ಭಾನುವಾರ ನಡೆದ ತಮಿಳುನಾಡು ಸಿಪಿಎಂನ 24 ನೇ ರಾಜ್ಯ ಸಮ್ಮೇಳನದಲ್ಲಿ ದಲಿತ ಸಮುದಾಯದ 64 ವರ್ಷದ ಪಿ ಷಣ್ಮುಗಂ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಕೆ ಬಾಲಕೃಷ್ಣನ್ ಅವರ ಎರಡನೇ ಅವಧಿಯ ಅಧಿಕಾರಾವಧಿಯ ನಂತರ, ರಾಜ್ಯ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಯಿತು. ತಮಿಳುನಾಡಿನಲ್ಲಿ ಮಾರ್ಕ್ಸ್‌ವಾದಿ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ದಲಿತ ನಾಯಕರಾಗಿದ್ದಾರೆ.
ಧರ್ಮಪುರಿಯ ವಾಚತಿಯಲ್ಲಿ ಬುಡಕಟ್ಟು ಜನರಿಗೆ ನ್ಯಾಯಕ್ಕಾಗಿ ಅಪ್ರತಿಮ ಹೋರಾಟವನ್ನು ಮುನ್ನಡೆಸಿ ಗೆದ್ದ ನಾಯಕರಲ್ಲಿ ಷಣ್ಮುಗಂ ಒಬ್ಬರು. 1992ರಲ್ಲಿ ಧರ್ಮಪುರಿ ಜಿಲ್ಲೆಯ ವಚತಿ ಗ್ರಾಮದಲ್ಲಿ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಮನಬಂದಂತೆ ಮನೆಗಳಿಗೆ ನುಗ್ಗಿದ್ದರು. ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ನಿರ್ದಯವಾಗಿ ಥಳಿಸಿ, ಅವರ ಮನೆಗಳನ್ನು ನಾಶಪಡಿಸಲಾಯಿತು. ಸುಮಾರು 18 ಮಹಿಳೆಯರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ಷಣ್ಮುಗಂ ಅವರು ಸಂತ್ರಸ್ತರಿಗೆ ನ್ಯಾಯ ಪಡೆಯಲು ನ್ಯಾಯಾಲಯದಲ್ಲಿ ಮತ್ತು ಹೊರಗೆ ಹೋರಾಟಗಳನ್ನು ನಡೆಸಿದರು, ಆಗಸ್ಟ್ 2023 ರಲ್ಲಿ ಮದ್ರಾಸ್ ಹೈಕೋರ್ಟ್ ಆರೋಪಿಗಳಿಗೆ ಶಿಕ್ಷೆ ದೃಢಪಡಿಸಿತು.
ತಿರುಚ್ಚಿಯ ಲಾಲ್ಗುಡಿ ಸಮೀಪದ ಪೆರುವಲನಲ್ಲೂರು ಗ್ರಾಮದಲ್ಲಿ ಜನಿಸಿದ ಷಣ್ಮುಗಂ, ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು 1979 ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್ಐ) ಗೆ ಸೇರಿದರು. ಅವರು ಇಂದಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯ ರಾಮಸಾಮಿ ತಮಿಳು ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಎಸ್‌ಎಫ್‌ಐನ ರಾಜ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು.
ಷಣ್ಮುಗಂ ಸಿಪಿಎಂನ ಪೂರ್ಣಾವಧಿ ಕಾರ್ಯಕರ್ತರಾದ ನಂತರ, ಅವರು 1992 ರಲ್ಲಿ ತಮಿಳುನಾಡು ಆದಿವಾಸಿಗಳ ಸಂಘದ ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರು 13 ವರ್ಷಗಳಿಂದ ತಮಿಳುನಾಡು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 2020 ರಿಂದ ಅದರ ರಾಜ್ಯಾಧ್ಯಕ್ಷರಾಗಿದ್ದರು.
ದಲಿತ ಸಮುದಾಯದಲ್ಲಿ ಜನಿಸಿದ ಷಣ್ಮುಗಂ ಅವರು ಬುಡಕಟ್ಟು ಜನರ ಉನ್ನತಿಗಾಗಿ ಹೋರಾಟಗಳನ್ನು ನಡೆಸಿದರು. ಅವರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಹೋರಾಡಿದರು. ಸಮುದಾಯ ಪ್ರಮಾಣ ಪತ್ರ ಹಾಗೂ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಒತ್ತಾಯಿಸಿ ಬುಡಕಟ್ಟು ಜನರ ಹೋರಾಟಗಳ ಮುಂಚೂಣಿಯಲ್ಲಿಯೂ ಹೋರಾಟ ನಡೆಸಿದರು. 2006ರ ನವೆಂಬರ್ 24ರಂದು ಆದಿವಾಸಿಗಳು ಭೂಹಕ್ಕು ಹೋರಾಟ ಆರಂಭಿಸಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರವೇ ಐತಿಹಾಸಿಕ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಇದನ್ನೂ ಒದಿ; ಭಾರತ ಸೇರಿದಂತೆ ಜಾಗತಿಕವಾಗಿ ‘ಎಚ್‌ಎಂಪಿವಿ’ ಈಗಾಗಲೇ ಇದೆ: ಐಸಿಎಂಆರ್


