ್ಯೆಗೆ ಲಸಿಕೆ ಹಾಕುವ ಉತ್ಪಾದನಾ ಸಾಮರ್ಥ್ಯ ಹೊಂದಿಲ್ಲ ಎಂದು ಗೊತ್ತಿದ್ದರೂ ಸರ್ಕಾರ ಮಾತ್ರ ಅದನ್ನು ಬಹಿರಂಗವಾಗಿ ಹೇಳಲಿಲ್ಲ.

ಲಸಿಕೆಯ ಮಹತ್ವವನ್ನು ಸರ್ಕಾರ ಅರಿತುಕೊಂಡಿಲ್ಲ ಎಂಬಂತೆ ಅಲ್ಲ. ಇದು 2021 ರ ಜನವರಿ ಮೊದಲ ವಾರದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್‌ಗೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಪ್ರತಿ ಹಂತದಲ್ಲೂ, ಇದು ಈ ಎರಡು ಲಸಿಕೆಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹೆಮ್ಮೆಯ ಭಾವವನ್ನು ವ್ಯಕ್ತಪಡಿಸಿತು.

ಈ ತಯಾರಕರು ಮಾತ್ರ ಭಾರತದ ಲಸಿಕೆ ಅಗತ್ಯಗಳನ್ನು ಪೂರೈಸಬಲ್ಲರು ಎಂಬ ಆಧಾರರಹಿತ ಮತ್ತು ದೃಢವಾದ ನಂಬಿಕೆಯು ಕೇಂದ್ರ ಸರ್ಕಾರ ಈ ನಿರ್ಣಯಕ್ಕೆ ಬರಲು ಕಾರಣವಾಗಿತೇನೋ? ಅಥವಾ ಜನರನ್ನು ಮರುಳುಗೊಳಿಸಲು ಇದನ್ನು ಅವಕಾಶ ಮಾಡಿಕೊಂಡಿತೇನೋ?

ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮಾಜಿ ಮುಖ್ಯಸ್ಥ ಡಾ.ಲಲಿತ್ ಕಾಂತ್ ಕೂಡ ಹೇಳುತ್ತಾರೆ. ಈ ನಂಬಿಕೆಯು ಕೇಂದ್ರವು ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತು, ಆದರೂ ಈ ರಫ್ತುಗಳಲ್ಲಿ ಹೆಚ್ಚಿನವು ಅಸ್ಟ್ರಾಜೆನೆಕಾಗೆ ಎಸ್‌ಐಐನ (ಸೀರಂ) ಬದ್ಧತೆಯಿಂದ ಕಡ್ಡಾಯವಾಗಿತ್ತು. ಅದು ಬೇರೆ ಮಾತು ಎಂದು ನಾವು ಕೈ ತೊಳೆದುಕೊಂಡರೆ ಹೇಗೆ? ಇಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ರೇಟು, ರಾಜ್ಯ ಸರ್ಕಾರಕ್ಕೆ ಒಂದು ರೇಟು ವಿಧಿಸುವ ಈ ಕಂಪನಿಗಳಿಗೆ ಲಸಿಕೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಷರತ್ತು ರಹಿತವಾಗಿ ಸಾವಿರಾರು ಸಹಾಯ ನೀಡಿದೆ ಎಂಬುದನ್ನು ಮರೆಯದಿರೋಣ.

