ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ ‘ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು.
ಈ ಮಸೂದೆ 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ-ನರೇಗಾ) ಮತ್ತು ಯೋಜನೆಯ ಹೆಸರು ಮತ್ತು ನಿಬಂಧನೆಗಳನ್ನು ಬದಲಿಸಲಿದೆ.
ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಸ್ಪೀಕರ್ ಸದನವನ್ನು ಮುಂದೂಡಿದರು.
ಮಸೂದೆಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಈ ಶಾಸನವು ಗ್ರಾಮೀಣ ಜನರಿಗೆ ಉದ್ಯೋಗವನ್ನು ಖಚಿತಪಡಿಸುತ್ತದೆ ಮತ್ತು ಮಹಾತ್ಮ ಗಾಂಧಿಯವರ ಸ್ವಾವಲಂಬಿ ಗ್ರಾಮಗಳ ದೃಷ್ಟಿಕೋನವನ್ನು ಈಡೇರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ವಿಬಿ-ಜಿ ರಾಮ್ ಜಿ ಮಸೂದೆಯು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ, ಅವುಗಳನ್ನು ಬಡತನ ಮುಕ್ತಗೊಳಿಸುತ್ತದೆ ಮತ್ತು ಅವುಗಳ ಬೆಳವಣಿಗೆಯ ಪ್ರಯಾಣಕ್ಕೆ ಇಂಧನ ನೀಡುತ್ತದೆ” ಎಂದು ಸಮರ್ಥಿಸಿಕೊಂಡರು.
ವಿಪಕ್ಷಗಳ ಸದಸ್ಯರು ಕಾಯ್ದೆ ಮತ್ತು ಯೋಜನೆಯಿಂದ ಮಹಾತ್ಮ ಗಾಂಧಿಯ ಹೆಸರು ಕೈಬಿಟ್ಟು ಮರುನಾಮಕರಣ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಸರ್ಕಾರ ಗಾಂಧಿಯವರ ಪರಂಪರೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ನರೇಗಾ ಎಂಬ ಹೆಸರು ತೆಗೆದುಹಾಕಿ ಯೋಜನೆಗೆ ಮರುನಾಮಕರಣ ಮಾಡುವ ಮೂಲಕ ಮಸೂದೆಯು ರಾಮರಾಜ್ಯದ ಕಲ್ಪನೆಯನ್ನು ಅಕ್ಷರಶಃ ನಾಶಪಡಿಸುತ್ತಿದೆ ಎಂದು ಹೇಳಿದರು.
ಯೋಜನೆಯಿಂದ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಮೂಲಕ ಸರ್ಕಾರ ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರನ್ನು ‘ಅವಮಾನಿಸಿದೆ. ಸರ್ಕಾರ “ನ ಕಿಸಿ ಕಾ ಸಾಥ್, ನ ಕಿಸಿ ಕಾ ವಿಕಾಸ್, ನ ರಹೀಮ್ ಕಾ, ನ ರಾಮ್ ಕಾ” ದಲ್ಲಿ ನಂಬಿಕೆ ಇಟ್ಟಿದೆ ಎಂಬುವುದನ್ನು ಈ ಮಸೂದೆ ತೋರಿಸಿದೆ ಎಂದರು.
ಮಸೂದೆಯನ್ನು ವಿರೋಧಿಸಿದ ಅವರು, 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಭಾರತದ ಜೀವನೋಪಾಯ ಭದ್ರತೆಯ ಪರಿಕಲ್ಪನೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸಂಸದ ಜೈ ಪ್ರಕಾಶ್, ರಾಷ್ಟ್ರಪಿತನ ಹೆಸರನ್ನು ಶಾಸನದಿಂದ ತೆಗೆದುಹಾಕುವುದು ‘ಅತಿದೊಡ್ಡ ಅಪರಾಧ’ ಎಂದು ಹೇಳಿದರು. ಪ್ರಸ್ತಾವಿತ ಕಾನೂನು ರಾಜ್ಯಗಳಿಗೆ ಹೊಸ ಆರ್ಥಿಕ ಹೊರೆಯನ್ನು ಹೇರುತ್ತದೆ. ಗ್ರಾಮ ಸಭೆಗಳಂತಹ ತಳಮಟ್ಟದ ಸಂಸ್ಥೆಗಳಿಗೆ ಯೋಜನೆಯಡಿ ಕೆಲಸಗಳನ್ನು ನಿರ್ಧರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದರು. ಮಸೂದೆ ಬಡವರ ವಿರೋಧಿ, ದಲಿತ ವಿರೋಧಿ ಶ್ರೀಮಂತರ ಪರ ಎಂದರು.
ಮಸೂದೆಯ ಮೇಲಿನ ಚರ್ಚೆ ಬುಧವಾರ ನಡೆಯಲಿದೆ ಎಂದು ಸ್ಪೀಕರ್ ಓಂ ಬಿರ್ಲಾ ಈ ಹಿಂದೆ ಹೇಳಿದ್ದರು. ಗುರುವಾರ ಸಚಿವರು ಅದಕ್ಕೆ ಉತ್ತರ ನೀಡಿ ನಂತರ ಅದನ್ನು ಅಂಗೀಕಾರಕ್ಕೆ ತೆಗೆದುಕೊಳ್ಳಲಾಯಿತು.
ಮಸೂದೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಸಂಸದ ಬ್ರಿಜ್‌ಮೋಹನ್ ಅಗರ್ವಾಲ್, ಈ ಹಿಂದಿನ ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆಯನ್ನು ‘ಗುಂಡಿ ತೋಡಿ ಗುಂಡಿ ಮುಚ್ಚುವುದಕ್ಕೆ’ ಸೀಮಿತಗೊಳಿಸಿತ್ತು. ಅದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ವಿಫಲವಾಗಿತ್ತು ಮತ್ತು ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಹೊಸ ಕಾನೂನಿನಲ್ಲಿ ‘ರಾಮ್’ ಎಂದು ಸೇರಿಸುವುದರಿಂದ ಭ್ರಷ್ಟಾಚಾರವನ್ನು ತಡೆಯಬಹುದು ಎಂದು ಅಗರ್ವಾಲ್ ಹೇಳಿದರು.
ಮಸೂದೆಯ ಪ್ರಕಾರ, ಕಾಯ್ದೆ ಜಾರಿಗೆ ಬಂದ ಆರು ತಿಂಗಳೊಳಗೆ ರಾಜ್ಯಗಳು ಹೊಸ ಕಾನೂನಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.


