ಜಮ್ಮು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಎಸ್‌ಎಸ್‌ಪಿ ರಿಯಾಸಿ ಪರಮವೀರ್ ಸಿಂಗ್ ದೃಢಪಡಿಸಿದ್ದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಮಂಗಳವಾರ (ಆ.26) ಮಧ್ಯಾಹ್ನ 3 ಗಂಟೆ ಸುಮಾರಿಗೆ ವೈಷ್ಣೋದೇವಿ ತೀರ್ಥಯಾತ್ರೆ ಮಾರ್ಗದ ಅಧ್ಕುವರಿಯಲ್ಲಿ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹಲವಾರು ಜನರು ಇನ್ನೂ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಸತತ ನಾಲ್ಕನೇ ದಿನವೂ ಬುಧವಾರ (ಆ.27) ನಿರಂತರ ಮಳೆಯಾಗುತ್ತಿದ್ದು, ದಿಢೀರ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ವ್ಯಾಪಕ ನಾಶನಷ್ಟ ಸಂಭವಿಸಿದೆ. ತಾವಿ, ಚೆನಾಬ್ ಮತ್ತು ಝೀಲಂ ಸೇರಿದಂತೆ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ಸಾರಿಗೆ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಚಕ್ಕಿ ನದಿಯಿಂದ ಉಂಟಾದ ಪ್ರವಾಹ ಪರಿಣಾಮ ಕನಿಷ್ಠ 18 ರೈಲುಗಳ ಸಂಚಾರ ರದ್ದುಗೊಂಡಿದೆ.
ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ದೂರಸಂಪರ್ಕ ಸೇವೆಗಳು ವ್ಯತ್ಯಯಗೊಂಡಿದೆ. ಲಕ್ಷಾಂತರ ಜನರು ನಡುವೆ ಸಂಪರ್ಕ ಕಡಿತಗೊಂಡಿದೆ. ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತ್ವಾರ್ ಪಟ್ಟಣ ಕೇಂದ್ರದಿಂದ ಬಹು ದೂರದಲ್ಲಿರುವ ಮಾರ್ಗಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿ 10 ಮನೆಗಳು ಮತ್ತು ಒಂದು ಸೇತುವೆ ಕೊಚ್ಚಿಕೊಂಡು ಹೋಗಿವೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಕಥುವಾದ ಲಖನ್‌ಪುರ ಗ್ರಾಮದಲ್ಲಿ ಹಲವಾರು ಮಂದಿ ಅರೆಸೈನಿಕ ಸಿಬ್ಬಂದಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸ್ಥಳಾಂತರಿಸುವ ಪ್ರಯತ್ನಗಳು ಮುಂದುವರೆದಿವೆ.
ಜಮ್ಮು ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ತಾವಿ, ಚೆನಾಬ್, ಉಜ್, ರಾವಿ ಮತ್ತು ಬಸಂತೇರ್‌ನಂತಹ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಾಶ್ಮೀರ ಕಣಿವೆಯಲ್ಲಿ, ಝೀಲಂ ನದಿಯು ಸಂಗಮ್ (ಅನಂತ್‌ನಾಗ್)ನಲ್ಲಿ 21 ಅಡಿ ಪ್ರವಾಹ ಎಚ್ಚರಿಕೆ ಮಟ್ಟವನ್ನು ಮೀರಿ ಹರಿಯುತ್ತಿದೆ. ಶ್ರೀನಗರದ ರಾಮ್ ಮುನ್ಶಿ ಬಾಗ್‌ನಲ್ಲಿ ಎಚ್ಚರಿಕೆಯ ಮಟ್ಟ ಸಮೀಪಿಸಿದೆ.
ಜಲಮೂಲಗಳು ಉಕ್ಕಿ ಹರಿಯುತ್ತಿರುವುದರಿಂದ ಮತ್ತು ಹಠಾತ್ ಪ್ರವಾಹಗಳು ಹೆಚ್ಚಾಗುತ್ತಿರುವುದರಿಂದ ಸೇತುವೆಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿ ಹೆಸರು ಬದಲಿಸಲು ಮುಸ್ಲಿಂ ವ್ಯಾಪಾರಿಗೆ ಬೆದರಿಕೆ: ದೆಹಲಿಯಲ್ಲಿ ದ್ವೇಷದ ರಾಜಕಾರಣ ತಾರಕಕ್ಕೇರಿದೆ