ದೇಶದೊಳಗಿನ ಲಸಿಕೆ ಕೊರತೆಯ ಬಗ್ಗೆ ಗದ್ದಲ ಉಂಟಾದ ನಂತರ ಮಾರ್ಚ್ ಕೊನೆಯ ವಾರದಲ್ಲಿ ಮಾತ್ರ ಸರ್ಕಾರವು ಔಪಚಾರಿಕವಾಗಿ ಲಸಿಕೆ ರಫ್ತನ್ನು ನಿಷೇಧಿಸಿತು.
ಭಾರತ ಸರ್ಕಾರವು ವಿದೇಶಿ ತಯಾರಕರನ್ನು ಸರಿಯಾಗಿ ಸ್ವಾಗತಿಸಲೇ ಇಲ್ಲ. ನವೆಂಬರ್ 2020 ರಲ್ಲಿ, ಆರೋಗ್ಯ ಸಚಿವ ಹರ್ಷವರ್ಧನ್ ಅವರು ಭಾರತದಲ್ಲಿ ಲಸಿಕೆಗಳನ್ನು ತಯಾರಿಸುವ ಫಿಜರ್ ಸಾಮರ್ಥ್ಯವನ್ನು ಬಹಿರಂಗವಾಗಿ ಅನುಮಾನಿಸಿದರು ಮತ್ತು “ಭಾರತಕ್ಕೆ ಅದರ ಅಗತ್ಯವಿಲ್ಲ” ಎಂದು ಹೇಳಿದರು. ಈ ಅಂಶಗಳು, ಬೆಲೆಯ ಮೇಲಿನ ಕಾಳಜಿ ಮತ್ತು ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಹೊಣೆಗಾರಿಕೆಯ ಷರತ್ತುಗಳಿಗೆ ಸಂಬಂಧಿಸಿದೆ. ಫಿಜರ್ ಭಾರತದಲ್ಲಿ ಉತ್ಪಾದನೆಗೆ ಸಲ್ಲಿಸಿದ ಕೆಲವೇ ವಾರಗಳ ನಂತರ, ಜನವರಿ 2021ರಲ್ಲಿ ಹಿಂಪಡೆಯಿತು. ರಾಹುಲ್ ಗಾಂಧಿ ಮತ್ತು ಕೆಲವು ಸ್ವತಂತ್ರ ತಜ್ಞರ ಅಭಿಪ್ರಾಯಕ್ಕೆ ಮಣಿದ ಕೇಂದ್ರ ಸರ್ಕಾರ ಕಳೆದ ಹತ್ತು ದಿನದ ಹಿಂದೆ ವಿದೇಶಿ ಲಸಿಕೆಗಳ ಅನುಮತಿಗೆ ನಿಯಮ ಸಡಿಲು ಮಾಡಿತು. ಆದರೆ, ಹಿಂದೆ ಈ ಸರ್ಕಾರದ ಒಣ ಸೊಕ್ಕಿನಿಂದ ಅವಮಾನ ಅನುಭವಿಸಿದ ಅವು ಈಗ ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿವೆ. (‘ಮೋದಿ ಸರ್ಕಾರಕ್ಕೆ ಬೇಕಿದೆ ಅಧಿಕ ಲಸಿಕೆ: ಮಾಡೆರ್ನಾಗೆ ಆಸಕ್ತಿ ಇಲ್ಲ, ಫಿಜರ್ ಷರತ್ತು ವಿಧಿಸುತ್ತಿದೆ’)

ವಿದೇಶಿ ತಯಾರಕರ ಮಾತು ಬಿಡಿ, ಸರ್ಕಾರ ತನ್ನ ಸ್ಥಳೀಯ ತಯಾರಕರೊಂದಿಗೆ ಪೀಡಕನಂತೆ ವರ್ತಿಸಿದೆ. ಕೋವಿಡ್ ಲಸಿಕೆಗಳಿಗೆ ಕನಿಷ್ಠ ಕಾರ್ಯಸಾಧ್ಯವಾದ ಬೆಲೆ ಎಂದು ಕೋವ್ಯಾಕ್ಸ್ ವೇದಿಕೆ ನಿರ್ಧರಿಸಿದ 3 ಡಾಲರ್‌ಗೆ ಒಂದು ಡೋಸ್ ಎಂಬ ನಿಯಮಕ್ಕಿಂತ ಕಡಿಮೆ ಬೆಲೆಗೆ ಕೇಂದ್ರ ಸರ್ಕಾರ ರೇಟು ಫಿಕ್ಸ್ ಮಾಡಿತು. ಎಸ್‌ಐಐಗೆ ಪ್ರತಿ ಡೋಸ್‌ಗೆ 150 ರೂ ಮತ್ತು ಭಾರತ್ ಬಯೋಟೆಕ್‌ಗೆ 200 ರೂ. ಮಾತ್ರ ಮಂಜೂರು ಮಾಡಿತು. ಲಸಿಕೆ ಅಭಿಯಾನವನ್ನು ಪ್ರಾರಂಭಿಸುವ ಐದು ದಿನಗಳ ಮೊದಲು ಜನವರಿ 16 ರಂದು ಅವರಿಗೆ ಸಣ್ಣ ಪ್ರಮಾಣದಲ್ಲಿ ಆದೇಶಗಳನ್ನು ಬಿಡುಗಡೆ ಮಾಡಿತು.

