ದೇಶದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಿ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ (67) ಅವರು ಶನಿವಾರ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಕೋವಿಡ್ ನಂತರದ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಕಳೆದ ಮೇ ತಿಂಗಳಲ್ಲಿ ವಿನೋದ್ ದುವಾ ಮತ್ತು ಅವರ ಪತ್ನಿ ಇಬ್ಬರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿನೋದ್ ದುವಾ ಚೇತರಿಸಿಕೊಂಡರೆ ಅವರ ಪತ್ನಿ ನಿಧನರಾಗಿದ್ದರು. ಆದರೆ ಕೋವಿಡ್ ನಂತರದ ಹಲವು ಅನಾರೋಗ್ಯದ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಇದರಿಂದಾಗಿ ಅವರನ್ನು ಗುರುಗ್ರಾಮದಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ದೂರದರ್ಶನ ಮತ್ತು ಎನ್‌ಡಿಟಿವಿಯಲ್ಲಿ ಹಿಂದಿ ಪತ್ರಕರ್ತರಾಗಿ ವಿನೋದ್ ದುವಾ ಪ್ರಸಿದ್ದರಾದವರು. ತಮ್ಮ ನಿಷ್ಟೆಯ ಮತ್ತು ಬದ್ಧತೆಯ ವರದಿಗಾರಿಕೆಗಾಗಿ ಅವರು ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿ ಮತ್ತು 2008 ರಲ್ಲಿ ಭಾರತ ಸರ್ಕಾರದಿಂದ ಪತ್ರಿಕೋದ್ಯಮಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ದುವಾ ಅವರು ತಮ್ಮ ಕಾರ್ಯಕ್ರಮಗಳಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಲು ಹೆಸರುವಾಸಿಯಾಗಿದ್ದರು. ಇತ್ತೀಚೆಗೆ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಪೊಲೀಸರಿಂದ ಹಲವು ತೊಂದರೆಗೂ ಒಳಗಾಗಿದ್ದರು.
ಶನಿವಾರ (ಡಿ.4) ಸಂಜೆ 5 ಗಂಟೆಗೆ ವಿನೋದ್ ದುವಾ ಅವರ ಪುತ್ರಿ ಮಲ್ಲಿಕಾ ದುವಾ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.
—————–
ಇದನ್ನೂ ಓದಿ: ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ (83) ನಿಧನ


