ಅರುಣಾಚಲ ಪ್ರದೇಶದ ಸ್ಥಳಗಳ ಹೆಸರನ್ನು ಬದಲಾಯಿಸುವ ಚೀನಾದ ಇತ್ತೀಚಿನ ಪ್ರಯತ್ನವನ್ನು ಭಾರತ ಸರ್ಕಾರ ಕಠುವಾಗಿ ವಿರೋಧಿಸಿದೆ. ಇದು ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸುವ “ವ್ಯರ್ಥ ಮತ್ತು ಅಸಂಬದ್ಧ” ಪ್ರಯತ್ನ ಎಂದಿದೆ.
ಈಶಾನ್ಯ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಭಾರತದ ನಿಲುವನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬಲವಾಗಿ ಪ್ರತಿಪಾದಿಸಿದ್ದಾರೆ.
“ಭಾರತದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೆಸರಿಡುವ ತನ್ನ ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ಚೀನಾ ಮುಂದುವರಿಸಿರುವುದನ್ನು ನಾವು ಗಮನಿಸಿದ್ದೇವೆ. ನಮ್ಮ ತತ್ವಬದ್ಧ ನಿಲುವಿಗೆ ಅನುಗುಣವಾಗಿ, ನಾವು ಅಂತಹ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ” ಎಂದು ಜೈಸ್ವಾಲ್ ಹೇಳಿದ್ದಾರೆ.
“ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗ. ಅದು ಯಾವಾಗಲೂ ಹಾಗೆಯೇ ಉಳಿಯುತ್ತದೆ. ಈ ನಿರಾಕರಿಸಲಾಗದ ವಾಸ್ತವವನ್ನು ಬದಲಾಯಿಸಲು ಚೀನಾದ ಸೃಜನಶೀಲ ಹೆಸರಿಸುವಿಕೆಯ ಪ್ರಯತ್ನದಿಂದ ಸಾಧ್ಯವಿಲ್ಲ” ಎಂದು ಜೈಸ್ವಾಲ್ ತಿಳಿಸಿದ್ದಾರೆ.
Our response to media queries on renaming places in Arunachal Pradesh by China (May 14, 2025)
🔗 https://t.co/5XtzF8ImUJ pic.twitter.com/1edyuqRpog
— Randhir Jaiswal (@MEAIndia) May 14, 2025
ಅರುಣಾಚಲ ಪ್ರದೇಶದ ಹಲವಾರು ಸ್ಥಳಗಳಿಗೆ ಚೀನಾದ ಹೆಸರುಗಳನ್ನು ಘೋಷಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ರೀತಿ ಈ ಹಿಂದೆಯೂ ಚೀನಾ ಮಾಡಿದೆ. ಇದೀಗ ಮತ್ತೆ ಆ ಪ್ರಯತ್ನ ಮಾಡಿದೆ ಎನ್ನಲಾಗಿದೆ. ಚೀನಾ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಹೇಳಿಕೊಳ್ಳುತ್ತಿದೆ.
ಭಾರತ-ಪಾಕಿಸ್ತಾನ ನಡುವೆ ಸಂಬಂಧ ಹದೆಗೆಟ್ಟಿರುವ ನಡುವೆಯೇ ಚೀನಾ ಜೊತೆ ಮತ್ತೊಮ್ಮೆ ಸಂಘರ್ಷದ ಸೂಚನೆ ಕಂಡು ಬಂದಿದೆ.
ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆಯು ಏಷ್ಯಾದ ಎರಡು ಶಕ್ತಿಗಳ ನಡುವೆ ಘರ್ಷಣೆ ಮುಂದುವರೆದಿದೆ ಎಂಬುವುದನ್ನು ಸೂಚಿಸುತ್ತದೆ. ಅರುಣಾಚಲ ಪ್ರದೇಶವು ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಸ್ಥಿರ ವಿವಾದವಾಗಿ ಉಳಿದಿದೆ.
ಕಾಶ್ಮೀರ ಕುರಿತು ವಿಚಾರ ಸಂಕೀರಣ: ಎರಡು ಕೇರಳ ವಿಶ್ವವಿದ್ಯಾಲಯಗಳಿಂದ ಅನುಮತಿ ನಿರಾಕರಣೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