ಈಗ ಏನಾಗಿದೆ? ಲಸಿಕೆಗಳನ್ನು ರಾಜ್ಯ ಸರ್ಕಾರಗಳು ನೇರವಾಗಿ ಖರೀದಿಸಬಹುದು ಎಂದು ಮೊನ್ನೆ ಮಂಗಳವಾರ ಸಂಜೆ ಘೋಷಿಸಿದ ಕೇಂದ್ರ ಸರ್ಕಾರ, ಮರುದಿನ ಲಸಿಕೆ ರೇಟುಗಳನ್ನು ತಾನೇ ಫಿಕ್ಸ್ ಮಾಡಿದೆ. ಕೇಂದ್ರಕ್ಕೆ 150 ರೂ,ಗೆ ಒಂದು ಡೋಸ್, ರಾಜ್ಯಗಳಿಗೆ 400 ರೂ.ಗೆ ಒಂದು ಡೋಸ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ ದರ ಫಿಕ್ಸ್ ಮಾಡಿದೆ! ಒಂದು ಲಸಿಕೆ, ಮೂರು ವಿಭಿನ್ನ ದರಗಳು! ಮೇ 1ಕ್ಕೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸೌಲಭ್ಯ ಎಂದು ಈಗ ಒಪ್ಪಿಕೊಂಡ ಕೇಂದ್ರ ಸರ್ಕಾರ ಅಷ್ಟು ಲಸಿಕೆಗಳನ್ನು ಪೂರೈಸಲು ಸಮರ್ಥವಾಗಿದೆಯೇ? ಜನರಲ್ಲಿ ಲಸಿಕೆಗಳ ಬಗ್ಗೆ ಅನುಮಾನ ಇರುವ ಕಾರಣಕ್ಕೆ ತಾವಾಗಿಯೇ ಸ್ವಿಚ್ಚೇಯಿಂದ ಲಸಿಕೆ ಹಾಕಿಸಿ ಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಇದೇ ಸರ್ಕಾರಕ್ಕೆ ವರದಾನವಾಗಿದೆಯೇ? ಲಸಿಕೆಗಾಗಿ ಮೇ 1ರಿಂದ ಯುವಕರು ಕ್ಯೂ ನಿಂತರೆ ಲಸಿಕಾ ಕೇಂದ್ರಗಳಲ್ಲಿ ಗಲಾಟೆ ಗ್ಯಾರಂಟಿ.

ಕೇರಳ, ಛತ್ತೀಸಘಡ, ಮಧ್ಯಪ್ರದೇಶ, ಪಂಜಾಬ್ ಮತ್ತು ಇನ್ನೊಂದೆರಡು ರಾಜ್ಯಗಳು ಲಸಿಕೆ ಉಚಿತ ಎಂದು ಘೋಷಿಸಿದ ನಂತರವೂ ಕರ್ನಾಟಕ ಸರ್ಕಾರ ಮಾತ್ರ ಸುಮ್ಮನೆ ಕುಳಿತಿದೆ!

