ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ವಕೀಲರ ಪರಿಷತ್ ಸದಸ್ಯರು ಮಾತನಾಡುವುದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಶುಕ್ರವಾರ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ 3 ದಿನಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೊಟ್ಟ ಮೊದಲಿಗೆ ನೀವೆಲ್ಲಾ ನ್ಯಾಯಾಲಯದ ಅಧಿಕಾರಿಗಳು. ನ್ಯಾಯಾಲಯದ ಘನತೆ ಮತ್ತು ಸತ್ಯ ಎತ್ತಿ ಹಿಡಿಯುವುದು ನಿಮ್ಮ ಕೈಯಲ್ಲಿದೆ ಎಂದು ಕಿವಿಮಾತು ಹೇಳಿದರು.
ವಕೀಲರಿಗೂ ತಮ್ಮದೇ ಆದ ರಾಜಕೀಯ ಸೆಳೆತ ಮತ್ತು ನಂಬಿಕೆಗಳಿವೆ. ವಕೀಲರು ನ್ಯಾಯಾಲಯಗಳು ಮತ್ತು ಸಂವಿಧಾನವನ್ನು ಎಲ್ಲದಕ್ಕಿಂತ ಮಿಗಿಲಾಗಿ ಕಾಣಬೇಕು. ಸ್ವತಂತ್ರವಾದ ವಕೀಲರ ಪರಿಷತ್ ಕಾನೂನು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಆಡಳಿತವನ್ನು ರಕ್ಷಿಸುವ ನೈತಿಕ ಭದ್ರಕೋಟೆಯಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಬಾಂಡ್‌ಗಳ ಮಾಹಿತಿ ಚುನಾವಣಾ ಆಯೋಗಕ್ಕೆ ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು. ಈ ನಡುವೆ ರಾಷ್ಟ್ರಪತಿಗೆ ಪತ್ರ ಬರೆದಿದ್ದ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಆದಿಷ್ ಅಗರ್ವಾಲ್, ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರು ಪರಿಶೀಲಿಸುವಂತೆ ನಿರ್ದೇಶನ ನೀಡಲು ಕೋರಿದ್ದರು.
ಈ ವಿಚಾರಕ್ಕೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಆದಿಷ್ ಅಗರ್ವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೇ ಅದಿಷ್ ಅಗರ್ವಾಲ್, ಪ್ರತಿಪಕ್ಷಗಳು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ಸಿಜೆಐಗೆ ಪತ್ರ ಬರೆ ವಕೀಲರಲ್ಲಿ ಒಬ್ಬರು ಎಂಬುವುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ: ಬಿಜೆಪಿಯ ಕೋಮುವಾದಿ ರಾಜಕೀಯ ರಾಜ್ಯದಲ್ಲಿ ಬೇರೂರಲು ಬಿಡುವುದಿಲ್ಲ: ಪಿಣರಾಯಿ ವಿಜಯನ್