ಮೂರು ತಿಂಗಳ ಹಿಂದೆ ಡಾ. ರೆಡ್ಡಿ ಲ್ಯಾಬ್ಸ್ ಪ್ರಾರಂಭಿಸಿದ ಬ್ರಿಡ್ಜಿಂಗ್ ವಿಚಾರಣೆಯ ಫಲಿತಾಂಶಗಳಿಗಾಗಿ ಕಾಯದೆ, ಏಪ್ರಿಲ್ 13 ರಂದು ರಷ್ಯಾದ ಸ್ಪುಟ್ನಿಕ್ ವಿ ಎಂಬ ಮೂರನೇ ಲಸಿಕೆಯನ್ನು ಸರ್ಕಾರ ಅನುಮೋದಿಸಿತು. ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಅಢಿಯಲ್ಲಿ ಆರು ಭಾರತೀಯ ಕಂಪನಿಗಳೊಂದಿಗೆ ಸ್ಪುಟ್ನಿಕ್ ವಿ ತಯಾರಿಸಲು ಒಪ್ಪಂದಗಳಿಗೆ ಸಹಿ ಹಾಕಿದೆ ಮತ್ತು ವಿಶ್ವದಾದ್ಯಂತ ವಿತರಣೆಗಾಗಿ ಭಾರತದಲ್ಲಿ ಸುಮಾರು 850 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಈ ಉತ್ಪಾದನೆಯು ಭಾರತಕ್ಕೆ ಯಾವಾಗ ಮತ್ತು ಎಷ್ಟು ಲಭ್ಯವಾಗಲಿದೆ ಎಂದು ಇನ್ನೂ ಅಂದಾಜಿಸಲಾಗಿಲ್ಲ.

ಏಪ್ರಿಲ್ 12 ರಂದು, ಯುಎಸ್, ಯುಕೆ ಅಥವಾ ಜಪಾನ್‌ನಲ್ಲಿನ ನಿಯಂತ್ರಕ ಅಧಿಕಾರಿಗಳು ತುರ್ತು ಬಳಕೆಗಾಗಿ ಲಸಿಕೆಗಳನ್ನು ಈಗಾಗಲೇ ಅನುಮೋದಿಸಿದ್ದರೆ ಅಥವಾ ಡಬ್ಲ್ಯುಎಚ್‌ಒನಿಂದ ಪೂರ್ವಭಾವಿ ಅರ್ಹತೆ ಪಡೆದಿದ್ದರೆ ಅಂತಹ ಲಸಿಕೆಗಳಿಗೆ ಅನುಮೋದನೆ ನೀಡಲು ಈ ಸರ್ಕಾರ ಕೊನೆಗೂ ಒಪ್ಪಿಕೊಂಡಿತು. ಆದರೆ ಈ ಕುರಿತು ಯಾವುದೇ ಸಮರ್ಪಕ ಫಾಲೋ-ಅಪ್ ಕೆಲಸ ಆಗುತ್ತಿಲ್ಲ!

ಇದೆಲ್ಲವೂ ಲಸಿಕೆಗಳಲ್ಲಿ ಭಾರತ ಆತ್ಮನಿರ್ಭರ್ (ಸ್ವಾವಲಂಬಿ) ಅಲ್ಲ ಎಂಬುದಕ್ಕೆ ಸಾಕ್ಷಿಯಾಗಿವೆ. ಸರ್ಕಾರ ಸುಮ್ಮನೇ ಬಡಾಯಿ ಕೊಚ್ಚಿಕೊಳ್ಳುತ್ತಿದೆ.

ಏಪ್ರಿಲ್ 19 ರಂದು ಎಸ್‌ಐಐಗೆ (ಸೀರಂ) 3,000 ಕೋಟಿ ರೂ. ಮತ್ತು ಭಾರತ್ ಬಯೋಟೆಕ್ ಗೆ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು 1,500 ಕೋಟಿ ರೂ.ಗಳನ್ನು ನೀಡಲು ಸರ್ಕಾರ ಒಪ್ಪಿಕೊಂಡಿತು. ಇದು ಹಣಕ್ಕಾಗಿ ಎಸ್‌ಐಐ (ಸೀರಂ) ಸಲ್ಲಿಸಿದ್ದ ದೀರ್ಘಕಾಲದ ಮನವಿಯನ್ನು ಪೂರೈಸಿತು. ಅದೇ ದಿನ, ಕೇಂದ್ರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1 ರಿಂದ ಲಸಿಕೆ ನೀಡಲು ಅನುವು ಮಾಡಿಕೊಡುವ “ಉದಾರೀಕೃತ ಮತ್ತು ವೇಗವರ್ಧಿತ 3ನೇಹಂತ”ವನ್ನು ಘೋಷಿಸಿತು.

ಇದೆಲ್ಲದರ ನಂತರ ಜನರಿಗೆಲ್ಲ ಲಸಿಕೆ ಸಿಗಲಿದೆಯೇ? ವಿಚಿತ್ರ ಎಂದರೆ ಕೇಂದ್ರ ಸರ್ಕಾರ ಉಚಿತ ಲಸಿಕೆ ಎಂದು ಹೇಳುತ್ತಲೇ ಈಗ ಕಂಪನಿಗಳೊಂದಿಗೆ ವ್ಯವಹಾರ ಮಾಡಿಕೊಂಡು ಮೂರು ದರ ವಿಧಿಸಿದೆ. (ಇದನ್ನು ಆ ಕಂಪನಿಗಳು ವಿಧಿಸಿದ ದರ ಎನ್ನಬಹುದಾದರೂ ಅದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಕಾರಣಕ್ಕೆ ಅದಕ್ಕೆ ಅದೇ ಹೊಣೆ ಹೊತ್ತುಕೊಳ್ಳಬೇಕು). ಸರ್ಕಾರಗಳು ಕಂಪನಿಗಳಿಗೆ ಒಂದು ನ್ಯಾಯಯುತ ದರ ನೀಡಿ, ಲಸಿಕೆಯನ್ನು ಜನಸಾಮಾನ್ಯರಿಗೆ ಉಚಿತ ನೀಡಬೇಕು. ಇದು ಕಾಮನ್‌ಸೆನ್ಸ್ ಅಲ್ಲವೇ?

ಕಚ್ಚಾ ವಸ್ತುಗಳ ಕೊರತೆಯೊಂದಿಗೆ ಇನ್ನೂ ಒದ್ದಾಡುತ್ತಿರುವಾಗ ಜುಲೈ ಅಂತ್ಯದ ವೇಳೆಗೆ ಉತ್ಪಾದನೆಯು ತಿಂಗಳಿಗೆ ಸುಮಾರು 100 ದಶಲಕ್ಷಕ್ಕೆ ಹೆಚ್ಚಾಗುತ್ತದೆ ಎಂದು ಕಂಪನಿಗಳು ಹೇಳುತ್ತಿವೆ. ನಂಬಲು ಆದೀತೆ?

ಭಾರತ್ ಬಯೋಟೆಕ್ ಇನ್ನೂ ಬೆಲೆ ಕುರಿತು ಔಪಚಾರಿಕ ಪ್ರಕಟಣೆ ನೀಡಿಲ್ಲ, ಆದರೂ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ತಮ್ಮ ಕಂಪನಿಯು ತಿಂಗಳಿಗೆ 30 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ ಮತ್ತು ಅದನ್ನು ತಿಂಗಳಿಗೆ 70-75 ಮಿಲಿಯನ್ ಡೋಸ್‌ಗಳಿಗೆ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಆಮದು ಮಾಡಿದ ಸ್ಪುಟ್ನಿಕ್ ವಿ ಲಸಿಕೆಗಳ ಕೆಲವು ಲಕ್ಷ ಡೋಸ್ ಭಾರತದಲ್ಲಿ ಮೇ ಅಥವಾ ಜೂನ್ ವೇಳೆಗೆ ಪ್ರತಿ ಡೋಸ್‌ಗೆ ಸುಮಾರು 750 ರೂ.ಗಳಲ್ಲಿ ಲಭ್ಯವಿರಬೇಕು ಎಂದು ಡಾ ರೆಡ್ಡಿ ಲ್ಯಾಬ್ಸ್ ಏಪ್ರಿಲ್ 21 ರಂದು ಎನ್‌ಡಿಟಿವಿಗೆ ತಿಳಿಸಿದೆ. ಆದರೆ ಸ್ಥಳೀಯವಾಗಿ ತಯಾರಿಸಿದ ಪ್ರಮಾಣಗಳು ಯಾವಾಗ ಲಭ್ಯವಾಗುತ್ತವೆ ಎಂಬುದನ್ನು ಕಂಪನಿಯು ಸೂಚಿಸಿಲ್ಲ. ಅಂದರೆ ಮತ್ತೆ ಗೊಂದಲ!

ಈ ಪರಿಸ್ಥಿತಿ ಇನ್ನೂ ತೆರೆದುಕೊಳ್ಳುತ್ತಿದೆ. ಈ ಸಮಯದಲ್ಲಿ, ಲಭ್ಯವಿರುವ ಲಸಿಕೆಗಳ ಪ್ರಮಾಣದಲ್ಲಿ ಯಾವುದೇ ನಾಟಕೀಯ ಹೆಚ್ಚಳವನ್ನು ನಾವು ನಿರೀಕ್ಷಿಸಲಾಗುವುದಿಲ್ಲ, ಕನಿಷ್ಠ ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಭಾರಿ ಲಸಿಕೆ ಉತ್ಪಾದನೆ ಆಗುವುದಿಲ್ಲ.

ಲಸಿಕೆಗಳಿಗೆ ಸಂಬಂಧಿಸಿದಂತೆ, ಭಾರತದ ಎರಡನೇ ಕೋವಿಡ್ ಅಲೆ ತೀವ್ರವಾಗಿದೆ. ಈಗ ಸರ್ಕಾರ ಎಚ್ಚೆತ್ತುಕೊಂಡಂತೆ ನಟಿಸುತ್ತಿದೆ. ಲಸಿಕೆ ತಯಾರಿಕಾ ಸಾಮರ್ಥ್ಯದ ಮಿತಿಗಳ ಕುರಿತಾದ ಮಾಹಿತಿಯು ಮೊದಲ ದಿನದಿಂದ ಲಭ್ಯವಿತ್ತು , ಆದರೆ ಸರ್ಕಾರವು ಆತ್ಮನಿರ್ಭರ್ ಮಾತ್ರವಲ್ಲದೆ ವಿಶ್ವದ ಸಂರಕ್ಷಕನೂ ತಾನೇ ಎಂಬ ಕುರುಡು ಮತ್ತು ಹುಸಿ ನಂಬಿಕೆಯನ್ನು ಪ್ರಚಾರ ಮಾಡುತ್ತ ಕಾಲ ಕಳೆಯಿತು..

ಸರ್ಕಾರ ಸಂಖ್ಯೆಗಳನ್ನು ನೋಡಲಿಲ್ಲ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಿಕ್ಕ ಅಮೂಲ್ಯ ಸಮಯವನ್ನು ಬಳಸಿಕೊಳ್ಳಲಿಲ್ಲ. ಇಲ್ಲಿವರೆಗೆ ಭಾರತವನ್ನು ‘ಫಾರ್ಮಸಿ ಆಫ್ ದಿ ವರ್ಲ್ಡ್- ಜಾಗತಿಕ ಫಾರ್ಮಸಿ ಅಂಗಡಿ ಎಂದು ಗುರುತಿಸುತ್ತ ಬರಲಾಗಿದೆ. ಆದರೆ ಅಸಮರ್ಥ ನಾಯಕತ್ವ ಮತ್ತು ಹೊಣೆಗೇಡಿ ಆಡಳಿತದ ಕಾರಣಕ್ಕೆ , ಈ ‘ಜಾಗತಿಕ ಔಷಧಾಲಯ” ಈಗ ಆಮದು ಲಸಿಕೆಗಳಿಗಾಗಿ ಕಾಯುತ್ತಿದೆ!
ಥ್ಯಾಂಕ್ಸ್ ಟು ಮೋದಿ ಗವರ್ನಮೆಂಟ್!

  • ಪಿ.ಕೆ.ಮಲ್ಲನಗೌಡರ್
    (ಮಾಹಿತಿ: ದಿ ವೈರ್, ದಿ ಪ್ರಿಂಟ್ ಮತ್ತು ಇತರ ಮೂಲಗಳು)

ಇದನ್ನೂ ಓದಿ: ಲಸಿಕೆಯ ಬೆಲೆ ಘೋಷಿಸಿದ ಸೀರಮ್‌-ಕೇಂದ್ರಕ್ಕಿಂತ ರಾಜ್ಯಕ್ಕೆ ಹೆಚ್ಚು ಬೆಲೆ ನಿಗದಿ; ಕಾಂಗ್ರೆಸ್ ಆರೋಪ

ಮಲ್ಲನಗೌಡರ್‌ ಪಿ.ಕೆ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Wordpress Social Share Plugin powered by Ultimatelysocial
Shares